Ugadi 2023: ಈ ಯುಗಾದಿಗೆ ವರಕವಿ ದ.ರಾ ಬೇಂದ್ರೆಯವರ ಯುಗಾದಿ ಮೆಲಕು ಹಾಕೋಣ

ಯುಗಾದಿ ಸಮಯದಲ್ಲಿ ಕವಿತೆ ಎಂದರೇ ನೆನಪಾಗೋದು ವರಕವಿ ದ.ರಾ ಬೇಂದ್ರೆ ಅವರ ಯುಗಾದಿ ಕವಿತೆ. ನಾಡಿನ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಕವಿತೆ ಹಾದು ಹೋಗದೆ ಇರದು. ಇಲ್ಲಿದೆ ಬೇಂದ್ರೆಯವರ ಯುಗಾದಿ ಕವಿತೆ.

Ugadi 2023: ಈ ಯುಗಾದಿಗೆ ವರಕವಿ ದ.ರಾ ಬೇಂದ್ರೆಯವರ ಯುಗಾದಿ ಮೆಲಕು ಹಾಕೋಣ
ದ. ರಾ ಬೇಂದ್ರೆ
Follow us
ವಿವೇಕ ಬಿರಾದಾರ
|

Updated on: Mar 21, 2023 | 7:00 AM

ಯುಗಾದಿ (Ugadi) ಹೊಸ ಯುಗದ ಆದಿ. ವಸಂತ ಕಾಲದಲ್ಲಿ ಬರುವ ಹಬ್ಬಕ್ಕೆ ಹಸಿರಿನಿಂದ ಕೂಡಿದ ಪ್ರಕೃತಿ ಸ್ವಾಗತ ಕೋರುತ್ತದೆ. ಈ ಹಬ್ಬದ ವಿಶೇಷತೆ ಬೇವು ಬೆಲ್ಲ ಸವಿಯೋದು. ಜೀವನದ ಕಹಿ ಮತ್ತು ಸಿಹಿ ದಿನಗಳನ್ನು ಸಮಾನವಾಗಿ ಸ್ವೀಕರಿಸುವುದು. ಯುಗಾದಿ ಸಮಯದಲ್ಲಿ ಕವಿತೆ ಎಂದರೇ ನೆನಪಾಗೋದು ವರಕವಿ ದ.ರಾ ಬೇಂದ್ರೆ ಅವರ ಯುಗಾದಿ ಕವಿತೆ. ನಾಡಿನ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಕವಿತೆ ಹಾದು ಹೋಗದೆ ಇರದು.

ವರಕವಿ ದ.ರಾ. ಬೇಂದ್ರೆಯವರ ‘ಯುಗಾದಿ’

1. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

2. ಹೊಂಗೆಹೂವ ತೊಂಗಲಲ್ಲಿ ಭೃಂಗದ ಸಂಗೀತಕೇಲಿ ಮತ್ತೆ ಕೇಳಿಬರುತಿದೆ. ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ.

3. ಕಮ್ಮನೆ ಬಾಣಕ್ಕೆ ಸೋತು ಜುಮ್ಮನೆ ಮಾಮರವು ಹೂತು ಕಾಮಗಾಗಿ ಕಾದಿದೆ. ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಲು ಕೋದಿದೆ.

4. ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ! ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ?

5. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ? ಎಲೆ ಸನತ್ಕುಮಾರದೇವ! ಸಲೆ ಸಾಹಸಿ ಚಿರಂಜೀವ! ನಿನಗೆ ಲೀಲೆ ಸೇರದೋ?

6. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ!