Guava Leaves Benefits: ಪೇರಳೆ ಹಣ್ಣಷ್ಟೇ ಅಲ್ಲ, ಈ ಎಲೆಯ ರಸದಲ್ಲಿದೆ ಆರೋಗ್ಯ
ಎಲ್ಲರೂ ಇಷ್ಟ ಪಟ್ಟು ಸವಿಯುವ ಹಣ್ಣುಗಳಲ್ಲಿ ಪೇರಳೆ ಕೂಡ ಒಂದು. ಈ ಹಣ್ಣಿನಂತೆ ಅದರ ಎಲೆಗಳು ಕೂಡಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪೇರಳೆ ಎಲೆಯೂ ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಎಲೆಗಳನ್ನು ಹಾಗೆಯೇ ಜಗಿಯಬಹುದು ಇಲ್ಲವಾದರೆ ಇದರ ರಸವನ್ನು ತೆಗೆದು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗಾದ್ರೆ ಪೇರಳೆ ಎಲೆಯ ರಸ ಸೇವನೆಯಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳ ಕುರಿತಾದ ಮಾಹಿತಿ ಇಲ್ಲಿದೆ.

ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಎಲ್ಲರಿಗೂ ಚಿರಪರಿಚಿತವಾಗಿದೆ. ಅತ್ಯಂತ ರುಚಿಕರ ಹಣ್ಣನ್ನು ನಾವೆಲ್ಲರೂ ಕೂಡ ಸೇವಿಸಿರುತ್ತೇವೆ. ಆದರೆ ಈ ಹಣ್ಣಿನಷ್ಟೇ ಇದರ ಎಲೆಯೂ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಪೇರಳೆ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್-ಸಿ, ಪೊಟ್ಯಾಸಿಯಮ್ ಹಾಗೂ ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ದಿನನಿತ್ಯದ ಈ ಎಲೆಯ ಜ್ಯೂಸ್ ಕುಡಿದರೆ ಆರೋಗ್ಯದಲ್ಲಿ ಸಾಕಷ್ಟು ಲಾಭಗಳಿವೆ. ಈ ಕೆಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಪೇರಳೆ ಎಲೆಯ ರಸದ ಆರೋಗ್ಯ ಪ್ರಯೋಜನಗಳು * ಜೀರ್ಣಕ್ರಿಯೆ ಸುಧಾರಿಸುತ್ತದೆ : ಅಜೀರ್ಣ ಸಮಸ್ಯೆ ಇರುವವರಿಗೆ ಪೇರಳೆ ಎಲೆಯ ರಸ ಸೇವನೆ ಪರಿಣಾಮಕಾರಿಯಾಗಿದೆ. ಇದು ಫೈಬರ್‌ನ ಉತ್ತಮ ಮೂಲವಾಗಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಹೀಗಾಗಿ ಅಜೀರ್ಣ ಸಮಸ್ಯೆ ಇರುವವರು ಈ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದು ಪ್ರಯೋಜನಕಾರಿಯಾಗಿದೆ.
* ಬೇಧಿ ಸಮಸ್ಯೆಗೆ ರಾಮಬಾಣ : ಬೇಧಿ ಸಮಸ್ಯೆಯಿಂದ ಬಲುಳುತ್ತಿದ್ದರೆ ಪೇರಳೆ ಸೊಪ್ಪಿನ ರಸವನ್ನು ಸೇವಿಸುವುದು ತುಂಬಾನೇ ಒಳ್ಳೆಯದು. ಬೇಧಿ ಉಂಟಾದಾಗ ಈ ಎಲೆಯ ಹಿಂಡಿ ಒಂದು ಚಮಚ ರಸ ಕುದಿಸಿ ಕುಡಿದರೆ ಬೇಧಿ ತಕ್ಷಣವೇ ನಿಲ್ಲುತ್ತದೆ.
* ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ : ಪೇರಳೆ ಎಲೆಯ ರಸ ಸೇವನೆಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ರೋಗಾಣುಗಳ ವಿರುದ್ಧ ದೇಹ ಹೋರಾಡುವಂತೆ ಮಾಡುವುದಲ್ಲದೆ, ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿ ಆರೋಗ್ಯ ಸಮಸ್ಯೆ ಬಾರದಂತೆ ತಡೆಯುತ್ತದೆ.
ಮತ್ತಷ್ಟು ಓದಿ: ಪೇರಳೆ ತಿನ್ನಲು ಸರಿಯಾದ ಸಮಯ ಯಾವಾಗ? ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು
* ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮ : ಪೇರಳೆ ಎಲೆಗಳ ರಸ ಕುಡಿಯುವುದರಿಂದ ತ್ವಚೆ ಮತ್ತು ಕೂದಲಿನ ಸಮಸ್ಯೆಗಳು ದೂರಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಗುಣಗಳಿದ್ದು, ಚರ್ಮ ಕಾಂತಿ ಹೆಚ್ಚಾಗುವಂತೆ ಮಾಡುವುದಲ್ಲದೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
* ಹೃದಯದ ಆರೋಗ್ಯ ಕಾಪಾಡುತ್ತದೆ : ಪೇರಳೆ ಎಲೆಗಳ ರಸ ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
* ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ಪೇರಳೆ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಈ ಎಲೆಗಳಲ್ಲಿ ಪಾಲಿಫಿನಾಲ್ ಗುಣಲಕ್ಷಣಗಳನ್ನು ಹೊಂದಿವೆ. ಹೀಗಾಗಿ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಸಹಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




