Omicron Symptoms: ಉಗುರಿನ ಬಣ್ಣ ಬದಲಾವಣೆಯಾದರೂ ಓಮಿಕ್ರಾನ್ ಲಕ್ಷಣವಿರಬಹುದು: ಎಚ್ಚರಿಕೆಯಿಂದಿರಿ
ಓಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿಗಳ ಚರ್ಮ ಮತ್ತು ಉಗುರಿನ ಮೇಲ್ಮೈ ಬಣ್ಣ ಬದಲಾವಣೆಯಾಗುತ್ತದೆ ಎಂದು ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನೆಷನ್ ತಿಳಿಸಿದೆ.
ಜಗತ್ತಿನಲ್ಲಿ ಈಗ ಓಮಿಕ್ರಾನ್ ಸೋಂಕಿನ ಆತಂಕ ಎದುರಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ನಲ್ಲಿ ಮೊದಲು ಕಾಣಿಸಿಕೊಂಡ ಕೋರೋನಾ ರೂಪಾಂತರಿ ಓಮಿಕ್ರಾನ್ ಈಗ ಬಹುತೇಕ ರಾಷ್ಟ್ರಗಳಿಗೆ ಹಬ್ಬಿದೆ. ಓಮಿಕ್ರಾನ್ ಸೋಂಕಿನ ಪ್ರಮುಖ ಮತ್ತು ಸಾಮಾನ್ಯ ಲಕ್ಷಣಗಳೆಂದರೆ ಜ್ವರ ಅಥವಾ ದೇಹದ ತಾಪಮಾನ ಹೆಚ್ಚುವುದು, ನಿರಂತರ ಕೆಮ್ಮು ಸೇರಿದಂತೆ ರುಚಿ ಮತ್ತು ವಾಸನೆ ತಿಳಿಯದೆ ಇರುವುದು. ಇದೆಲ್ಲದರ ಹೊರತಾಗಿಯೂ ಓಮಿಕ್ರಾನ್ ಸೋಂಕು ಕೆಲವು ತುರ್ತು ಚಿಕಿತ್ಸೆಗಳನ್ನು ತೆಗೆದುಕೊಳ್ಳುವ ಲಕ್ಷಣಗಳನ್ನು ಹೊಂದಿದೆ ಎಂದು American Centre for Disease Control and Prevention (CDC) ಮಾಹಿತಿ ತಿಳಿಸಿದೆ.
ಉಗುರಿನ ಬಣ್ಣ ಬದಲಾವಣೆ ಓಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿಗಳ ಚರ್ಮ ಮತ್ತು ಉಗುರಿನ ಮೇಲ್ಮೈ ಬಣ್ಣ ಬದಲಾವಣೆಯಾಗುತ್ತದೆ ಎಂದು ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನೆಷನ್ ತಿಳಿಸಿದೆ. ಓಮಿಕ್ರಾನ್ ಸೋಂಕಿತ ವ್ಯಕ್ತಿಗಳಲ್ಲಿ ಉಗುರು ಮತ್ತು ಚರ್ಮದ ಬಣ್ಣ ಬೂದು ಬಣ್ಣ ಅಥವಾ ನೀಲಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಈ ರೀತಿ ಆದರೆ ಸೋಂಕಿತ ವ್ಯಕ್ತಿಗೆ ತಕ್ಷಣ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದರ್ಥ ಎಂದು ಸಿಡಿಸಿ ವಿಜ್ಞಾನಿಗಳು ತಿಳಿಸಿದ್ದಾರೆ.
ಚರ್ಮದಲ್ಲಿ ಬದಲಾವಣೆ ಓಮಿಕ್ರಾನ್ ಸೋಂಕಿತ ವ್ಯಕ್ತಿಗಳ ದೇಹದ ಚರ್ಮದ ಬಣ್ಣವೂ ಬದಲಾವಣೆಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಚರ್ಮ, ಉಗುರು ಮತ್ತು ತುಟಿಯ ಭಾಗಗಳು ದೇಹದಲ್ಲಿನ ಆಕ್ಸಿಜನ್ ಮಟ್ಟವನ್ನು ತಿಳಿಸುತ್ತದೆ. ಇವುಗಳಲ್ಲಿ ಬದಲಾವಣೆಯಾದರೆ ಅಂತಹ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎನ್ನುವ ಮುನ್ಸೂಚನೆಯಾಗಿದೆ. ಅಲ್ಲದೆ ಓಮಿಕ್ರಾನ್ ಸೋಂಕು ತಗುಲಿದವರಿಗೆ ದಿನನಿತ್ಯದ ಕೆಲಸಗಳಲ್ಲಿ ಗೊಂದಲ, ಎದೆನೋವು, ಉಸಿರಾಟದ ಸಮಸ್ಯೆ, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ದಿ ಮಿರರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಓಮಿಕ್ರಾನ್ನ ಪ್ರಮುಖ ಲಕ್ಷಣಗಳೆಂದರೆ ಓಮಿಕ್ರಾನ್ ಸೋಂಕಿತ ವ್ಯಕ್ತಿಗಳಲ್ಲಿ ಗಂಟಲು ಕೆರೆತ, ಸ್ರವಿಸುವ ಮೂಗು, ನಿರಂತರ ಸೀನುವಿಕೆ ಇವು ಮುಖ್ಯವಾದ ಲಕ್ಷಣಗಳಾಗಿವೆ ಎಂದು ZOE ಎನ್ನುವ ರೋಗ ಲಕ್ಷಣ ಪತ್ತೆ ಮಾಡುವ ಆ್ಯಪ್ ಮೂಲಕ ಕಂಡುಹಿಡಿಯಲಾಗಿದೆ. ಹೀಗಾಗಿ ಸಣ್ಣ ಲಕ್ಷಣಗಳು ಕಾಣಿಸಿದರೂ ವೈದ್ಯರನ್ನು ಸಂಪರ್ಕಿಸಿವುದು ಒಳಿತು.
ಇದನ್ನೂ ಓದಿ:
Hair care: ಚಳಿಗಾಲದಲ್ಲಿ ತಲೆ ಕೂದಲ ಕಾಳಜಿ ಹೇಗೆ? ಗೊಂದಲ ಬೇಡ ಸರಳ ವಿಧಾನ ಇಲ್ಲಿದೆ ನೋಡಿ
Published On - 1:41 pm, Wed, 5 January 22