ಬೇಸಿಗೆಯಲ್ಲಿ ಶೂನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಹಾಗಾದ್ರೆ ಹೀಗೆ ಮಾಡಿ ನೋಡಿ
ಬೇಸಿಗೆಯಲ್ಲಿ ಧರಿಸುವ ಬಟ್ಟೆ ಹಾಗೂ ಪಾದರಕ್ಷೆಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು. ಈ ಋತುವಿನಲ್ಲಿ ಶೂ ಧರಿಸುವುದು ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಕೂಡ ಸ್ಟೈಲಿಶ್ ಆಗಿ ಕಾಣಲು ಅದನ್ನೇ ಧರಿಸುತ್ತಾರೆ. ಅದಲ್ಲದೇ, ಪಾದಗಳಿಗೆ ಉಸಿರಾಡಲು ಅವಕಾಶ ಕೊಡದೇ ದಿನಾಪೂರ್ತಿ ಶೂ ಹಾಕಿಕೊಳ್ಳುತ್ತಾರೆ. ಇದರಿಂದ ಪಾದಗಳು ಬೆವರಿ ಕ್ರಮೇಣವಾಗಿ ಶೂಗಳು ದುರ್ಗಂಧ ಬೀರುತ್ತದೆ. ಈ ಶೂವಿನ ಕೆಟ್ಟ ವಾಸನೆಯಿಂದ ಮುಜುಗರಕ್ಕೆ ಈಡಾಗುವ ಸಾಧ್ಯತೆಯೇ ಹೆಚ್ಚು. ಶೂ ದುರ್ನಾತ ತಡೆಗಟ್ಟಲು ಕೆಲವು ಟಿಪ್ಸ್ ಇಲ್ಲಿದೆ .

ಸಾಂದರ್ಭಿಕ ಚಿತ್ರ
ಕೆಲವರು ಬೇಸಿಗೆ (summer) ಯಿರಲಿ, ಮಳೆಗಾಲವಿರಲಿ ಶೂ ಇಲ್ಲದೇ ಹೊರಗೆ ಕಾಲಿಡುವುದೇ ಇಲ್ಲ. ಆದರೆ ಈ ಬೇಸಿಗೆಯಲ್ಲಿ ಪಾದಗಳು ಹೆಚ್ಚಾಗಿ ಬೆವರುತ್ತವೆ. ಈ ಬೆವರು ಶೂ (shoe) ಮತ್ತು ಸಾಕ್ಸ್ (socks) ಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾದ ಜೊತೆ ಬೆರೆತು ದುರ್ವಾಸನೆ (bad smell) ಬೀರುವ ಆಮ್ಲ ಉತ್ಪಾದನೆ ಮಾಡುತ್ತದೆ. ಇದರಿಂದ ಶೂನಿಂದ ಮೂಗು ಮುಚ್ಚಿಕೊಳ್ಳುವಷ್ಟು ಕೆಟ್ಟ ವಾಸನೆ ಬರುತ್ತದೆ. ಎಷ್ಟೇ ಚೆನ್ನಾಗಿ ಶೂ ತೊಳೆದರೂ ಈ ಕೆಟ್ಟ ವಾಸನೆ ಮಾತ್ರ ಕಡಿಮೆಯಾಗಲ್ಲ. ಹೀಗಾದಾಗ ಈ ಕೆಲವು ಸಲಹೆ (tips) ಪಾಲಿಸಿದ್ರೆ ಅತ್ಯಂತ ಸುಲಭವಾಗಿ ಶೂನಿಂದ ಹೊರ ಹೊಮ್ಮವ ದುರ್ನಾತಕ್ಕೆ ಬ್ರೇಕ್ ಹಾಕಬಹುದು.
ಶೂವಿನಿಂದ ಬರುವ ಕೆಟ್ಟ ವಾಸನೆ ತೊಡೆದು ಹಾಕಲು ಇಲ್ಲಿದೆ ಟಿಪ್ಸ್
- ಹಣ್ಣಿನ ಸಿಪ್ಪೆ ಬಳಸಿ : ಶೂನಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಕಿತ್ತಳೆ, ಕಾಲೋಚಿತ ಅಥವಾ ನಿಂಬೆ ಸಿಪ್ಪೆಗಳನ್ನು ತೆಗೆದುಕೊಂಡು ರಾತ್ರಿಯಲ್ಲಿ ಶೂಗಳ ಒಳಗೆ ಇರಿಸಿ. ಬೆಳಗ್ಗೆ ಆ ಸಿಪ್ಪೆಗಳನ್ನು ತೆಗೆದು ಹಾಕಿದ್ರೆ ಶೂಗಳು ದುರ್ನಾತ ಬಿರುವುದಿಲ್ಲ.
- ಬಿಸಿಲಿನಲ್ಲಿ ಇರಿಸಿ : ಶೂಗಳಿಂದ ವಾಸನೆಯನ್ನು ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಶೂಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಒಣಗಿಸುವುದು. ಇದು ಶೂಗಳಲ್ಲಿನ ತೇವಾಂಶ ಕಡಿಮೆ ಮಾಡಿ ಬ್ಯಾಕ್ಟೀರಿಯಾಗಳು ಸಾಯುತ್ತದೆ. ಇದರಿಂದ ಕ್ರಮೇಣವಾಗಿ ಶೂ ನಿಂದ ಬೀರುವ ಕೆಟ್ಟ ವಾಸನೆ ದೂರವಾಗುತ್ತದೆ. ಹೀಗಾಗಿ ನೀವು ಶೂಗಳನ್ನು ಧರಿಸಿದ ನಂತರ ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಇರಿಸುವ ಅಭ್ಯಾಸವಿರಲಿ.
- ವಿನೆಗರ್ : ವಿನೆಗರ್ ಸಹಾಯದಿಂದ ಶೂಗಳಿಂದ ಹೊರಹೊಮ್ಮುವ ಕೆಟ್ಟ ವಾಸನೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ, ಸ್ವಲ್ಪ ಬಿಳಿ ವಿನೆಗರ್ ಸ್ಪ್ರೇ ಬಾಟಲಿಯಲ್ಲಿ ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಶೂಗಳ ಒಳಗೆ ಸಿಂಪಡಿಸಿ. ಈ ಬಿಳಿ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
- ಟೀ ಬ್ಯಾಗ್‌ಗಳು : ಟೀ ಬ್ಯಾಗ್‌ಗಳಲ್ಲಿರುವ ಟ್ಯಾನಿನ್‌ಗಳು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತವೆ. ಶೂಗಳ ಒಳಗೆ ಟೀ ಬ್ಯಾಗ್‌ಗಳನ್ನು ಇರಿಸಿ, ಇದು ಕೆಲವೇ ನಿಮಿಷಗಳಲ್ಲಿ ಶೂಗಳಿಂದ ಬರುವ ವಾಸನೆಯನ್ನು ಕಡಿಮೆ ಮಾಡುತ್ತದೆ.
- ಅಡುಗೆ ಸೋಡಾ : ಶೂಗಳ ಕೆಟ್ಟವಾಸನೆ ತೊಲಗಿಸಲು ಅಡುಗೆ ಸೋಡಾ ಪರಿಣಾಮಕಾರಿಯಾಗಿದೆ. ಹೀಗಾಗಿ ಶೂ ಒಳಗೆ ಸ್ವಲ್ಪ ಅಡುಗೆ ಸೋಡಾ ಸಿಂಪಡಿಸಿ, ಇಡೀ ರಾತ್ರಿ ಹಾಗೆಯೇ ಬಿಟ್ಟು ಬಿಡಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಕೆಟ್ಟ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಸಹಾಯ ಮಾಡುತ್ತದೆ.
- ಕರ್ಪೂರ : ರಾತ್ರಿ ಒಂದೆರಡು ಕರ್ಪೂರವನ್ನು ಶೂಒಳಗೆ ಹಾಕಿ ಗಾಳಿಯಾಡದ ಹಾಗೆ ಮುಚ್ಚಿಡಿ. ಇದು ಬೂಟು ಒಳಗಿನ ಬ್ಯಾಕ್ಟೀರಿಯಾವನ್ನು ನಾಶ ಪಡಿಸಿ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.
- ಲ್ಯಾವೆಂಡರ್ ಎಣ್ಣೆ : ಶೂಯೊಳಗೆ ಒಂದೆರಡು ಹನಿ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ. ಈ ಎಣ್ಣೆಯು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಒಳಗೊಂಡಿದ್ದು, ಇದು ಕೆಟ್ಟ ವಾಸನೆ ಕಡಿಮೆ ಮಾಡಿ ಉತ್ತಮ ವಾಸನೆ ಬೀರುವಂತೆ ಮಾಡುತ್ತದೆ.
- ಬಿರಿಯಾನಿ ಎಲೆ : ಬಿರಿಯಾನಿ ಎಲೆಯನ್ನು ಆಹಾರದ ರುಚಿ ಘಮ ಹೆಚ್ಚಿಸಲು ಬಳಸಲಾಗುತ್ತದೆ. ಈ ಎಲೆಯನ್ನು ರಾತ್ರಿ ಶೂ ಒಳಗೆ ಇಟ್ಟು ಬೆಳಗ್ಗೆ ತೆಗೆಯುವುದರಿಂದ ಶೂನಿಂದ ಬರುವ ದುರ್ನಾತಕ್ಕೆ ಮುಕ್ತಿ ದೊರೆಯುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Wed, 2 April 25