ಥಿಯೇಟರ್ ಮಾಫಿಯಾಕ್ಕೆ ನಾನೂ ಬಲಿ ಆಗಿದ್ದೇನೆ: ಝೈದ್ ಖಾನ್
Zaid Khan Cult movie: ರಾಜ್ಯ ಸರ್ಕಾರದ ಜನಪ್ರಿಯ ಸಚಿವರಲ್ಲಿ ಒಬ್ಬರಾಗಿರುವ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ರಾಜಕೀಯ ಪ್ರಭಾವ, ಹಣದ ಹಿನ್ನೆಲೆ ಎಲ್ಲ ಇದ್ದರೂ ತಾವೂ ಸಹ ರಾಜ್ಯದಲ್ಲಿ ಸಕ್ರಿಯವಾಗಿರುವ ಚಿತ್ರಮಂದಿರ ಮಾಫಿಯಾಕ್ಕೆ ಬಲಿ ಆಗಿದ್ದಾಗಿ ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಚಿತ್ರಮಂದಿರಗಳ (Theater) ಮಾಫಿಯಾ ಒಂದು ನಡೆಯುತ್ತಿದೆ. ದೊಡ್ಡವರು, ಹಣವಿದ್ದವರು, ರೀಚ್ ಇದ್ದವರು ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿ ಇರಿಸಿಕೊಳ್ಳುತ್ತಾರೆ. ತಮಗೆ ಬೇಕಾದವರಿಗೆ ಮಾತ್ರವೇ ಚಿತ್ರಮಂದಿರಗಳನ್ನು ಬಿಟ್ಟುಕೊಡುತ್ತಾರೆ. ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ ವಾರದ ಬಳಿಕ ಚಿತ್ರಮಂದಿರದಿಂದ ಸಿನಿಮಾ ಎತ್ತಂಗಡಿ ಆಗುವಂತೆ ಮಾಡುತ್ತಾರೆ. ಈ ಚಿತ್ರಮಂದಿರ ಮಾಫಿಯಾ ಇಂದಾಗಿ ಹಲವು ಸಣ್ಣ ಸಿನಿಮಾಗಳು ಭಾರಿ ಹೊಡೆತ ತಿಂದಿವೆ. ಇಂಥಹಾ ಹಲವು ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ. ಇದೀಗ ಪ್ರಭಾವಿ ನಟರೊಬ್ಬರೆ ತಾವೂ ಸಹ ಈ ಚಿತ್ರಮಂದಿರ ಮಾಫಿಯಾದಿಂದ ಸಮಸ್ಯೆ ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಜನಪ್ರಿಯ ಸಚಿವ ಜಮೀರ್ ಅಹ್ಮದ್ ಅವರ ಪುತ್ರ ನಟ ಝೈದ್ ಖಾನ್ ದಾವಣಗೆರೆಯಲ್ಲಿ ಮಾತನಾಡಿದ್ದು, ‘ನಾನು ಸಹ ಈ ಚಿತ್ರಮಂದಿರ ಮಾಫಿಯಾದ ಸಂತ್ರಸ್ತ’ ಎಂದಿದ್ದಾರೆ. ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದಲ್ಲಿ ಝೈದ್ ಖಾನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ದಾವಣಗೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಝೈದ್ ಖಾನ್, ಚಿತ್ರಮಂದಿರ ಮಾಫಿಯಾ ಬಗ್ಗೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೈದ್ ಖಾನ್, ‘ಜನವರಿ 23ರಂದು ‘ಕಲ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾರೂ ಚಿತ್ರಮಂದಿರಗಳಲ್ಲಿ ನೋಡಿ ಎಂದು ಮನವಿ ಮಾಡಿದರು. ಚಿತ್ರಮಂದಿರಗಳ ಒಂದು ದೊಡ್ಡ ಮಾಫಿಯಾ ಇದೆ, ನಾನು ಕೂಡ ಅ ಮಾಫಿಯಾಗೆ ಸಿಲುಕಿ ಒಡ್ಡಾಡಿದ್ದೇನೆ, ಪ್ರಭಾವಿ ಹಿನ್ನೆಲೆ, ಹಣ ಇದ್ದ ನನಗೆ ಈ ರೀತಿ ಅನುಭವವಾಗಿದೆ. ಏನು ಇಲ್ಲದೆ ಸಿನಿಮಾ ಮಾಡಿದವರು ಈ ಮಾಫಿಯಾಗೆ ಸಿಲುಕಿ ಕಣ್ಣೀರಿಡುತ್ತಿದ್ದಾರೆ. ನನ್ನ ಮೊದಲ ಸಿನಿಮಾ 100 ಚಿತ್ರಮಂದಿರ ಸಿಕ್ತು, ಬಳಿಕ 50 ಕ್ಕೆ ಬಂತು ಹೊಸಬರಿಗೆ ಥಿಯೇಟರ್ ಸಿಗದೆ ನಲುಗಿ ಹೋಗುತ್ತಿದ್ದಾರೆ’ ಎಂದರು ಝೈದ್ ಖಾನ್.
ಇದನ್ನೂ ಓದಿ:ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
‘ನನಗೆ ಪ್ರಭಾವಿ ಹಿನ್ನೆಲೆ ಇತ್ತು ಹಾಗಾಗಿ ಅಷ್ಟಾದರೂ ಚಿತ್ರಮಂದಿರ ಸಿಕ್ತು ಹೊಸಬರಿಗೆ ಅನ್ಯಾಯ ಆಗುತ್ತಿದೆ. ಜನವರಿ 23 ಕ್ಕೆ ನನ್ನದು ಹಾಗು ದುನಿಯಾ ವಿಜಯ್ ಸರ್ ಸಿನಿಮಾ ಮಾತ್ರವೇ ಬಿಡುಗಡೆ ಆಗುತ್ತಿವೆ. ರಾಜ್ಯದಲ್ಲಿ ಇರುವ ಒಟ್ಟು ಚಿತ್ರಮಂದಿರಗಳಲ್ಲಿ 40% ರಷ್ಟು ನಮಗೆ ಸಿಕ್ಕು 60% ರಷ್ಟು ಥಿಯೇಟರ್ ಗಳು ದುನಿಯಾ ವಿಜಯ್ ಅವರಿಗೆ ಸಿಗಲಿವೆ’ ಎಂದಿದ್ದಾರೆ ಝೈದ್ ಖಾನ್.
ಝೈದ್ ಖಾನ್ ನಟಿಸಿರುವ ‘ಕಲ್ಟ್’ ಸಿನಿಮಾನಲ್ಲಿ ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ನಟಿಸಿದ್ದಾರೆ. ತೆಲುಗಿನ ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಮಾದರಿಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಪ್ರೀತಿಯಲ್ಲಿ ಮೋಸ ಹೋಗುವ ಹುಡುಗರ ಬಗ್ಗೆ ಸಿನಿಮಾದ ಕತೆ ಇರಲಿದೆ. ಸಿನಿಮಾದ 40% ಚಿತ್ರೀಕರಣವನ್ನು ಹಂಪಿ ಮತ್ತು ವಿಜಯನಗರದಲ್ಲಿ ನಡೆದಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಲೋಕಿ ಸಿನಿಮಾಸ್ ನಿರ್ಮಾಣ ಮಾಡಿವೆ. ಸಿನಿಮಾ ನಿರ್ದೇಶನ ಮಾಡಿರುವುದು ಅನಿಲ್ ಕುಮಾರ್. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




