ಮೆಟ್ಟಿಲು ಹತ್ತುವಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ? ಇಲ್ಲಿದೆ ನೋಡಿ ಸಲಹೆ
ಇಂದಿನ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಿಂದ ಆರೋಗ್ಯ ಸಂಪೂರ್ಣವಾಗಿ ಕೈಕೊಟ್ಟಿದೆ. ಆದರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಸರಿಯಾಗಿ ಚಿಕಿತ್ಸೆ ಪಡೆಯದೇ ಹೋದರೆ ಅದುವೇ ಮುಂದೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಮೆಟ್ಟಿಲು ಹತ್ತುವ ತಪ್ಪಾದ ಭಂಗಿ ಹಾಗೂ ಕೆಲವು ತಪ್ಪುಗಳು ತೀವ್ರ ತೊಡಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೀಲು ನೋವಿನ ಸಮಸ್ಯೆಯಿಂದ ಪಾರಾಗಲು ಮೆಟ್ಟಿಲು ಹತ್ತುವ ಸರಿಯಾದ ವಿಧಾನ ಅಳವಡಿಸಿಕೊಳ್ಳುವ ಬಗ್ಗೆ ತಜ್ಞರು ಸಲಹೆ ನೀಡಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ.

ಈಗಿನ ಕಾಲದಲ್ಲಿ ವಯಸ್ಸು ನಲವತ್ತೈದು ದಾಟಿದ ಕೂಡಲೇ ಸೊಂಟ ನೋವು, ಮಂಡಿನೋವು, ಕೀಲು ನೋವು ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆ (health problem) ಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುತ್ತಿದ್ದಂತೆ ಕೆಲವರಿಗೆ ನಡೆಯಲು, ಓಡಾಡಲು ಕಷ್ಟ ಆಗುತ್ತದೆ. ಅದಲ್ಲದೇ, ಈ ಮೆಟ್ಟಿಲುಗಳನ್ನು ಹತ್ತುವುದು (climbing stairs) ನಿಯಮಿತ ಚಟುವಟಿಕೆಯಾಗಿದ್ದು, ಸರಿಯಾಗಿ ಮಾಡದಿದ್ದರೆ ಇದರಿಂದ ಗಂಭೀರ ಸಮಸ್ಯೆಯನ್ನು ಎದುರಿಸಬಹುದು ಎಂದು ಇಂಡಿಯನ್ ಎಕ್ಸ್ಪ್ರೆಸ್ (indian express) ನೊಂದಿಗೆ ಮಾತನಾಡಿದ ಮುಂಬೈನ ಪ್ಯಾರೆಲ್‌ನಲ್ಲಿರುವ ಗ್ಲೆನೆಗಲ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ, ಮೂಳೆಚಿಕಿತ್ಸಾ ತಜ್ಞರು ಡಾ. ಅನುಪ್ ಖತ್ರಿ (Dr Anup Khatri, senior consultant, orthopedics, Gleneagles Hospital, Parel, Mumbai) ಈ ಬಗ್ಗೆ ವಿವರಿಸಿದ್ದಾರೆ.
ಮೂಳೆ ಶಸ್ತ್ರಚಿಕಿತ್ಸಕ ಡಾ. ರಾಜೀವ್ ರಾಜ್ ಚೌಧರಿ (Orthopaedic surgeon Dr Rajiv Raj Choudhry ) ಅವರು ಇನ್‌ಸ್ಟಾಗ್ರಾಮ್ ಶೇರ್ ಮಾಡಿಕೊಂಡ ರೀಲ್ಸ್ ನಲ್ಲಿ ತಪ್ಪಾದ ಹತ್ತುವಿಕೆಯ ಭಂಗಿಯು ಕೀಲುಗಳನ್ನು ಹೇಗೆ ಆಯಾಸಗೊಳಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದು, ಮೆಟ್ಟಿಲು ಹತ್ತುವ ಸರಿಯಾದ ವಿಧಾನದ ಬಗ್ಗೆಯೂ ಹೇಳಿದ್ದಾರೆ. “ಅರ್ಧ ಕಾಲನ್ನು ಮೆಟ್ಟಿಲುಗಳ ಮೇಲೆ ಇಡುವ ಬದಲು, ಮೆಟ್ಟಿಲುಗಳನ್ನು ಹತ್ತುವಾಗ ನಿಮ್ಮ ಪೂರ್ಣ ಕಾಲನ್ನು ಇಟ್ಟುಕೊಳ್ಳಿ. ಬಲ ಕಾಲನ್ನು ಮೊದಲು ಇರಿಸಿಕೊಳ್ಳಿ. ಒಂದು ವೇಳೆ ನೀವು ದುರ್ಬಲ ಕಾಲನ್ನು ಮೊದಲು ಇರಿಸಿದರೆ ಮೊಣಕಾಲುಗಳಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
ಡಾ. ಅನುಪ್ ಖತ್ರಿ ಅವರು, ‘ಇನ್ಸ್ಟಾಗ್ರಾಮ್ ನಲ್ಲಿ ಡಾ. ಚೌಧರಿಯವರ ವಿವರಿಸಿದ ಕೆಲವು ಅಂಶಗಳನ್ನು ಒಪ್ಪಿಕೊಂಡಿದ್ದು, ನೇರವಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮೆಟ್ಟಿಲುಗಳನ್ನು ಹತ್ತುವಾಗ ನೀವು ನಿಮ್ಮ ದೇಹವು ಇದಕ್ಕೆ ಸಿದ್ಧವಾಗಿದೆಯೇ ಎಂದು ಖಚಿತ ಪಡಿಸಿ ಕೊಳ್ಳುವುದು ಮುಖ್ಯ. ಕೆಲವರು ರಭಸವಾಗಿ ಮೆಟ್ಟಿಲು ಹತ್ತುತ್ತಾರೆ. ಈ ರೀತಿ ಮಾಡುವ ಬದಲು ನಿಧಾನವಾಗಿ ಸಮಯ ತೆಗೆದುಕೊಂಡು ಮೆಟ್ಟಿಲು ಹತ್ತಿ. ಇದು ನಿಮ್ಮ ಮೊಣಕಾಲುಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದದೆ ‘ ಎಂದು ತಿಳಿಸಿದ್ದಾರೆ.
ಇನ್ನು, ಹ್ಯಾಂಡ್ರೈಲ್ ಅನ್ನು ಬಳಸುವುದು ಸಹಾಯವಾಗುತ್ತದೆ. ಸಾಧ್ಯವಾದರೆ, ಹತ್ತುವಾಗ ಭಾರವಾದ ವಸ್ತುಗಳನ್ನು ಹೊತ್ತುಕೊಳ್ಳುವುದನ್ನು ತಪ್ಪಿಸಿ, ಇದು ನಿಮ್ಮ ಮೊಣಕಾಲುಗಳು ಮತ್ತು ಸೊಂಟದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಿ ನೋವನ್ನು ಹೆಚ್ಚಿಸುತ್ತದೆ. ಉತ್ತಮ ಗುಣಮಟ್ಟದ ಮೆತ್ತನೆಯ ಶೂ ಹಾಗೂ ಪಾದರಕ್ಷೆಗಳನ್ನು ಧರಿಸಿ. ನೀವು ಮೆಟ್ಟಿಲುಗಳನ್ನು ಹತ್ತುವಾಗ ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ನೋವನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭೂಮಿಗೆ ಮರಳಿದ ಬಳಿಕ ಸುನಿತಾ ವಿಲಿಯಮ್ಸ್ ಮೊದಲು ಸವಿದ ಆಹಾರವಿದು
‘ದಿನದಲ್ಲಿ ನಲವತ್ತೈದು ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳು ಹಾಗೂ ವ್ಯಾಯಾಮ ತೊಡಗಿಸಿಕೊಳ್ಳುವುದರಿಂದ ಮೊಣಕಾಲುಗಳು ಬಲಗೊಳ್ಳುತ್ತದೆ ಹಾಗೂ ಇದರಿಂದ ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ. ಹೆಚ್ಚಿನ ಸಮಯ ಕುಳಿತುಕೊಳ್ಳದೇ ನಡೆಯುವುದು ಕೂಡ ಮೊಣಕಾಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಡೆಯಲು ಸಾಧ್ಯವಾಗದಿದ್ದರೆ, ಸ್ವಲ್ಪ ನಡೆದರೂ ನೋವು ಕಾಣಿಸಿಕೊಂಡರೆ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ’ ಎಂದಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ