One Nation One Dialysis : ‘ಭಾರತದಲ್ಲಿ ಪ್ರತೀ ವರ್ಷ 2.2 ಲಕ್ಷ ರೋಗಿಗಳು ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆ (ESRD)ಗೆ ಒಳಗಾಗುತ್ತಿದ್ದು, ವರ್ಷಕ್ಕೆ 3.4 ಕೋಟಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆಗೆ ಮೊರೆಹೋಗುತ್ತಿದ್ದಾರೆ. ಈ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಪ್ರಗತಿ ಉಂಟಾಗದಿದ್ದರೂ ತಾತ್ಕಾಲಿಕವಾಗಿ ಪರಿಹಾರ ನೀಡಬಲ್ಲದು ಎಂಬ ಸತ್ಯ ಗೊತ್ತಿದ್ದೇ ಇಂಥ ದುಬಾರಿ ಚಿಕಿತ್ಸೆಗೆ ಅನೇಕರು ಒಳಗಾಗುತ್ತಿದ್ದಾರೆ. ವಾಸ್ತವದಲ್ಲಿ ಈ ದುಬಾರಿ ಚಿಕಿತ್ಸೆಯ ಹೊಡೆತಕ್ಕೆ ಈಡಾಗುವುದು ಇಡೀ ಕುಟುಂಬ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನ್ಯಾಷನಲ್ ಡಯಲಾಸಿಸ್ ಯೋಜನೆಯಡಿ ರೂಪಿಸಿರುವ ‘ಒನ್ ನೇಶನ್ ಒನ್ ಡಯಾಲಿಸಿಸ್’ ಯೋಜನೆ ಮುಂದಿನ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಭಾನುವಾರ ಚೆನ್ನೈನಲ್ಲಿ ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರವು ತಮಿಳುನಾಡಿನಲ್ಲಿ ಈ ಯೋಜನೆ ಸಾಕಾರಗೊಳ್ಳಲು ರಾಷ್ಟ್ರೀಯ ಆರೋಗ್ಯ ಮಿಷನ್ ನಡಿ ಸುಮಾರು 2,600 ಕೋಟಿ ರೂಪಾಯಿ ಮೀಸಲಿರಿಸಿದೆ. ಅಲ್ಲದೆ, 404 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ವೈದ್ಯಕೀಯ ಮೂಲಸೌಲಭ್ಯ ಕಲ್ಪಿಸಲಿದೆ’ ಎಂದು ಡಾ. ಮಾನ್ಸುಖ್ ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವರು 2016-17 ಬಜೆಟ್ ಮಂಡನೆಯಲ್ಲಿ ರಾಷ್ಟ್ರೀಯ ಡಯಲಾಸಿಸ್ ಯೋಜನೆಯಡಿ ಸಾರ್ವಜನಿಕ-ಖಾಸಗೀ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಯೋಜನೆಯು ಅನುಷ್ಠಾನಗೊಂಡಲ್ಲಿ ಅನೇಕರಿಗೆ ಇದು ಸಹಾಯವಾಗಲಿದೆ.
ಇದನ್ನೂ ಓದಿ : Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ
ಎರಡು ದಿನಗಳ ಮಟ್ಟಿಗೆ ಚೆನ್ನೈ ಮತ್ತು ಪಾಂಡಿಚೇರಿಗೆ ಭೇಟಿ ನೀಡಿದ್ದ ಡಾ. ಮಾನ್ಸುಖ್, ತಮಿಳುನಾಡಿನ ಮಲ್ಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೊಬೋಟಿಕ್ ಸರ್ಜರಿ ಮತ್ತು ಗರ್ಭಪೂರ್ವ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿದರು. ಅಲ್ಲದೆ ಅವಡಿಯಲ್ಲಿ ಸಿಜಿಎಚ್ಸಿ ವೆಲ್ನೆಸ್ ಸೆಂಟರ್ ಮತ್ತು ಪ್ರಯೋಗಾಲಯವನ್ನೂ ಆನ್ಲೈನ್ ಮೂಲಕ ಉದ್ಘಾಟಿಸಿದರು. ಅಪಘಾತ ಚಿಕಿತ್ಸೆ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಮತ್ತು ಬಯೋಫಾರ್ಮಾ ಥೆರಪಿ ಪಡೆಯುತ್ತಿರುವ ಕ್ರೀಡಾಳುಗಳೊಂದಿಗೆ ಮಾತನಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.
ಇದನ್ನೂ ಓದಿ : Health: ಸಸ್ಯಾಧಾರಿತ ಮಾಂಸ ಏನು ಹೀಗೆಂದರೆ?
‘ತಮಿಳುನಾಡಿನಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ 1.58 ಕೋಟಿ ಕುಟುಂಬಗಳು ಒಳಗೊಂಡಿವೆ. ಸದ್ಯ 75 ಲಕ್ಷ ಜನರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ನಿಕ್ಷಯ ಮಿತ್ರ ಅಭಿಯಾನ್ ನಡಿ ಕ್ಷಯರೋಗಿಗಳಿಗೂ ಚಿಕಿತ್ಸೆ ನೀಡಲಾಗುವುದು. ತಮಿಳುನಾಡಿನಲ್ಲಿ ಸದ್ಯ 50,000 ಕ್ಷಯ ರೋಗಿಗಳಿದ್ದು ಚಿಕಿತ್ಸೆ ತೆಗೆದುಕೊಳ್ಳಲು ಮನವೊಲಿಸಲಾಗುತ್ತಿದೆ’ ಎಂದು ಡಾ. ಮಾನ್ಸುಖ್ ತಿಳಿಸಿದರು. ತಮಿಳುನಾಡು ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಮತ್ತು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Published On - 3:55 pm, Tue, 28 June 22