
ಈಗ ಎಲ್ಲಾ ಕಡೆ ಲಿಫ್ಟ್ (Lift) ವ್ಯವಸ್ಥೆ ಬಂದು ಜನರು ಮೆಟ್ಟಿಲು (Climbing Stairs) ಹತ್ತುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿದ್ದಾರೆ. ಸದಾ ಗಡಿಬಿಡಿಯಲ್ಲಿರುವ ನಮ್ಮ ಜನರಿಗೆ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಅಥವಾ ಇಳಿಯುವುದಕ್ಕೆ ಸಮಯ ವ್ಯರ್ಥ ಮಾಡಲು ಇಷ್ಟವಿರುವುದಿಲ್ಲ. ಇದರ ಬದಲು ನಿಮಿಷಗಳಲ್ಲಿ ಒಂದು ಫ್ಲೋರ್ ನಿಂದ ಮತ್ತೊಂದಕ್ಕೆ ಕರೆದೊಯ್ಯುವ ಲಿಫ್ಟ್ ಇದ್ದರೆ ಸಾಕು ಎಂದು ಯೋಚಿಸುತ್ತಾರೆ. ಈ ರೀತಿ ಶಾರ್ಟ್ ಕಟ್ ಎಲ್ಲಾ ಸಮಯದಲ್ಲಿಯೂ ಒಳ್ಳೆಯದಲ್ಲ ಎಂಬುದನ್ನು ಎಂದಿಗೂ ಮರೆಯಬಾರದು. ನಿಮಗೆ ಗೊತ್ತಾ? ವ್ಯಾಯಾಮ (exercise) ಮಾಡಲು ಸಮಯವಿಲ್ಲದವರಿಗೆ ಅಥವಾ ಜಿಮ್ (Gym) ಸೌಲಭ್ಯವಿಲ್ಲದವರಿಗೆ ಮೆಟ್ಟಿಲುಗಳನ್ನು ಹತ್ತುವುದು ತುಂಬಾ ಪ್ರಯೋಜನಕಾರಿ. ಇದು ಕಷ್ಟ ಎನಿಸಿದರೂ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ಏನೆಲ್ಲಾ ಉಪಯೋಗವಿದೆ? ಈ ಅಭ್ಯಾಸ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆಟ್ಟಿಲುಗಳನ್ನು ಹತ್ತುವುದು ಕೂಡ ಒಂದು ವ್ಯಾಯಾಮ. ಇದು ನಿಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗ. ಮಾತ್ರವಲ್ಲ ಇದು ನೀಡುವ ಪ್ರಯೋಜನಗಳನ್ನು ತಿಳಿದರೆ ಆಶ್ಚರ್ಯವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯ ತಜ್ಞರು ಕೂಡ ಮೆಟ್ಟಿಲು ಹತ್ತುವ ಅಭ್ಯಾಸ ಇಟ್ಟುಕೊಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಅಧಿಕ ತೂಕದ ಸಮಸ್ಯೆ ಇರುವವರು ತೂಕವನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಲು ಈ ಅಭ್ಯಾಸ ಬಹಳ ಪರಿಣಾಮಕಾರಿಯಾಗಿದೆ. ಇದು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಕೂಡ ಮೆಟ್ಟಿಲುಗಳನ್ನು ಹತ್ತುವುದರಿಂದ ಕ್ಯಾಲೊರಿಗಳನ್ನು ಸುಡಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿವೆ.
ಈ ಮೆಟ್ಟಿಲು ಹತ್ತುವ ಸರಳ ವ್ಯಾಯಾಮದಿಂದ, ಕಾಲಿನ ಸ್ನಾಯುಗಳು ಬಲಗೊಳ್ಳುತ್ತದೆ. ನಿಯಮಿತವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ಸ್ನಾಯುಗಳು ದುರ್ಬಲವಾಗುವುದನ್ನು ತಡೆಯಬಹುದು. ಮಾತ್ರವಲ್ಲ ಮೆಟ್ಟಿಲುಗಳನ್ನು ಹತ್ತುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಮೂಳೆಗಳ ಆರೋಗ್ಯವನ್ನು ಬಲಪಡಿಸುತ್ತದೆ. ಜೊತೆಗೆ ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ.
ಮೆಟ್ಟಿಲುಗಳನ್ನು ಹತ್ತುವುದು ದೇಹದಲ್ಲಿನ ಕೊಬ್ಬನ್ನು ಸುಡಲು ಸಹಾಯ ಮಾಡುವ ಉತ್ತಮ ವ್ಯಾಯಾಮ. ನಿಯಮಿತವಾಗಿ ಮಾಡಿದರೆ, ಅದು ಬೇಗನೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಮೆಟ್ಟಿಲುಗಳನ್ನು ಹತ್ತುವುದು ಸಹಿಷ್ಣುತೆಯನ್ನು ಹೆಚ್ಚಿಸುವ ಏರೋಬಿಕ್ ವ್ಯಾಯಾಮವಾಗಿದ್ದು, ನಿಯಮಿತವಾಗಿ ರೂಢಿಸಿಕೊಂಡ್ರೆ ತಾಳ್ಮೆ ಹೆಚ್ಚಾಗುತ್ತದೆ.
ಇದನ್ನೂ ಓದಿ: Morning Walk: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಏನಾಗುತ್ತದೆ ಗೊತ್ತಾ?
ನಡಿಗೆಯಂತಹ ಚಟುವಟಿಕೆಗಳಿಗೆ ಹೋಲಿಸಿದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ಹೆಚ್ಚಿನ ಕ್ಯಾಲೊರಿಗಳು ಕಡಿಮೆಯಾಗುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಮೆಟ್ಟಿಲುಗಳನ್ನು ಹತ್ತುವುದರಿಂದ ನಿಮಿಷಕ್ಕೆ ಸುಮಾರು 8 ರಿಂದ 11 ಕ್ಯಾಲೊರಿಗಳು ಸುಡುತ್ತವೆ ಎಂದು ಗಮನಿಸಲಾಗಿದೆ. ವಾರದಲ್ಲಿ ಐದು ದಿನಗಳು ಸುಮಾರು 30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದರಿಂದ ತೂಕ ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ