Yuva Rajkumar: ‘ಗೌರವ ಯಾವಾಗಲೂ ಪರಸ್ಪರ ಅಲ್ವಾ?’: ಫ್ಯಾನ್ಸ್ ವಾರ್ ಕುರಿತು ಯುವ ರಾಜ್ಕುಮಾರ್ ಖಡಕ್ ಪ್ರಶ್ನೆ
Dr Rajkumar Family | Puneeth Rajkumar: ಡಾ. ರಾಜ್ಕುಮಾರ್ ಕುಟುಂಬದ ಇಡೀ ಅಭಿಮಾನಿ ಬಳಗವನ್ನೇ ಕೆಲವರು ನಿಂದಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುವ ರಾಜ್ಕುಮಾರ್ ಮೌನ ಮುರಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿತ್ತಾಟ ಜೋರಾಗಿದೆ. ಈ ಕುರಿತಂತೆ ಸ್ಯಾಂಡಲ್ವುಡ್ನ (Sandalwood) ಅನೇಕ ನಟ-ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಿಚ್ಚ ಸುದೀಪ್, ದುನಿಯಾ ವಿಜಯ್, ರಮ್ಯಾ ಸೇರಿದಂತೆ ಹಲವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮಿತಿ ಮೀರಿ ವರ್ತಿಸಬಾರದು ಎಂದು ಎಲ್ಲರೂ ಬುದ್ಧಿ ಹೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಸೆಲೆಬ್ರಿಟಿಗಳು ಹಲವು ಆಯಾಮದಲ್ಲಿ ನೋಡುತ್ತಿದ್ದಾರೆ. ತಂತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳುವುದು ಆಯಾ ಸ್ಟಾರ್ ಹೀರೋಗಳ ಜವಾಬ್ದಾರಿ ಎಂಬ ಅಭಿಪ್ರಾಯ ಕೂಡ ಅನೇಕರಿಂದ ವ್ಯಕ್ತವಾಗಿದೆ. ಫ್ಯಾನ್ಸ್ ವಾರ್ (Fans War) ಕುರಿತಂತೆ ಈಗ ಡಾ. ರಾಜ್ಕುಮಾರ್ ಕುಟುಂಬದ ಕುಡಿ ಯುವ ರಾಜ್ಕುಮಾರ್ (Yuva Rajkumar) ಅವರು ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಅಭಿಮಾನಿ ಬಳಗದ ಮೇಲೆ ಆರೋಪ ಹೊರಿಸುವ ಕೆಲಸ ಆಗುತ್ತಿದೆ. ನಿಜವಾಗಿಯೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು ಸರಿಯಲ್ಲ ಎಂಬ ಅನಿಸಿಕೆ ಹಲವರಿಂದ ಕೇಳಿಬರುತ್ತಿದೆ. ಡಾ. ರಾಜ್ಕುಮಾರ್ ಕುಟುಂಬದ ಇಡೀ ಅಭಿಮಾನಿ ಬಳಗವನ್ನೇ ಕೆಲವರು ನಿಂದಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುವ ರಾಜ್ಕುಮಾರ್ ಮೌನ ಮುರಿದಿದ್ದಾರೆ.
ಇದನ್ನೂ ಓದಿ: Puneeth Rajkumar: ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ಜೀವನದ ವಿವರ: ಫ್ಯಾನ್ಸ್ಗೆ ಹೆಮ್ಮೆ
ಚಿತ್ರರಂಗದಲ್ಲಿ ಅನೇಕ ಮಂದಿ ಹಿರಿಯರು ಇದ್ದಾರೆ. ನಡೆದ ಘಟನೆ ಬಗ್ಗೆ ಈಗಾಗಲೇ ಶಿವರಾಜ್ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾಗಿದೆ. ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನಾಲಿಗೆ ಹರಿಬಿಡುತ್ತಿದ್ದಾರೆ. ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಯುವ ರಾಜ್ಕುಮಾರ್ ಅವರು ಖಡಕ್ ಆಗಿ ಪ್ರಶ್ನೆ ಎಸೆದಿದ್ದಾರೆ. ‘ಗೌರವ ಯಾವಾಗಲೂ ಪರಸ್ಪರ ಅಲ್ವಾ’ ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: Fans War: ಅಭಿಮಾನಿಗಳ ನಡತೆ ಬಗ್ಗೆ ರಮ್ಯಾ ಬೇಸರ: ದೀರ್ಘ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ ನಟಿ
‘ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು. ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳೇಕಂದ್ರೆ, ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ, ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು’ ಎಂದು ಯುವ ರಾಜ್ಕುಮಾರ್ ಪತ್ರ ಆರಂಭಿಸಿದ್ದಾರೆ.
‘ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ. ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ. ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ’ ಎಂದಿದ್ದಾರೆ ಯುವ ರಾಜ್ಕುಮಾರ್
‘ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ. ಕಾಣುವ ಬುದ್ಧಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ’ ಎಂದು ಯುವ ರಾಜ್ಕುಮಾರ್ ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.