ಹೊಕ್ಕುಳಿಗೆ, ಪಾದದ ಅಂಗಾಲುಗಳಿಗೆ, ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು ಎಷ್ಟು ಸುರಕ್ಷಿತ? ತಿಳಿಯಬೇಕಾದ ಸಂಗತಿಗಳಿವು

ದೇಸಿ ತುಪ್ಪವನ್ನು ಪಾದದ ಅಂಗಾಲುಗಳು, ಹೊಕ್ಕುಳಿ ಮತ್ತು ಕಣ್ಣುರೆಪ್ಪೆಗಳಿಗೆ ಹಚ್ಚುವ ಪದ್ಧತಿ ಹಲವರಲ್ಲಿದೆ. ಆದರೆ ಇವುಗಳಿಂದ ಜೀರ್ಣಕ್ರಿಯೆ ಸುಧಾರಣೆ, ಹಾರ್ಮೋನ್ ಸಮತೋಲನ ಅಥವಾ ದೃಷ್ಟಿ ಹೆಚ್ಚಳವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಪಾದಗಳ ಒಣ ಚರ್ಮಕ್ಕೆ ತುಪ್ಪ ಸಹಾಯ ಮಾಡಬಹುದು. ಗಾಯ ಮತ್ತು ಕಣ್ಣುಗಳ ಹತ್ತಿರ ತುಪ್ಪ ಬಳಸುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆಯೂ ತಿಳಿದುಕೊಳ್ಳುವುದು ಮುಖ್ಯ.

ಹೊಕ್ಕುಳಿಗೆ, ಪಾದದ ಅಂಗಾಲುಗಳಿಗೆ, ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು ಎಷ್ಟು ಸುರಕ್ಷಿತ? ತಿಳಿಯಬೇಕಾದ ಸಂಗತಿಗಳಿವು
Desi Ghee Benefits
Image Credit source: Getty Images

Updated on: Nov 18, 2026 | 4:30 PM

ದೇಸಿ ತುಪ್ಪ ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿದೆ. ಅಡುಗೆಯಲ್ಲಿ ಬಳಸುವುದರ ಜೊತೆಗೆ, ಚರ್ಮದ ಆರೈಕೆ ಮತ್ತು ಮನೆಮದ್ದಾಗಿಯೂ ಹಲವರು ಇದನ್ನು ಬಳಸುತ್ತಾರೆ. ರಾತ್ರಿ ಮಲಗುವ ಮೊದಲು ಪಾದದ ಅಂಗಾಲುಗಳಿಗೆ ತುಪ್ಪ ಹಚ್ಚುವುದು, ಹೊಕ್ಕುಳಿಗೆ ತುಪ್ಪ ಹಾಕುವುದು ಮತ್ತು ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು ಕೆಲವು ಸಾಂಪ್ರದಾಯಿಕ ಪದ್ಧತಿಗಳಾಗಿವೆ. ಆದರೆ ಇವುಗಳಿಂದ ನಿಜವಾಗಿಯೂ ಆರೋಗ್ಯ ಪ್ರಯೋಜನಗಳಿವೆಯೇ ಮತ್ತು ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಾದದ ಅಂಗಾಲುಗಳಿಗೆ ತುಪ್ಪ ಹಚ್ಚುವುದು

ಸಾಮಾನ್ಯವಾಗಿ ಪಾದಗಳು ಒಣಗಿ ಬಿರುಕು ಬಿಟ್ಟಾಗ ತುಪ್ಪ ಹಚ್ಚುವುದರಿಂದ ಚರ್ಮದ ತೇವಾಂಶ ಉಳಿಸಿಕೊಳ್ಳಲು ಸಹಾಯವಾಗಬಹುದು. ತುಪ್ಪ ಚರ್ಮದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸಿ ತೇವಾಂಶ ಹೊರಹೋಗುವುದನ್ನು ಕಡಿಮೆ ಮಾಡಬಹುದು. ಪಾದಗಳಿಗೆ ಮಸಾಜ್ ಮಾಡುವುದರಿಂದಲೂ ವಿಶ್ರಾಂತಿ ದೊರೆಯಬಹುದು. ಆದರೆ ತುಪ್ಪ ಹಚ್ಚುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಅಥವಾ ದೇಹದ ಆಂತರಿಕ ಉಷ್ಣತೆ ನಿಯಂತ್ರಣವಾಗುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

Loading...

ಹೊಕ್ಕುಳಿಗೆ ತುಪ್ಪ ಹಚ್ಚುವುದು

ಸಾಮಾನ್ಯವಾಗಿ ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಹಾರ್ಮೋನ್‌ಗಳ ಸಮತೋಲನ ಕಾಪಾಡುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ಪ್ರಯೋಜನಗಳನ್ನು ದೃಢಪಡಿಸುವ ವೈಜ್ಞಾನಿಕ ಸಾಕ್ಷ್ಯ ಲಭ್ಯವಿಲ್ಲ. ಆದರೆ ಕೆಲವರಿಗೆ ಇದು ಪ್ರಯೋಜನಕಾರಿಯಾಗಬಹುದು. ಇಲ್ಲವಾದಲ್ಲಿ ಚರ್ಮ ಒಣಗಿದ್ದರೆ ಆ ಭಾಗಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಹಚ್ಚುವುದು ಕೂಡ ಒಳ್ಳೆಯದು.

ಇದನ್ನೂ ಓದಿ: ಟೀ ಮತ್ತು ಬಿಸ್ಕತ್ತುಗಳನ್ನೇ ಬೆಳಗಿನ ಉಪಾಹಾರವಾಗಿ ಸೇವಿಸುತ್ತಿದ್ದೀರಾ? ಈ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ!

ಸಣ್ಣ ಗಾಯ ಅಥವಾ ಸುಟ್ಟ ಜಾಗಕ್ಕೆ ತುಪ್ಪ ಹಚ್ಚುವುದು

ಸುಟ್ಟ ಜಾಗ ಅಥವಾ ಸಣ್ಣ ಗಾಯಕ್ಕೆ ತುಪ್ಪ ಹಚ್ಚುವ ಅಭ್ಯಾಸ ಕೆಲವರಲ್ಲಿದೆ. ಆದರೆ ಅಡುಗೆಗೆ ಬಳಸುವ ತುಪ್ಪವನ್ನು ಗಾಯದ ಮೇಲೆ ಹಚ್ಚುವುದು ಸೂಕ್ತವಲ್ಲ. ಇದರಿಂದ ಸೋಂಕಿನ ಅಪಾಯ ಹೆಚ್ಚಬಹುದು. ಸಣ್ಣ ಸುಟ್ಟ ಗಾಯವಾದರೆ ಸುಮಾರು 20 ನಿಮಿಷ ತಂಪಾದ ಹರಿಯುವ ನೀರಿನ ಅಡಿಯಲ್ಲಿ ಇರಿಸಬೇಕು. ಐಸ್, ತುಪ್ಪ ಅಥವಾ ಟೂತ್‌ಪೇಸ್ಟ್ ಹಚ್ಚಬಾರದು. ಆಳವಾದ ಸುಟ್ಟ ಗಾಯ ಅಥವಾ ಗುಳ್ಳೆಗಳು ಕಂಡುಬಂದರೆ ವೈದ್ಯಕೀಯ ನೆರವು ಪಡೆಯಬೇಕು.

ಕಣ್ಣುರೆಪ್ಪೆಗಳಿಗೆ ತುಪ್ಪ ಹಚ್ಚುವುದು

ಕಣ್ಣುರೆಪ್ಪೆ ಮತ್ತು ರೆಪ್ಪೆಗೂದಲುಗಳಿಗೆ ತುಪ್ಪ ಹಚ್ಚುವುದರಿಂದ ಅವುಗಳ ಬೆಳವಣಿಗೆ ಹೆಚ್ಚುತ್ತದೆ ಅಥವಾ ದೃಷ್ಟಿ ಸುಧಾರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಕಣ್ಣುಗಳ ಹತ್ತಿರ ಅಡುಗೆ ತುಪ್ಪ ಬಳಸುವುದರಿಂದ ಕಣ್ಣಿನ ಕಿರಿಕಿರಿ, ಗ್ರಂಥಿಗಳಲ್ಲಿ ಅಡಚಣೆ ಅಥವಾ ಸೋಂಕಿನ ಅಪಾಯ ಉಂಟಾಗಬಹುದು. ಆದ್ದರಿಂದ ಕಣ್ಣುಗಳ ಸುತ್ತಲೂ ತುಪ್ಪ ಹಚ್ಚುವುದನ್ನು ತಪ್ಪಿಸುವುದು ಉತ್ತಮ.

ಆಹಾರದಲ್ಲಿ ತುಪ್ಪ ಸೇವಿಸುವುದು ಹೇಗೆ ಮತ್ತು ಎಷ್ಟು ಸುರಕ್ಷಿತ?

ಪೌಷ್ಟಿಕ ತಜ್ಞರ ಸಲಹೆಯಂತೆ ದೇಸಿ ತುಪ್ಪವನ್ನು ಸಮತೋಲಿತ ಆಹಾರದ ಭಾಗವಾಗಿ ಮಿತ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವುದರಿಂದ ಒಟ್ಟಾರೆ ಆಹಾರದಲ್ಲಿನ ಕೊಬ್ಬಿನ ಪ್ರಮಾಣದ ಬಗ್ಗೆಯೂ ಗಮನಹರಿಸಬೇಕು. ಸಾಂಪ್ರದಾಯಿಕ ಮನೆಮದ್ದುಗಳು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ನೈಸರ್ಗಿಕ ಪದಾರ್ಥವಾದರೂ ಎಲ್ಲ ಸಂದರ್ಭಗಳಲ್ಲಿಯೂ ಸುರಕ್ಷಿತ ಅಥವಾ ಪರಿಣಾಮಕಾರಿ ಎಂದು ಭಾವಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us