
ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಅನೇಕರು ಗಾಢ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು, ನಿದ್ರೆ ಮಾಡುವ ಸಮಯ ಬದಲಾಗುವುದು, ಒತ್ತಡ, ಅತಿಯಾದ ಕ್ಯಾಫಿನ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ನಿದ್ರೆಯ ಗುಣಮಟ್ಟವನ್ನು ಹದಗೆಡಿಸಬಹುದು. ಆದರೆ ದೀರ್ಘಕಾಲ ನಿದ್ರೆಯ ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹಾಗಾದರೆ ನಿದ್ರೆ (Sleep) ಚೆನ್ನಾಗಿ ಬರಲು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬಾದಾಮಿ: ಸಾಮಾನ್ಯವಾಗಿ ಬಾದಾಮಿಯಲ್ಲಿ ಮೆಗ್ನೀಷಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.
ಅಖರೋಟ್: ಇದರಲ್ಲಿ ಮೆಲಟೋನಿನ್, ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಆರೋಗ್ಯಕರ ಕೊಬ್ಬುಗಳಿದ್ದು, ನಿದ್ರೆಯ ಚಕ್ರವನ್ನು ಸಮತೋಲನದಲ್ಲಿಡಲು ನೆರವಾಗುತ್ತವೆ.
ಕಿವಿ ಹಣ್ಣು: ವಿಟಮಿನ್ ಸಿ, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಿದ್ರೆ ಬೇಗ ಬರಲು ಹಾಗೂ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ದಿನಕ್ಕೆ ಕೇವಲ 30 ನಿಮಿಷ ನಡೆಯುವುದರಿಂದ ಆರೋಗ್ಯದಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ಗೊತ್ತಾ?
ಕೊಬ್ಬಿನಾಂಶ ಹೆಚ್ಚಿರುವ ಮೀನು: ಸಾಲ್ಮನ್ ಮತ್ತು ಮ್ಯಾಕರಲ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಹಾಗೂ ವಿಟಮಿನ್ ಡಿ ಸಮೃದ್ಧವಾಗಿದ್ದು, ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಬಹುದು.
ಕ್ಯಾಮೊಮೈಲ್ ಟೀ: ಕ್ಯಾಫಿನ್ ರಹಿತ ಈ ಹರ್ಬಲ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಿ ಗಾಢ ನಿದ್ರೆಗೆ ನೆರವಾಗಬಹುದು.
ನಿದ್ರೆಯ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅಥವಾ ಹಗಲಿನಲ್ಲಿ ನಿರಂತರ ಆಯಾಸ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ