ಆಲಸ್ಯ ಹೆಚ್ಚಾದರೆ ಆಯಸ್ಸು ಕಡಿಮೆಯಾಗುತ್ತೆ! ರಕ್ತ ಕ್ಯಾನ್ಸರ್ ಬರುವ ಮೊದಲು ನಿಮಗೂ ಹೀಗೆ ಆಗಬಹುದು
ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ರಕ್ತದ ಕ್ಯಾನ್ಸರ್ ಅವುಗಳಲ್ಲಿ ಒಂದು. ಇದು ರಕ್ತ ಕಣಗಳು ಮತ್ತು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಇದು ಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು ಕೂಡ ಬಹಳ ಸಾಮಾನ್ಯ ಆರೋಗ್ಯ ಸಮಸ್ಯೆಯಂತೆಯೇ ಇರುತ್ತದೆ. ಹಾಗೆಂದು ಕಡೆಗಣಿಸಿದರೆ ಇದು ರಕ್ತ ಕಣಗಳ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಿಮವಾಗಿ, ಇದು ಮಾರಕವಾಗಬಹುದು. ಹಾಗಾಗಿ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಉತ್ತಮ.

ರಕ್ತ ಕ್ಯಾನ್ಸರ್.. ಇದು ಜೀವಕ್ಕೆ ಅಪಾಯಕಾರಿಯಾದಂತಹ ಆರೋಗ್ಯ (Health) ಸಮಸ್ಯೆ. ಇದರಲ್ಲಿಯೇ ಅನೇಕ ವಿಧಗಳಿವೆ. ಕೆಲವೊಂದು ನಿಮ್ಮ ಮೂಳೆ ಮಜ್ಜೆಯಲ್ಲಿ ಪ್ರಾರಂಭವಾಗುತ್ತವೆ. ಅವು ಮೂಳೆಗಳ ನಡುವೆ ಕಂಡುಬರುವ ಮೃದುವಾದ, ಸ್ಪಂಜಿನ ವಸ್ತುವಿನಲ್ಲಿ ರೂಪುಗೊಳ್ಳುತ್ತವೆ. ಈ ಸಮಸ್ಯೆ ಉಂಟಾದಾಗ, ಸಾಮಾನ್ಯವಾಗಿ ದೇಹದಲ್ಲಿ ಆಯಾಸ, ಸೋಂಕುಗಳು, ಪಕ್ಕೆಲುಬುಗಳಲ್ಲಿ ನೋವು ಮತ್ತು ಕೀಲು ಅಥವಾ ಮೂಳೆ ನೋವು ಕಂಡುಬರುತ್ತದೆ. ಇನ್ನು ನಮ್ಮ ದೇಹವು ರಕ್ತ ಕಣಗಳನ್ನು ಉತ್ಪಾದಿಸುವ ರೀತಿಯಲ್ಲಿ ಯಾವುದೇ ಅಡಚಣೆ ಉಂಟಾದರು ಕೂಡ ರಕ್ತ ಕ್ಯಾನ್ಸರ್ (Blood Cancer) ಸಂಭವಿಸುತ್ತದೆ. ಇವು ಅಸಹಜವಾಗಿ ಬೆಳೆಯುತ್ತವೆ, ಬಳಿಕ ಜೀವಕ್ಕೆ ಅಪಾಯಕಾರಿಯಾಗಬಹುದು. ಹಾಗಾದರೆ ಇದು ಕಂಡು ಬರುವುದಕ್ಕೆ ಕಾರಣವೇನು? ಯಾವ ರೀತಿ ಲಕ್ಷಣ (Symptoms) ಕಂಡು ಬಂದಾಗ ಎಚ್ಛೆತ್ತುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ರಕ್ತ ಕ್ಯಾನ್ಸರ್ ಬರುವುದಕ್ಕೆ ಕಾರಣವೇನು?
ಸಾಮಾನ್ಯವಾಗಿ ರಕ್ತ ಕ್ಯಾನ್ಸರ್ ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ವ್ಯಕ್ತಿಯ ದೇಹದಲ್ಲಿ ಕಂಡು ಬರುವಂತಹ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾದಂತಹ ಪರಿಸ್ಥಿತಿಗಳನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ. ಏಕೆಂದರೆ ಈ ಸಮಸ್ಯೆಗಳ ಲಕ್ಷಣಗಳ ಮೂಲಕ ಇದನ್ನು ಗುರುತಿಸಬಹುದು. ಯಾವುದೇ ರೀತಿಯಲ್ಲಿ ಅವುಗಳನ್ನು ನಿರ್ಲಕ್ಷಿಸುವುದರಿಂದ ಜೀವಕ್ಕೆ ಅಪಾಯವಾಗಬಹುದು. ಏಕೆಂದರೆ ಇವು ದೇಹದೊಳಗೆ ಹರಡುತ್ತವೆ. ಆದ್ದರಿಂದ, ದೇಹದಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಹಗುರವಾಗಿ ಪರಿಗಣಿಸದಿರುವುದು ಒಳ್ಳೆಯದು. ಹಾಗಾದರೆ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ
ರಕ್ತ ಕ್ಯಾನ್ಸರ್ ಲಕ್ಷಣಗಳು:
ಆಯಾಸ
ಕೆಲವು ವ್ಯಕ್ತಿಗಳಿಗೆ ಯಾವಾಗಲೂ ಆಯಾಸ ಇದ್ದೇ ಇರುತ್ತದೆ. ಆದರೆ ಇದು ಸಾಮಾನ್ಯ ಆಯಾಸವಲ್ಲ. ನೀವು ಎಷ್ಟೇ ವಿಶ್ರಾಂತಿ ತೆಗೆದುಕೊಂಡರೂ ಅದು ತುಂಬಾ ಮಂದವಾಗಿರುತ್ತದೆ. ಇದಕ್ಕೆ ಕಾರಣ ರಕ್ತಹೀನತೆ. ಮೂಳೆ ಮಜ್ಜೆಯಲ್ಲಿರುವ ಕ್ಯಾನ್ಸರ್ ಕೋಶಗಳು ಆರೋಗ್ಯಕರ ರಕ್ತ ಕಣಗಳೊಂದಿಗೆ ಸ್ಪರ್ಧಿಸುತ್ತವೆ. ಪರಿಣಾಮವಾಗಿ, ಕೆಂಪು ರಕ್ತ ಕಣಗಳ ಉತ್ಪಾದನೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹದ ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರುವುದಿಲ್ಲ, ಇದು ಆಲಸ್ಯವನ್ನು ಹೆಚ್ಚಿಸುತ್ತದೆ.
ನಿಯಮಿತ ಸೋಂಕುಗಳು
ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಸೋಂಕುಗಳು ನಿಯಮಿತವಾಗಿ ಸಂಭವಿಸುತ್ತವೆ ಅಥವಾ ಆರೋಗ್ಯ ಸಮಸ್ಯೆಗಳು ಕಡಿಮೆಯಾಗದಿರಬಹುದು. ಜೊತೆಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆರೋಗ್ಯಕರ ಬಿಳಿ ರಕ್ತ ಕಣಗಳ ಇಳಿಕೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಹೆಮರೇಜ್
ಮೂಗಿನಿಂದ ರಕ್ತಸ್ರಾವ, ಒಸಡುಗಳಿಂದ ರಕ್ತಸ್ರಾವ, ಮತ್ತು ಸಣ್ಣ ಪೆಟ್ಟಾದರೂ ಅದು ದೊಡ್ಡ ಗಾಯಗಳಾಗುತ್ತವೆ. ಇದು ಪ್ಲೇಟ್‌ಲೆಟ್ ಎಣಿಕೆ ಕಡಿಮೆಯಾಗುವುದರಿಂದ ಉಂಟಾಗುತ್ತದೆ, ಇದರಿಂದ ತ್ವರಿತವಾಗಿ ರಕ್ತ ಹೆಪ್ಪುಗಟ್ಟುವುದಿಲ್ಲ. ದೇಹದ ಮೇಲೆ ಕೆಂಪು ಮತ್ತು ಕಂದು ಕಲೆಗಳು ಸಹ ಗೋಚರಿಸುತ್ತವೆ.
ದೇಹದಲ್ಲಿ ಗಡ್ಡೆಗಳು ಅಥವಾ ಊತ ಕಂಡುಬರುವುದು
ಕಂಕುಳಲ್ಲಿ, ಕುತ್ತಿಗೆ ಮತ್ತು ತೊಡೆ ಸಂದುಗಳಲ್ಲಿ ಚರ್ಮದ ಕೆಳಗೆ ಉಂಡೆಗಳು ರೂಪುಗೊಳ್ಳುತ್ತವೆ. ಇವು ಪ್ರಾಥಮಿಕವಾಗಿ ಊದಿಕೊಂಡ ದುಗ್ಧರಸ ಗ್ರಂಥಿಗಳು. ಈ ಉಂಡೆಗಳಲ್ಲಿ ನೋವಿರುವುದಿಲ್ಲ. ಸಾಮಾನ್ಯ ಸೋಂಕಿನ ಸಮಯದಲ್ಲಿ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಸಹಜ. ಅವು ಕಡಿಮೆಯಾಗದಿದ್ದರೆ ಅದು ಬೆಳೆಯುತ್ತಲೇ ಇದ್ದರೆ, ಅದು ಲಿಂಫೋಮಾ ಅಥವಾ ಇತರ ರಕ್ತ ಸಂಬಂಧಿತ ಕಾಯಿಲೆಗಳ ಸೂಚನೆಯಾಗಿರುತ್ತದೆ.
ಇದನ್ನೂ ಓದಿ: ಆರಂಭಿಕ ಹಂತದಲ್ಲಿರುವ ಅಂಡಾಶಯದ ಕ್ಯಾನ್ಸರ್ ಗುರುತಿಸುವುದು ಹೇಗೆ?
ತೂಕ ನಷ್ಟ
ಯಾವುದೇ ಆಹಾರ ಅಥವಾ ವ್ಯಾಯಾಮದ ಹೊರತಾಗಿಯೂ, ತೂಕ ಕಡಿಮೆಯಾಗುತ್ತಿದ್ದರೆ ಅದನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಯಾವುದಾದರೂ ಸಮಸ್ಯೆ ಇದೆಯೇ ಎಂಬುದನ್ನು ಗಮನಿಸಬೇಕು. ಇನ್ನು, ಕೆಲವರಿಗೆ ನಿದ್ರೆಯ ಸಮಯದಲ್ಲಿ ಅತಿಯಾಗಿ ಬೆವರುತ್ತದೆ. ಮೂಳೆಗಳು ಮತ್ತು ಕೀಲುಗಳಲ್ಲಿ ನೋವು ಇರುತ್ತದೆ. ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಯಕೃತ್ತು ದೊಡ್ಡದಾಗುತ್ತದೆ, ಇದರ ಪರಿಣಾಮವಾಗಿ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇವೆಲ್ಲವೂ ರಕ್ತ ಕ್ಯಾನ್ಸರ್ ಬರುವ ಮುನ್ಸೂಚನೆ ಆಗಿರಬಹುದು. ಈ ರೀತಿಯ ಲಕ್ಷಣ ನಿಮಗೂ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ