ಮೀನಿನ ಎಣ್ಣೆಯ ಆರೋಗ್ಯ ಪ್ರಯೋಜನ
Image Credit source: Getty Images
ಮೀನಿನ ಎಣ್ಣೆ (Fish Oil) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅನಾರೋಗ್ಯದಿಂದ ದೂರವಿರಲು ಇಂತಹ ಆಹಾರಗಳ ಸೇವನೆ ಮಾಡುವುದು ಬಹಳ ಮುಖ್ಯವಾಗಿದೆ. ಅಲ್ಲದೆ ಮೀನಿನ ಎಣ್ಣೆಯಲ್ಲಿ ಒಮೆಗಾ- 3 (Omega- 3) ಕೊಬ್ಬಿನಾಮ್ಲಗಳು ಮತ್ತು ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ (Vitamin D) ಯಂತಹ ಅನೇಕ ಪೋಷಕಾಂಶಗಳಿವೆ. ಇವೆಲ್ಲವೂ ಆರೋಗ್ಯಕ್ಕೆ ಬಹಳ ಮುಖ್ಯವಾಗಿ ಬೇಕಾಗುವಂತಹ ಅಂಶಗಳಾಗಿವೆ. ಅದರಲ್ಲಿಯೂ ಮಾಂಸಹಾರ ಸೇವನೆ ಮಾಡದವರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಕೊರತೆಯನ್ನು ನೀಗಿಸಲು ಮೀನಿನ ಎಣ್ಣೆಯ ಸೇವನೆ ಮಾಡಬಹುದು. ಇವುಗಳು ಕ್ಯಾಪ್ಸುಲ್ ರೂಪದಲ್ಲಿ ಲಭ್ಯವಿರುವುದರಿಂದ ಯಾವುದೇ ತೊಂದರೆ ಇಲ್ಲದೆ ಸೇವನೆ ಮಾಡಬಹುದು. ಹಾಗಾದರೆ ಇದನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಸಿಗುವ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಬೇಕು? ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.
ಮೀನಿನ ಎಣ್ಣೆ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:
- ಸಾಮಾನ್ಯವಾಗಿ ಮೀನಿನ ಎಣ್ಣೆಯಲ್ಲಿ ಒಮೆಗಾ 3 ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಈ ಎಣ್ಣೆ ಸೇವನೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.
- ಮೀನಿನ ಎಣ್ಣೆ ಸೇವನೆಯಿಂದ ದೇಹದಲ್ಲಿನ ಹೃದಯರಕ್ತನಾಳಗಳ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
- ಮೀನಿನ ಎಣ್ಣೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕೂಡ ಗಣನೀಯವಾಗಿ ಕಡಿಮೆ ಆಗುತ್ತದೆ ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಸಹ ಕಡಿಮೆ ಮಾಡುತ್ತದೆ.
- ಮೀನಿನ ಎಣ್ಣೆ ಟ್ರೈಗ್ಲಿಸರೈಡ್ ಅನ್ನು ಕರಗಿಸಲು ಸಹಾಯ ಮಾಡುವುದಲ್ಲದೆ ರಕ್ತದಲ್ಲಿನ ಕೊಬ್ಬು, ರಕ್ತ ಸಂಚಾರ ಸೇರಿದಂತೆ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.
- ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಮೀನಿನ ಎಣ್ಣೆ ತುಂಬಾ ಪ್ರಯೋಜನಕಾರಿ. ಇವುಗಳ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಮೀನಿನ ಎಣ್ಣೆಯು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
- ಮೀನಿನ ಎಣ್ಣೆಯು ನಿಯಮಿತ ಸೇವನೆಯು ಸಂಧಿವಾತದಂತಹ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.
- ಒಮೆಗಾ 3 ಕೊಬ್ಬಿನಾಮ್ಲಗಳ ಸೇವನೆ ಮೆದುಳಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು, ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಆಲ್‌ಝೈಮರ್ ಕಾಯಿಲೆ ಬರುವುದನ್ನು ತಡೆಯುತ್ತದೆ.
- ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮೀನಿನ ಎಣ್ಣೆ ಸಹ ಸಹಾಯ ಮಾಡುತ್ತದೆ.
- ಇದರಲ್ಲಿರುವ ಒಮೆಗಾ- 3 ಕೊಬ್ಬಿನಾಮ್ಲಗಳು ಶೀತ ಮತ್ತು ಜ್ವರ ಬಾರದಂತೆ ತಡೆಯುತ್ತದೆ. ಅಲ್ಲದೆ ಇದು ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹ ಸಹಕಾರಿಯಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ