Lung Cancer: ಸಿಗರೇಟ್ ಸೇದದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತಾ?
ಧೂಮಪಾನ ಮಾಡದಿದ್ದರೂ ಸಹ ಕ್ಯಾನ್ಸರ್ ಗಡ್ಡೆ ಉಂಟಾಗುವ ಬಗ್ಗೆ ಇಂಟರ್ನೆಟ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ, ಸಿಗರೇಟ್ ಸೇದದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಲು ಕಾರಣವೇನು? ಬೇರೆ ಯಾವುದರಿಂದ ಕ್ಯಾನ್ಸರ್ ಹೆಚ್ಚಾಗುತ್ತದೆ? ಇಲ್ಲಿದೆ ಮಾಹಿತಿ.
ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತ ಬಹಳ ಹೆಚ್ಚುತ್ತಿರುವ ರೋಗವಾಗಿದೆ. ಕ್ಯಾನ್ಸರ್ನಿಂದ ಉಂಟಾಗುತ್ತಿರುವ ಸಾವಿನ ಪ್ರಕರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಇತ್ತೀಚೆಗೆ, ಬಿಗ್ ಬ್ಯಾಂಗ್ ಥಿಯರಿ ಖ್ಯಾತಿಯ ನಟಿ ಕೇಟ್ ಮಿಕುಸಿ ತಾವು ಶ್ವಾಸಕೋಶದ ಕ್ಯಾನ್ಸರ್ಗೆ ತುತ್ತಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ನಾನೆಂದೂ ಸಿಗರೇಟ್ ಸೇದಿಲ್ಲ. ನಾನು ಈಗ ಆಸ್ಪತ್ರೆಯಲ್ಲಿದ್ದೇನೆ. ನಿನ್ನೆ ನನಗೆ ಶ್ವಾಸಕೋಶದ ಕ್ಯಾನ್ಸರ್ ಆಪರೇಷನ್ ಆಗಿದೆ ಎಂದು ಆಕೆ ಹೇಳಿಕೊಂಡಿದ್ದರು. ನನಗೆ ಕ್ಯಾನ್ಸರ್ ಇರುವ ವಿಷಯ ಬಹಳ ಬೇಗ ಗೊತ್ತಾಯಿತು. ಇದರಿಂದ ಚಿಕಿತ್ಸೆ ಪಡೆಯಲು ಸುಲಭವಾಯಿತು. ಆದರೆ, ನನಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ, ನನ್ನ ಜೀವನದಲ್ಲಿ ನಾನು ಎಂದಿಗೂ ಸಿಗರೇಟ್ ಸೇದಿಲ್ಲ. ಸಿಗರೇಟ್ ಸೇದದಿದ್ದರೂ ಕ್ಯಾನ್ಸರ್ ಬರುತ್ತದೆ ಎಂಬುದು ನನಗೆ ಅರಿವಾಗಿದೆ ಎಂದು ಅವರು ಟಿಕ್ಟಾಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ಆದ್ದರಿಂದ, ಧೂಮಪಾನ ಮಾಡದಿದ್ದರೂ ಸಹ ಕ್ಯಾನ್ಸರ್ ಗಡ್ಡೆ ಉಂಟಾಗುವ ಬಗ್ಗೆ ಇಂಟರ್ನೆಟ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಇಂಡಿಯಾ ಡಾಟ್ ಕಾಂ ಜೊತೆ ಬೆಂಗಳೂರಿನ HCG ಕ್ಯಾನ್ಸರ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ತಜ್ಞ ಡಾ. ಶ್ರೀನಿವಾಸ್ ಬಿ ಜೆ ಮಾತನಾಡಿದ್ದು, ಶ್ವಾಸಕೋಶದ ಕ್ಯಾನ್ಸರ್ ಧೂಮಪಾನ ಮಾಡದ ವ್ಯಕ್ತಿಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಧೂಮಪಾನವನ್ನು ಮೀರಿದ ವಿವಿಧ ಅಪಾಯಕಾರಿ ಅಂಶಗಳು ಶ್ವಾಸಕೋಶದ ಕ್ಯಾನ್ಸರ್ನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ
ಶ್ವಾಸಕೋಶದ ಕ್ಯಾನ್ಸರ್ ಅಪಾಯಗಳು, ಕಾರಣಗಳು ಮತ್ತು ತಡೆಗಟ್ಟುವಿಕೆ ಹೇಗೆ?:
ಸೆಕೆಂಡ್ ಹ್ಯಾಂಡ್ ಸ್ಮೋಕ್:
ಬೇರೆಯವರು ಧೂಮಪಾನ ಮಾಡುವಾಗ ಆ ಹೊಗೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. ಯಾರಾದರೂ ಸ್ವತಃ ಧೂಮಪಾನ ಮಾಡದಿದ್ದರೂ ಸಹ, ಇತರರಿಂದ ಧೂಮಪಾನದ ಹೊಗೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ರಾಡಾನ್ ಅಪಾಯ:
ರಾಡಾನ್ ಎಂಬುದು ಬಂಡೆಗಳು ಮತ್ತು ಮಣ್ಣಿನಲ್ಲಿ ಕಂಡುಬರುವ ಬಣ್ಣರಹಿತ, ವಾಸನೆಯಿಲ್ಲದ ಅನಿಲವಾಗಿದೆ. ಇದು ಮನೆಗಳು ಮತ್ತು ಕಟ್ಟಡಗಳಿಗೆ ನುಸುಳಬಹುದು. ಹೆಚ್ಚಿನ ಮಟ್ಟದ ರಾಡಾನ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು.
ಪರಿಸರದ ಅಂಶಗಳು:
ಪರಿಸರದಲ್ಲಿನ ಕೆಲವು ಕಾರ್ಸಿನೋಜೆನ್‌ಗಳಾದ ಕಲ್ನಾರಿನ, ಆರ್ಸೆನಿಕ್, ಡೀಸೆಲ್ ಎಕ್ಸಾಸ್ಟ್ ಮತ್ತು ಯುರೇನಿಯಂ, ಕೋಕ್ ಮತ್ತು ಕೆಲಸದ ಸ್ಥಳಗಳಲ್ಲಿ ಬಳಸುವ ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ಅಸ್ತಮಾದಿಂದ ಕ್ಯಾನ್ಸರ್ವರೆಗೆ; ಗ್ರೀನ್ ಆ್ಯಪಲ್ನ ಉಪಯೋಗಗಳಿವು
ಜೆನೆಟಿಕ್ಸ್:
ಕೆಲವು ವ್ಯಕ್ತಿಗಳು ಅನುವಂಶಿಕವಾಗಿ ಶ್ವಾಸಕೋಶದ ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಜೆನೆಟಿಕ್ಸ್ ಕಾರಣದಿಂದ ವಿಶೇಷ ಅಪಾಯವಿಲ್ಲದಿದ್ದರೂ ಅವರು ಕ್ಯಾನ್ಸರ್ಗೆ ತುತ್ತಾಗುತ್ತಾರೆ.
ವಾಯು ಮಾಲಿನ್ಯ:
ಕಲುಷಿತ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಮಟ್ಟದ ಮಾಲಿನ್ಯಕಾರಕಗಳನ್ನು ಹೊಂದಿರುವ ನಗರ ಪ್ರದೇಶಗಳಲ್ಲಿ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ