Dry Cough: ಒಣಕೆಮ್ಮು ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದುಗಳು
ಒಣಕೆಮ್ಮು ಸಾಮಾನ್ಯವಾಗಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತದೆ. ಎಷ್ಟೇ ನೀರು ಕುಡಿದರೂ ಕೆಮ್ಮು ನಿಲ್ಲುವುದೇ ಇಲ್ಲ. ಹಾಗೆಯೇ ಸಿರಪ್ ಸೇರಿದಂತೆ ಯಾವುದೇ ಔಷಧವನ್ನು ಸೇವಿಸಿದರೂ ಕೆಮ್ಮು ಹೋಗುವ ಸೂಚನೆಯೇ ಇರುವುದಿಲ್ಲ, ಆಗ ಈ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ.
ಒಣಕೆಮ್ಮು ಸಾಮಾನ್ಯವಾಗಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತದೆ. ಎಷ್ಟೇ ನೀರು ಕುಡಿದರೂ ಕೆಮ್ಮು ನಿಲ್ಲುವುದೇ ಇಲ್ಲ. ಹಾಗೆಯೇ ಸಿರಪ್ ಸೇರಿದಂತೆ ಯಾವುದೇ ಔಷಧವನ್ನು ಸೇವಿಸಿದರೂ ಕೆಮ್ಮು ಹೋಗುವ ಸೂಚನೆಯೇ ಇರುವುದಿಲ್ಲ, ಆಗ ಈ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ. ವಾತ, ಪಿತ್ತ ಮತ್ತು ಕಫಗಳ ಅಸಮತೋಲನದಿಂದ ಒಣ ಕೆಮ್ಮು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಅಲರ್ಜಿ, ಆಸಿಡ್ ರಿಫ್ಲಕ್ಸ್, ಹವಾಮಾನ ಬದಲಾವಣೆ, ಹೆಚ್ಚು ತಂಪು ಪಾನೀಯಗಳನ್ನು ಕುಡಿಯುವುದು, ಧೂಳು ಹಾಗೂ ಇನ್ನಿತರ ಕಾರಣಗಳಿಂದ ಒಣ ಕೆಮ್ಮು ಉಂಟಾದರೂ ನಿರ್ದಿಷ್ಟ ಕಾರಣ ಇದೇ ಎಂದು ಹೇಳಲಾಗುವುದಿಲ್ಲ.
ಕೆಮ್ಮಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕಫದ ಕೆಮ್ಮು ಇದು ಬಹಳಷ್ಟು ಲೋಳೆಯನ್ನು ಹೊಂದಿರುತ್ತದೆ, ಎರಡನೆಯದು ಲೋಳೆಯಿಲ್ಲದ ಒಣ ಕೆಮ್ಮು. ಒಣ ಕೆಮ್ಮು ಇದ್ದರೆ ಗಂಟಲು ನೋವು, ಉರಿಯೂತ ಹೆಚ್ಚು. ಅದರಲ್ಲೂ ರಾತ್ರಿ ವೇಳೆ ಕೆಮ್ಮು ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಮಲಗಲು ಕೂಡಾ ಕಷ್ಟವಾಗುತ್ತದೆ.
ಒಣಕೆಮ್ಮು ಹೋಗಲಾಡಿಸಲು ಮನೆಮದ್ದು ಇಲ್ಲಿದೆ ಅರಿಶಿನ ಅರಿಶಿನವು ಉರಿಯೂತದ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ.
ಅರಿಶಿನವನ್ನು ಕಾಳುಮೆಣಸಿನೊಂದಿಗೆ ಸೇವಿಸಿದಾಗ, ಕರ್ಕ್ಯುಮಿನ್, ರಕ್ತದಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ. ಬಿಸಿ ಹಾಲಿನಲ್ಲಿ1/2 ಟೀ ಚಮಚ ಅರಿಶಿನ ಮತ್ತು 1/4 ಟೀ ಚಮಚ ಕಾಳುಮೆಣಸು ಪುಡಿ ಮಿಕ್ಸ್ ಮಾಡಿ ಸೇವಿಸಿದರೆ ಒಣ ಕೆಮ್ಮನ್ನು ಕಡಿಮೆ ಮಾಡಬಹುದು.
ಜೇನುತುಪ್ಪ ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಗಂಟಲನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಜೇನುತುಪ್ಪ ಸೇವಿಸಿದರೆ ಒಣಕೆಮ್ಮಿನ ಸಮಸ್ಯೆ ದೂರವಾಗುತ್ತದೆ. ಬೆಳಗ್ಗೆ ಎದ್ದ ಬಳಿಕ ಒಂದು ಚಮಚ ಜೇನುತುಪ್ಪವನ್ನು ಕುದಿಸಿ ಆರಿದ ನೀರಿಗೆ ಬೆರೆಸಿ ಸೇವಿಸುವುದು ಒಳಿತು.
ಶುಂಠಿ ಶುಂಠಿಯಲ್ಲಿ ಆಂಟಿಮೈಕ್ರೊಬಿಯಲ್ ಗುಣವಿದ್ದು, ಒಣ ಕೆಮ್ಮನ್ನು ನಿವಾರಿಸಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಅಥವಾ ಜೇನುತುಪ್ಪವನ್ನು ಹಚ್ಚಿ ಬಾಯಿಯಲ್ಲಿ ಕಚ್ಚಿ, ಅದರಿಂದ ಬರುವ ರಸವನ್ನು ಮಾತ್ರ ನುಂಗಿ. ಹೀಗೇ 5-7 ನಿಮಿಷಗಳ ಕಾಲ ಇಟ್ಟು ನಂತರ ಹೊರಗೆ ಬಿಸಾಡಿ. ಬಾಯಿಯನ್ನು ಸ್ವಚ್ಛಗೊಳಿಸಿ.
ಉಪ್ಪು ನೀರು ಉಪ್ಪು ನೀರು ಬಾಯಿ ಮತ್ತು ಗಂಟಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 1 ಟೀ ಚಮಚ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈ ನೀರಿನಿಂದ ನಿಮ್ಮ ಬಾಯಿಯನ್ನು ಆಗಾಗ ಗಾರ್ಗ್ಲಿಂಗ್ ಮಾಡಿ.
ತುಪ್ಪ ತುಪ್ಪವು ಗಂಟಲನ್ನು ಮೃದುಗೊಳಿಸುತ್ತದೆ. ಕಾಳುಮೆಣಸಿನ ಪುಡಿಯೊಂದಿಗೆ ತುಪ್ಪವನ್ನು ಬೆರೆಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ