Beer : ಎಲ್ಲದರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಅದು ನಮ್ಮ ಆಹಾರ, ಪಾನೀಯ ವಿಷಯಕ್ಕೂ ಸಂಬಂಧಿಸಿ ಕೂಡ. ಆದರೆ ಆಯ್ಕೆ ಪ್ರಮಾಣದ ಮೇಲೆ ಅದರ ಪರಿಣಾಮಗಳು ರೂಪುಗೊಂಡಿರುತ್ತವೆ. ಈಗ ಪಾನೀಯದ ವಿಷಯವಾಗಿ ಬಂದರೆ ಬಿಯರ್ ಉತ್ತಮ ಪ್ರಯೋಜಕಾರಿ ಅಂಶಗಳನ್ನು ಹೊಂದಿದೆ ಎನ್ನುತ್ತಾರೆ ವಿಜ್ಞಾನಿಗಳು. ನ್ಯುಮೋನಿಯಾ, ನಿದ್ರಾಹೀನತೆ, ಹೃದಯ ಸಮಸ್ಯೆ, ಕಿಡ್ನಿ ಸ್ಟೋನ್, ಕೊಲೆಸ್ಟ್ರಾಲ್, ಒತ್ತಡ ನಿವಾರಣೆ, ಮೂಳೆ ಸಮಸ್ಯೆ, ಸ್ಮರಣಶಕ್ತಿ ಸಮಸ್ಯೆಗಳಿಗೆ ಕೆಲವೊಮ್ಮೆ ವೈದ್ಯರೇ ಶಿಫಾರಸು ಮಾಡುವ ಉದಾಹರಣೆಗಳೂ ಉಂಟು. ಇತ್ತೀಚೆಗೆ ಪೋರ್ಚುಗೀಸ್ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಇದು ಪುರುಷರ ಕರುಳಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂಬ ಮಾಹಿತಿ ಹೊರಬಿದ್ದಿದೆ. ನಿಯಮಿತ ಪ್ರಮಾಣದಲ್ಲಿ ಪ್ರತೀದಿನ ಬಿಯರ್ ಕುಡಿಯುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಹುಟ್ಟಿಗೆ ಇದು ಕಾರಣವಾಗುತ್ತದೆ. ಆದ್ದರಿಂದ ಆರೋಗ್ಯ ಒಟ್ಟಾರೆಯಾಗಿ ಸುಧಾರಿಸುತ್ತದೆ ಎನ್ನುತ್ತದೆ ಈ ಸಂಶೋಧನೆ.
ರಾತ್ರಿಯ ಊಟದೊಂದಿಗೆ ಬಿಯರ್ ಕುಡಿಯುವುದರಿಂದ ವಿಶೇಷವಾಗಿ ಪುರುಷರ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟಿರಿಯಾಗಳ ಮಟ್ಟ ಹೆಚ್ಚುತ್ತದೆ ಎನ್ನುವುದು ಈ ಸಂಶೋಧನೆಯ ಮೂಲಕ ಸಾಬೀತುಗೊಂಡಿದೆ. ಈ ಸಂಶೋಧನೆಗಾಗಿ 35 ವರ್ಷದ 19 ಪುರುಷರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಇದನ್ನೂ ಓದಿ : Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?
ನಾಲ್ಕು ವಾರವಗಳತನಕ ಪ್ರತೀ ದಿನ ರಾತ್ರಿ ಊಟದೊಂದಿಗೆ 325 ಮಿ.ಲೀ. ಲಾಗರ್ ಬಿಯರ್ ಅನ್ನು ಕುಡಿಯಲು ಕೊಡಲಾಯಿತು. ಕೆಲವರು ಆಲ್ಕೋಹಾಲ್ಯುಕ್ತ, ಕೆಲವರು ಆಲ್ಕೋಹಾಲ್ಮುಕ್ತ ಬಿಯರ್ ಆಯ್ಕೆ ಮಾಡಿಕೊಂಡರು. ಲಾಗರ್ನಲ್ಲಿ ಶೇ 5.2ರಷ್ಟು ಆಲ್ಕೋಹಾಲ್ ಅಂಶವಿತ್ತು. 4 ವಾರಗಳ ಈ ಪ್ರಯೋಗದ ನಂತರ, ಇವರ ಮಲ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಯಿತು.
ಸಂಶೋಧನೆಯ ಫಲಿತಾಂಶ
ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಈ ಸಂಶೋಧನೆಯ ಫಲಿತಾಂಶಗಳಿಂದ, ಬಿಯರ್ ಕುಡಿಯುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಅಲ್ಲದೆ, ತೂಕ ಅಥವಾ ಬಾಡಿ ಮಾಸ್ ಇಂಡೆಕ್ಸ್ (BMI) ಕೂಡ ಹೆಚ್ಚಾಗುವುದಿಲ್ಲ. ಜೊತೆಗೆ ರಕ್ತ, ಹೃದಯ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ತೋರವು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : Pears Benefits: ನಿಮ್ಮ ಭಾವೋದ್ವೇಗಕ್ಕೂ ಮದ್ದು ಈ ಮರಸೇಬು
ಹಾಗಾಗಿ ಯಾವುದನ್ನೂ ನಿಯಮಿತವಾಗಿ ಸೇವಿಸಿದಲ್ಲಿ ಅದರದೇ ಆದ ಆರೋಗ್ಯ ಲಾಭಗಳಿದ್ದು, ವಿವೇಚನೆಯಿಂದ ನಿತ್ಯ ಜೀವನಶೈಲಿಯಲ್ಲಿ ಕೆಲವನ್ನು ರೂಢಿಸಿಕೊಳ್ಳಬಹುದಾಗಿದೆ. ಆದರೆ ಅತಿಯಾದದ್ದು ಎಂದಿಗೂ ಅಪಾಯ ಎನ್ನುವುದು ನೆನಪಿನಲ್ಲಿರಲಿ. ಯಾವುದಕ್ಕೂ ವೈದ್ಯರ ಸಲಹೆಯಂತೆ ಮುಂದುವರಿಯಿರಿ.