ಕೊರೋನಾ ವೈರಸ್ ಶೇಕಡಾ 45ರಷ್ಟು ಮೊಬೈಲ್ ಬಳಕೆಯಿಂದ ಹರಡುತ್ತದೆ: ಸಂಶೋಧನೆ
ಪ್ರಸ್ತುತ ಜಗತ್ತಿನಲ್ಲಿ ಎಲ್ಲಾ ಜನರು ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಕಾರಣ ಜನರು ಹೆಚ್ಚಾಗಿ ಮೊಬೈಲ್ನಲ್ಲಿಯೇ ಕಾಲ ಕಳೆಯುತ್ತಿದ್ದರು. ಆದರೆ ಈ ಮೊಬೈಲ್ಗಳಿಂದಲೇ ಶೇಕಡಾ 45% ನಷ್ಟು ಕೊರೋನಾ ವೈರಸ್ ಹರಡಿವೆ ಎಂಬ ಕರೋನಾ ಸೋಂಕಿನ ಕುರಿತು ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.
2 ವರ್ಷಗಳ ಹಿಂದೆ ಕೊರೋನಾ ಮಹಾಮಾರಿಯ ಕಾರಣದಿಂದ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಲಾಕ್ಡೌನ್ ಜಾರಿಯಲ್ಲಿತ್ತು. ವೈರಸ್ ವೇಗವಾಗಿ ಹರಡುತ್ತದೆ ಎಂಬ ಕಾರಣದಿಂದ ಸಾಮಾಜಿಕ ಅಂತರ ಸೇರಿದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಜೊತೆಗೆ ನೈರ್ಮಲ್ಯದ ವಿಚಾರವಾಗಿಯೂ ಜನರಲ್ಲಿ ಸಾಕಷ್ಟು ಜಾಗೃತಿಯನ್ನು ಮೂಡಿಸಲಾಗಿತ್ತು. ಹೀಗೆ ಜನರು ಮನೆಯಿಂದ ಹೊರ ಬರುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಕುವಂತದ್ದು, ಕೈಗಳಿಗೆ ಸಾನಿಟೈಸರ್ ಹಚ್ಚುವಂತಹದ್ದು, ಆಗಾಗ್ಗೆ ಕೈ ತೊಳೆದುಕೊಳ್ಳುವುದು ಈ ರೀತಿಯ ನೈರ್ಮಲ್ಯದ ಕಾಳಜಿ ವಹಿಸುತ್ತಿದ್ದರು. ಆದರೆ ಆ ಸಮಯದಲ್ಲಿ ಅತೀ ಹೆಚ್ಚು ಸಮಯವನ್ನು ಮೊಬೈಲ್ ಫೋನ್ ನಲ್ಲಿ ಕಳೆಯುತ್ತಿದ್ದರು. ಹಾಗೂ ಆ ಫೋನ್ ಗಳ ನೈರ್ಮಲ್ಯದ ಬಗ್ಗೆ ಯಾರು ಹೆಚ್ಚಾಗಿ ಗಮನ ಕೊಡಲಿಲ್ಲ. ಈ ಕಾರಣದಿಂದ ಈ ಮೊಬೈಲ್ ಫೋನ್ ಬಳಕೆಯು ಕೂಡಾ ಕೊರೋನಾ ವೈರಸ್ ಹೆಚ್ಚಾಗಲು ಕಾರಣವಾಗಿದೆ ಎಂದು ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆಯೊಂದು ಹೇಳಿದೆ.
ಸಂಶೋಧನಾ ವರದಿ ಏನು ಹೇಳುತ್ತದೆ?
ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಕೊರೋನಾ ವೈರಸ್ ಹೆಚ್ಚಾಗುವಲ್ಲಿ ಮೊಬೈಲ್ ಗಳ ಪಾತ್ರದ ಕುರಿತು 10 ದೇಶಗಳಲ್ಲಿ, 15 ಅಧ್ಯಯನಗಳನ್ನು ನಡೆಸಿದರು. ಇದರಲ್ಲಿ 2019 ರಿಂದ 2023 ರ ವರೆಗೆ ಆಸ್ಪತ್ರೆಯ ಅಧ್ಯಯನ ವಿಭಾಗದಲ್ಲಿ SARS-Cov-2 ಸೋಂಕಿಗೆ ಸಂಬಂಧಿಸಿದಂತೆ ಮೊಬೈಲ್ ಫೋನ್ ಗಳನ್ನು ಪರೀಕ್ಷಿಸಲಾಯಿತು. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಶೇಕಡಾ 45% ರಷ್ಟು ಫೋನ್ ಗಳು ಕೋವಿಡ್-19 ರ ವೈರಸ್ ನ್ನು ಹೊಂದಿದ್ದವು. ಎಂದು ಈ ಅಧ್ಯಯನವು ಕಂಡುಹಿಡಿದಿದೆ. ಸಿಡ್ನಿಯಲ್ಲಿ ಸಹ, ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ, ಅರ್ಧದಷ್ಟು ಮೊಬೈಲ್ ಫೋನ್ ಗಳು ಕೊರೋನಾ ವೈರಸ್ ನಿಂದ ಕಲುಷಿತಗೊಂಡಿದ್ದವು. 511 ಫೋನ್ ಗಳಲ್ಲಿ 231 ಫೋನ್ ಗಳು ಅಂದರೆ ಶೇಕಡಾ 45% ರಷ್ಟು ಫೋನ್ ಗಳಲ್ಲಿ ಕೊರೋನಾ ವೈರಸ್ ಇರುವಿಕೆಯು ಪತ್ತೆಯಾಗಿದೆ. ಇದರಿಂದ ಮೊಬೈಲ್ ಫೋನ್ ಗಳು ಕೊರೋನಾ ಸೋಂಕನ್ನು ಹರಡಬಹುದು ಎಂದು ತೀರ್ಮಾನಿಸಲಾಯಿತು. ಈ ವರದಿಯನ್ನು ಜರ್ನಲ್ ಆಫ್ ಇನ್ಫೆಕ್ಷನ್ ಆಂಡ್ ಪಬ್ಲಿಕ್ ಹೆಲ್ತ್ ನಿಯತಕಾಲಿಕೆಯಲ್ಲಿಯೂ ಪ್ರಕಟಿಸಲಾಗಿದೆ.
ಮೊಬೈಲ್ ಫೋನ್ ನಲ್ಲಿ ಎಷ್ಟು ಸಮಯದವರೆಗೆ ವೈರಸ್ ಜೀವಂತವಾಗಿರುತ್ತದೆ:
ಲಾಕ್ ಡೌನ್, ಸಾಮಾಜಿಕ ಅಂತರ ಸೇರಿದಂತೆ ಇತ್ಯಾದಿ ನೈರ್ಮಲ್ಯದ ಬಗ್ಗೆ ಜಾಗೃತಿ ವಹಿಸಿದರೂ ಕೊರೋನಾ ಸಾಂಕ್ರಾಮಿಕವು ಹೆಚ್ಚಾಗಿತ್ತು. ಈ ವೈರಸ್ ಸೋಂಕು ಹೆಚ್ಚಾಗುವಲ್ಲಿ ಮೊಬೈಲ್ ಫೋನ್ಗಳ ಪಾತ್ರ ದೊಡ್ಡದು ಎಂದು ಬಾಂಡ್ ವಿಶ್ವವಿದ್ಯಾನಿಲಯದ ಪ್ರಧಾನ ಸಂಶೋಧಕ ಡಾ.ಲೊಟ್ಟಿ ತಾಜೌರಿ ಹೇಳಿದ್ದಾರೆ. SARS-Cov-2 ವೈರಸ್ ಯಾವುದೇ ಮೊಬೈಲ್ ಫೋನ್ ನಲ್ಲಿ 28 ದಿನಗಳ ವರೆಗೆ ಜೀವಂತವಾಗಿರುತ್ತದೆ ಎಂದು ಹಿಂದಿನ ಸಂಶೋಧನೆ ತೋರಿಸಿತ್ತು.
ಇದನ್ನೂ ಓದಿ: ಸೂಕ್ತ ತೂಕದಿಂದ ಉತ್ತಮ ಆರೋಗ್ಯ; 6 ಕಾರಣಗಳು ಇಲ್ಲಿವೆ
ಪ್ರಸ್ತುತ ಜಗತ್ತಿನಲ್ಲಿ 7 ಬಿಲಿಯನ್ಗಳಿಗಿಂತಲೂ ಹೆಚ್ಚು ಮೊಬೈಲ್ ಫೋನ್ ನ್ನು ಬಳಸಲಾಗುತ್ತಿದೆ. ಅವುಗಳು ನಮ್ಮ ಮೂರನೇ ಕೈಯಾಗಿ ಕಾರ್ಯನಿರ್ವಹಿಸುತ್ತವೆ. ಎಷ್ಟೇ ಬಾರಿ ಕೈಗಳನ್ನು ತೊಳೆದರೂ ಮೊಬೈಲ್ ಸ್ಪರ್ಶಿಸಿದ ನಂತರ ತಕ್ಷಣವೇ ವೈರಸ್ ಗೆ ಕೈಗಳಿಗೆ ಅಂಟಿಕೊಳ್ಳುತ್ತವೆ ಎಂದು ಡಾ. ತಾಜೌರಿ ಹೇಳಿದ್ದಾರೆ. ಆಸ್ಪತ್ರೆಯ ಮಕ್ಕಳ ತೀವ್ರಾ ನಿಗಾ ಮತ್ತು ಮಕ್ಕಳ ಐಸಿಯು ವಾರ್ಡ್ನಲ್ಲಿ ನಡೆದ ಈ ಅಧ್ಯಯನವು 26 ಆರೋಗ್ಯ ವೃತ್ತಿಪರರ ಮೊಬೈಲ್ ಫೋನ್ ಗಳಲ್ಲಿ 11,163 ರೋಗಕಾರಕಗಳು ಇರುವುದನ್ನು ಕಂಡುಹಿಡಿದಿದೆ. ಇದರಲ್ಲಿ ವೈರಸ್ ಗಳು ಮತ್ತು ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯಾಗಳು ಸಹ ಇದ್ದವು.
ಹಾಗಾಗಿ ಪ್ರತಿಬಾರಿ ಮೊಬೈಲ್ ಫೋನ್ ಬಳಸುವ ಮುನ್ನ ಟಚ್ ಸ್ಕ್ರೀನ್ ಸ್ಮಾರ್ಟ್ ಫೋನ್ ನ್ನು ಸ್ವಚ್ಛಗೊಳಿಸಲು ಕನಿಷ್ಠ 70% ಅಲ್ಕೋಹಾಲ್ ಅಂಶವನ್ನು ಹೊಂದಿರು ವೈಪ್ ಗಳು ಅಥವಾ ಸ್ಪ್ರೇ ಬಳಬೇಕು. ಹಾಗೂ ಸ್ಯಾನಿಟೈಸರ್ ನ್ನು ಕೂಡಾ ಉಪಯೋಗಿಸಬೇಕು.