ಸಕ್ಕರೆ ತಿಂದರೆ ಆಸಿಡಿಟಿ ಹೆಚ್ಚಾಗುತ್ತದೆಯೇ? ಎದೆ ಉರಿ ಬಗ್ಗೆ ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಹೆಚ್ಚು ಸಕ್ಕರೆ ಹೊಂದಿರುವ ಆಹಾರಗಳಲ್ಲಿ ಸಾಮಾನ್ಯವಾಗಿ ಕೊಬ್ಬು ಮತ್ತು ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಿರುತ್ತದೆ. ಇಂತಹ ಆಹಾರಗಳನ್ನು ಪದೇಪದೇ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವರಿಗೆ ಆಸಿಡಿಟಿ ಮತ್ತು ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಬಹುದು. ಹಾಗಾದರೆ ಸಕ್ಕರೆ ಮತ್ತು ಆಸಿಡಿಟಿ ನಡುವೆ ಇರುವ ಸಂಬಂಧವೇನು, ಈ ರೀತಿ ಆಗುವುದಕ್ಕೆ ಕಾರಣವೇನು ಮತ್ತು ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಕ್ಕರೆ ತಿಂದರೆ ಆಸಿಡಿಟಿ ಹೆಚ್ಚಾಗುತ್ತದೆಯೇ? ಎದೆ ಉರಿ ಬಗ್ಗೆ ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ
Sugar And Acidity
Image Credit source: Getty Images

Updated on: Aug 12, 2026 | 5:23 PM

ಮುಖ್ಯಾಂಶಗಳು

  • ಎದೆ ಉರಿ, ಹುಳಿ ತೇಗು ಬರುವುದಕ್ಕೆ ಸಿಹಿ ಆಹಾರಗಳೂ ಕಾರಣವಾಗುತ್ತದೆಯೇ?
  • ಕೇಕ್, ಚಾಕೊಲೇಟ್, ಐಸ್‌ಕ್ರೀಂ ತಿಂದ ಬಳಿಕ ಆಸಿಡಿಟಿ ಹೆಚ್ಚಾಗುವುದಕ್ಕೆ ಈ ಅಂಶಗಳೇ ಕಾರಣ
  • ಆಸಿಡಿಟಿ ಕಡಿಮೆ ಮಾಡಲು ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು

ಊಟದ ಬಳಿಕ ಎದೆ ಉರಿ, ಹೊಟ್ಟೆ ಉಬ್ಬರ, ಹುಳಿ ತೇಗು, ಬಾಯಿಯಲ್ಲಿ ಹುಳಿ ರುಚಿ… ಇಂತಹ ಸಮಸ್ಯೆಗಳು ಇತ್ತೀಚೆಗೆ ಹಲವರನ್ನು ಕಾಡುತ್ತಿವೆ. ಸಾಮಾನ್ಯವಾಗಿ ಮಸಾಲೆ, ಎಣ್ಣೆಯುಕ್ತ ಅಥವಾ ಹೆಚ್ಚು ಖಾರವಾದ ಆಹಾರವೇ ಆಸಿಡಿಟಿಗೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸಿಹಿ ಪದಾರ್ಥಗಳು ತಿಂದರೂ ಆಸಿಡಿಟಿ ಹೆಚ್ಚಾಗುತ್ತದೆಯೇ? ಎಂಬ ಗೊಂದಲ ಹಲವರದ್ದು. ತಜ್ಞರು ಹೇಳುವ ಪ್ರಕಾರ, ಸಕ್ಕರೆ ಸ್ವತಃ ಆಸಿಡ್ ರಿಫ್ಲಕ್ಸ್‌ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿ ಇರುವ ಕೇಕ್, ಪೇಸ್ಟ್ರಿ, ಚಾಕೊಲೇಟ್, ಐಸ್‌ಕ್ರೀಂ, ಸಿಹಿ ಪಾನೀಯಗಳು ಮತ್ತು ಇತರ ಸಿಹಿತಿಂಡಿಗಳು ಕೆಲವರಲ್ಲಿ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸಬಹುದು. ಹಾಗಾದರೆ ಸಕ್ಕರೆ ಮತ್ತು ಆಸಿಡಿಟಿ ನಡುವೆ ಇರುವ ಸಂಬಂಧವೇನು, ಈ ರೀತಿ ಆಗುವುದಕ್ಕೆ ಕಾರಣವೇನು ಮತ್ತು ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಕ್ಕರೆ ತಿಂದರೆ ನೇರವಾಗಿ ಆಸಿಡಿಟಿ ಬರುತ್ತದೆಯೇ?

ಡಾ. ಜತೀಂದರ್ ಸಿಂಗ್ ಭೋಗಲ್, (ಸೀನಿಯರ್ ಕನ್ಸಲ್ಟೆಂಟ್, ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಕೈಲಾಶ್ ದೀಪಕ್ ಹಾಸ್ಪಿಟಲ್) ಅವರ ಪ್ರಕಾರ, ಕೇವಲ ಸಕ್ಕರೆ ಸೇವನೆಯೇ ಆಸಿಡ್ ರಿಫ್ಲಕ್ಸ್‌ಗೆ ನೇರ ಕಾರಣ ಎಂದು ಹೇಳುವುದು ಸರಿಯಲ್ಲ. ಆದರೆ ಹೆಚ್ಚು ಸಕ್ಕರೆ ಹೊಂದಿರುವ ಆಹಾರಗಳಲ್ಲಿ ಸಾಮಾನ್ಯವಾಗಿ ಕೊಬ್ಬು ಮತ್ತು ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಿರುತ್ತದೆ. ಇಂತಹ ಆಹಾರಗಳನ್ನು ಪದೇಪದೇ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವರಿಗೆ ಆಸಿಡಿಟಿ ಮತ್ತು ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಬಹುದು.

ಆಸಿಡ್ ರಿಫ್ಲಕ್ಸ್ ಏಕೆ ಉಂಟಾಗುತ್ತದೆ?

ಹೊಟ್ಟೆ ಮತ್ತು ಆಹಾರನಾಳದ ನಡುವೆ ಲೋವರ್ ಈಸೋಫೇಜಿಯಲ್ ಸ್ಫಿಂಕ್ಟರ್ (LES) ಎಂಬ ಸ್ನಾಯು ಇರುತ್ತದೆ. ಇದು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ಹೊಟ್ಟೆಯಲ್ಲಿರುವ ಆಮ್ಲ ಆಹಾರನಾಳದ ಕಡೆಗೆ ಮೇಲಕ್ಕೆ ಬರುತ್ತದೆ. ಇದರಿಂದ ಎದೆ ಉರಿ, ಹುಳಿ ತೇಗು, ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ, ಹೊಟ್ಟೆ ಉಬ್ಬರ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸಿಹಿ ಆಹಾರಗಳು ಆಸಿಡಿಟಿಯನ್ನು ಹೇಗೆ ಹೆಚ್ಚಿಸಬಹುದು?

ಕೇಕ್, ಪೇಸ್ಟ್ರಿ, ಐಸ್‌ಕ್ರೀಂ, ಚಾಕೊಲೇಟ್, ಸಿಹಿ ಪಾನೀಯಗಳು ಮತ್ತು ಇತರ ಹೆಚ್ಚು ಸಕ್ಕರೆ ಇರುವ ಆಹಾರಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳೂ ಹೆಚ್ಚಿರಬಹುದು. ಇಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾದಾಗ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಿ, ಆಮ್ಲ ಮೇಲಕ್ಕೆ ಬರುವ ಸಾಧ್ಯತೆ ಹೆಚ್ಚಾಗಬಹುದು. ಹೀಗಾಗಿ ಸಕ್ಕರೆ ಮಾತ್ರವಲ್ಲ, ಒಟ್ಟಾರೆ ಆಹಾರ ಪದ್ಧತಿ, ತೂಕ ಮತ್ತು ಜೀವನಶೈಲಿಯೂ ಆಸಿಡ್ ರಿಫ್ಲಕ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಸಿಡಿಟಿ ಕಡಿಮೆ ಮಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಸಿಹಿ ಅಥವಾ ನಿರ್ದಿಷ್ಟ ಆಹಾರ ತಿಂದ ನಂತರವೇ ಎದೆ ಉರಿ ಹೆಚ್ಚಾಗುತ್ತಿದೆ ಎಂದು ಗಮನಿಸಿದರೆ, ಅದನ್ನು ಕಡಿಮೆ ಮಾಡಿ. ಯಾವ ಆಹಾರ ನಿಮ್ಮ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಫುಡ್ ಡೈರಿ ಇಟ್ಟುಕೊಳ್ಳಬಹುದು. ಒಮ್ಮೆಲೇ ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಿ. ಊಟ ಮಾಡಿದ ತಕ್ಷಣ ಮಲಗಬೇಡಿ. ಊಟದ ನಂತರ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಮಲಗದೆ ಇರುವುದು ಸಹಾಯಕವಾಗಬಹುದು. ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಿ. ನಿಮಗೆ ಪದೇಪದೇ ಸಮಸ್ಯೆ ಉಂಟುಮಾಡುವ ಆಹಾರಗಳನ್ನು ಗುರುತಿಸಿ ಅವುಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಒಂದೆರಡು ಬಾರಿ ಎದೆ ಉರಿ ಕಾಣಿಸಿಕೊಂಡರೆ ಆತಂಕಪಡುವ ಅಗತ್ಯವಿಲ್ಲ. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ ನಂತರವೂ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us