ವ್ಯಕ್ತಿಯ ಹೊಟ್ಟೆಯೊಳಗೆ 12 ಇಂಚಿನ ಜೀವಂತ ಮೀನು, ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರಿಗೆ ಶಾಕ್
ಇತ್ತೀಚೆಗಿನ ದಿನಗಳಲ್ಲಿ ಅಚ್ಚರಿ ಮೂಡಿಸುವಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ. ವಿಯೆಟ್ನಾಂನ ಉತ್ತರದ ಕ್ವಾಂಗ್ ನಿನ್ಹ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬನ ಗುದನಾಳದ ಮೂಲಕ 30 ಸೆಂ ಮೀ ಜೀವಂತ ಮೀನೊಂದು ಹೊಟ್ಟೆ ಸೇರಿ ಕರುಳಿನಲ್ಲಿ ರಂಧ್ರಗಳನ್ನು ಕೊರೆದ ಪ್ರಕರಣವೊಂದು ವೈದ್ಯರನ್ನೇ ಬೆಚ್ಚಿ ಬೀಳಿಸಿದೆ. ಕೊನೆಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಆ ಮೀನನ್ನು ಹೊರ ತೆಗೆದಿದ್ದು, ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ನಂಬುವುದಕ್ಕೂ ಕಷ್ಟವಾಗುತ್ತದೆ. ಇಂತಹದೊಂದು ಪ್ರಕರಣವೊಂದು ವಿಯೆಟ್ನಾಂನ ಉತ್ತರದ ಕ್ವಾಂಗ್ ನಿನ್ಹ್ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. 34 ವರ್ಷದ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ವೈದ್ಯರನ್ನು ಭೇಟಿಯಾದಾಗ ಹೊಟ್ಟೆಯೊಳಗೆ ಏನೋ ವಸ್ತುವಿರುವುದು ವೈದ್ಯರ ಗಮನಕ್ಕೆ ಬಂದಿದೆ.
ಹೌದು, ಕಿಬ್ಬೊಟ್ಟೆ ನೋವು, ವಿಪರೀತವಾದ ಸೆಳೆತ ಎಂದು ಆಸ್ಪತ್ರೆ ಸೇರಿದ ವ್ಯಕ್ತಿಯನ್ನು ಹೈ ಹಾ ಜಿಲ್ಲಾ ವೈದ್ಯಕೀಯ ಕೇಂದ್ರದಲ್ಲಿ ಎಕ್ಸ್-ರೇ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆಯಲ್ಲಿ ಹೊಟ್ಟೆಯಲ್ಲಿ ವಸ್ತುವೊಂದು ಪತ್ತೆಯಾಗಿದೆ. ಇದರಿಂದಾಗಿ ‘ಪೆರಿಟೋನಿಟಿಸ್’ ಎಂಬ ಸೋಂಕು ಕಾಣಿಸಿಕೊಂಡಿದೆ. ಅದು ಹೊಟ್ಟೆ ನೋವಿಗೆ ಕಾರಣ ಎಂದು ತಿಳಿದ ವೈದ್ಯರು ಕ್ಷಣವೇ ವ್ಯಕ್ತಿಗೆ ತುರ್ತು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸರ್ಪಸುತ್ತು ಬಗ್ಗೆ ಆತಂಕ ಬೇಡ, ಇಲ್ಲಿದೆ ಸರಳ ಮನೆ ಮದ್ದುಗಳು
ಆದರೆ ವ್ಯಕ್ತಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದಾಗ ಹೊಟ್ಟೆಯೊಳಗೆ 30 ಸೇಂ ಮೀ ಉದ್ದದ ಜೀವಂತ ಮೀನು ಇರುವುದನ್ನು ಕಂಡು ವೈದ್ಯರೂ ಬೆಚ್ಚಿ ಬಿದಿದ್ದಾರೆ. ಗುದನಾಳದ ಮೂಲಕ ಜೀವಂತ ಮೀನು ಹೊಟ್ಟೆ ಸೇರಿರುವುದು ಎನ್ನುವ ಶಂಕೆ ವ್ಯಕ್ತವಾಗಿದೆ. ಅದಲ್ಲದೇ ಈ ಜೀವಂತ ಮೀನು ಕರುಳಿನಲ್ಲಿ ರಂಧ್ರಗಳನ್ನು ಕೊರೆದು ಹಾನಿ ಮಾಡಿದೆ. ಶಸ್ತ್ರಚಿಕಿತ್ಸೆಯ ವೇಳೆ ಹೊಟ್ಟೆಯೊಳಗಿದ್ದ ಜೀವಂತ ಮೀನು ಹಾಗೂ ಹಾನಿಗೊಳಗಾದ ಅಂಗಾಂಶವನ್ನು ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಚೇತರಿಕೆಯನ್ನು ಕಾಣುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ