
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ (heart attack) ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲೆಲ್ಲಾ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಈ ಸಮಸ್ಯೆ ಈಗ ಯಾವ ವಯಸ್ಸಿನವರನ್ನು ಬಿಟ್ಟಿಲ್ಲ. ಸಾಮಾನ್ಯವಾಗಿ, ಇವುಗಳಿಗೆ ಕಾರಣವೇನು? ಯಾಕಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಅದಕ್ಕೆ ಸರಿಯಾದ ಉತ್ತರವಿಲ್ಲ. ಏಕೆಂದರೆ ಹೃದಯಾಘಾತವಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ಒಬ್ಬ ವ್ಯಕ್ತಿ ಅನುಸರಿಸಿಕೊಂಡು ಬಂದಂತಹ ಅಭ್ಯಾಸಗಳು ಕೂಡ ಈ ರೀತಿ ಸಮಸ್ಯೆ ಕಂಡು ಬರುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಮಾತ್ರವಲ್ಲ, ಕೆಲವೊಮ್ಮೆ ಜೇನುನೊಣ (Bee Sting) ಬಾಯಿಯೊಳಗೆ ಹೋಗಿ ಅಂದರಿಂದ ಹೃದಯಾಘಾತವಾಗಿ ಪ್ರಾಣ ಬಿಟ್ಟವರು ಕೂಡ ಇದ್ದಾರೆ. ಹೌದು. ಇವೆಲ್ಲಾ ನಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ವೈದ್ಯರು ಈ ರೀತಿ ಪ್ರಕರಣಗಳು ನಡೆಯಬಹುದು ಎಂದು ಹೇಳಿದ್ದಾರೆ. ಈ ವಿಷಯದ ಕುರಿತು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್- ಕಾರ್ಡಿಯಾಲಾಜಿಸ್ಟ್ ಡಾ. ಕೇಶವ ಆರ್ (DR. KESHAVA R) ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಜೇನುನೊಣ ಬಾಯಿಯೊಳಗೆ ಹೋದಾಗ ಹೃದಯಾಘಾತವಾಗುವುದಕ್ಕೆ ಹೇಗೆ ಸಾಧ್ಯ? ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಾ. ಕೇಶವ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದ್ದು, ನಮ್ಮ ಜೀವನಶೈಲಿ, ಆಹಾರಕ್ರಮ ಸರಿಯಾಗಿ ಇಲ್ಲದಿರುವುದು, ಸಕ್ಕರೆ ಕಾಯಿಲೆ, ಬಿಪಿ, ಅಧಿಕ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಬೊಜ್ಜು, ವ್ಯಾಯಾಮದ ಕೊರತೆ, ಡಿಸ್ಲಿಪಿಡೆಮಿಯಾದಂತಹ ಅಪಾಯಕಾರಿ ಅಂಶಗಳು ಇವುಗಳಿಗೆ ಮುಖ್ಯ ಕಾರಣವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅಲರ್ಜಿಗಳಿಂದ ಕೂಡ ಹೃದಯಾಘಾತವಾಗುತ್ತದೆ. ಈ ರೀತಿ ಪ್ರಕರಣಗಳು ಕಂಡುಬರುವುದು ತುಂಬಾ ವಿರಳವಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಇವು ಪ್ರಾಣಕ್ಕೆ ಕಂಟಕವಾಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಜೇನುನೊಣದಿಂದಲೂ ಕೂಡ ಹೃದಯಾಘಾತವಾಗಬಹುದು ಎಂಬ ಮಾತು ಸತ್ಯ ಎಂದಿದ್ದಾರೆ.
ಕೇವಲ ಒಂದು ಚಿಕ್ಕ ಕೀಟ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ತರಬಹುದು ಎಂಬುದನ್ನು ನಂಬುವುದು ಬಹಳ ಕಷ್ಟವಾಗಬಹುದು. ಆದರೆ ಡಾ. ಕೇಶವ ಅವರು ಇದು ಯಾವ ರೀತಿ ಸಾಧ್ಯವಿದೆ ಎಂಬುದನ್ನು ತಿಳಿಸಿದ್ದಾರೆ. ಅವರು ತಿಳಿಸಿರುವ ಮಾಹಿತಿ ಅನುಸಾರ, ಜೇನುನೊಣಗಳು ಮೂಗು ಬಾಯಿಗೆ ಹೋದಾಗ ಬಿಪಿ ಬಹಳ ಜಾಸ್ತಿ ಆಗುತ್ತದೆ. ಇದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಸಣ್ಣ ಸಣ್ಣ ಬ್ಲಾಕ್ ಗಳಿದ್ದರೆ ಅದು ಬ್ಲಡ್ ಕ್ಲಾಟ್ ಆಗಿ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಈ ರೀತಿ ಪ್ರಕರಣದಲ್ಲಿ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕಿಂತ ಮುಂಚೆಯೇ ಹೃದಯ ಸ್ತಂಭನವಾಗಿ ಪ್ರಾಣ ಬಿಡುತ್ತಾರೆ. ಹಾಗಾಗಿ ನಾವು ಎಷ್ಟು ಬೇಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೋ ಅಷ್ಟು ಒಳ್ಳೆಯದು.
ಇದನ್ನೂ ಓದಿ: ಮಕ್ಕಳಿಗೆ ಬೀದಿ ಬದಿ ಆಹಾರ ನೀಡುವ ಮುನ್ನ ಈ ವಿಚಾರ ತಿಳಿದಿರಲಿ: ಡಾ. ನಂದಿತಾ ರತ್ನಂ
ಇದಕ್ಕೆ ಪೂರಕವೆಂಬಂತೆ, ನಿಮಗೆ ತಿಳಿದಿರಬಹುದು ಸ್ವಲ್ಪ ದಿನಗಳ ಹಿಂದೆ ಹೃದಯಾಘಾತದಿಂದ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಸಾವನ್ನಪ್ಪಿದ್ದರು. ಅವರು ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಪೋಲೋ ಆಡುವಾಗ ಆಕಸ್ಮಿಕವಾಗಿ ಜೇನುನೊಣ ನುಂಗಿದ ಕಾರಣ ಹೃದಯಾಘಾತಕ್ಕೆ ಕಾರಣವಾಯಿತು ವೈದ್ಯರು ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಕೆಲವು ವರದಿಗಳು ತಿಳಿಸಿವೆ. ಹಾಗಾಗಿ ಈ ರೀತಿಯಾಗಿ ಜೇನುನೊಣ ಬಾಯಿಯೊಳಗೆ ಹೋದಾಗಲೂ ಕೂಡ ಸಾವು ಬರಬಹುದು. ಇದು ಆಕಸ್ಮಿಕವಾಗಿ ಆಗಿದ್ದಾದರೂ ಕೂಡ ಈ ರೀತಿ ಆಗುವ ಸಂಭವ ಇರುತ್ತದೆ ಎಂಬುದು ತಿಳಿದಿರಬೇಕಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ