ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ; ಈ ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ
ಮಕ್ಕಳಲ್ಲಿ ಕೂಡ ಇತ್ತೀಚೆಗೆ ಹೃದ್ರೋಗ, ಮಧುಮೇಹ, ಬಿಪಿ ಮುಂತಾದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿರುವುದು ಆತಂಕ ಮೂಡಿಸಿದೆ. ಮಕ್ಕಳಿಗೆ ನೀಡುವ ಆಹಾರ, ಅವರ ಜೀವನಶೈಲಿ ಕೂಡ ಎಳೆಯ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತಿವೆ. ಮಕ್ಕಳಲ್ಲಿ ಕಂಡುಬರುವ ಈ ಟೈಪ್ 1 ಮಧುಮೇಹದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ವಯಸ್ಸಾದವರನ್ನು ಹೆಚ್ಚಾಗಿ ಕಾಡುತ್ತಿದ್ದ ಬಿಪಿ (Blood Pressure), ಶುಗರ್ ಈಗ 30 ವರ್ಷ ಮೇಲ್ಪಟ್ಟವರನ್ನು ಕೂಡ ಕಾಡಲಾರಂಭಿಸಿದೆ. ಇದರ ಜೊತೆಗೆ ಇತ್ತೀಚೆಗೆ ಸಣ್ಣ ಮಕ್ಕಳಲ್ಲಿ ಕೂಡ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಉಂಟಾಗುತ್ತಿರುವುದು ಕಳವಳ ಮೂಡಿಸಿದೆ. ಟೈಪ್ 1 ಮಧುಮೇಹವು (Diabetes) ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದ ಸ್ಥಿತಿಯಾಗಿದೆ. ಇನ್ಸುಲಿನ್ ಎಂಬುದು ನಮ್ಮ ದೇಹದ ಪ್ರಮುಖ ಹಾರ್ಮೋನ್ ಆಗಿದೆ.
ತಜ್ಞರ ಪ್ರಕಾರ, ನಿಮ್ಮ ಮಗುವಿಗೆ ಬದುಕಲು ಇನ್ಸುಲಿನ್ ಅಗತ್ಯವಿದೆ. ಆದ್ದರಿಂದ ಅದು ಉತ್ಪಾದನೆಯಾಗದಿದ್ದರೆ ಹಾರ್ಮೋನ್ ಅನ್ನು ದಿನವೂ ಇಂಜೆಕ್ಷನ್ ಮೂಲಕ ನೀಡಬೇಕಾಗುತ್ತದೆ. ತಜ್ಞರ ಪ್ರಕಾರ, ಟೈಪ್ 1 ಡಯಾಬಿಟಿಸ್ ಅನ್ನು ಜುವೆನೈಲ್ ಡಯಾಬಿಟಿಸ್ ಎಂದೂ ಕರೆಯುತ್ತಾರೆ. ಇದು ಮಕ್ಕಳಲ್ಲಿ ಕಂಡುಬರುವ ರೋಗನಿರ್ಣಯವಾಗಿದೆ. ನಿಮ್ಮ ಮಗುವಿನ ವಯಸ್ಸನ್ನು ಅವಲಂಬಿಸಿ ಅವರಿಗೆ ಇಂಜೆಕ್ಷನ್ ಅನ್ನು ಹೇಗೆ ನೀಡಬೇಕು, ಕಾರ್ಬೋಹೈಡ್ರೇಟ್‌ಗಳನ್ನು ಕೌಂಟ್ ಮಾಡುವುದು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮುಖ್ಯವಾಗಿ ಅವರ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವುದು ಹೇಗೆ ಎಂದು ಪೋಷಕರು ತಿಳಿದಿರಬೇಕು.
ಇದನ್ನೂ ಓದಿ: ಮಧುಮೇಹಿಗಳ ದೇಹದಲ್ಲಿ ಈ ಲಕ್ಷಣ ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಬೇಡ
ಟೈಪ್ 1 ಮಧುಮೇಹಕ್ಕೆ ಆಜೀವ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿರುತ್ತದೆ. ಕಳಪೆ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಅಧಿಕ ತೂಕದಂತಹ ಅಂಶಗಳೊಂದಿಗೆ ಇದು ಸಂಬಂಧಿಸಿದೆ. ಆದ್ದರಿಂದ, ಮಕ್ಕಳಲ್ಲಿ ಮಧುಮೇಹದ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ. ಅವುಗಳಲ್ಲಿ ಕೆಲವು ಲಕ್ಷಣಗಳು ಇಲ್ಲಿವೆ.
ಆಗಾಗ ಮೂತ್ರ ವಿಸರ್ಜನೆ:
ಅತಿಯಾದ ಬಾಯಾರಿಕೆ ಮತ್ತು ಪದೇಪದೆ ಮೂತ್ರ ವಿಸರ್ಜನೆ ಮಾಡುವುದು ನಿಮ್ಮ ಮಗುವಿಗೆ ಮಧುಮೇಹ ಬಂದಿರುವ ಸಂಕೇತವನ್ನು ಸೂಚಿಸುತ್ತದೆ. ತಜ್ಞರ ಪ್ರಕಾರ, ಹಾಸಿಗೆ ಒದ್ದೆಯಾಗುವುದು, ಪದೇಪದೆ ಮೂತ್ರ ವಿಸರ್ಜಿಸುವುದನ್ನು ನಿರ್ಲಕ್ಷ್ಯ ಮಾಡಬೇಡಿ. ಆಗಾಗ ಮೂತ್ರ ವಿಸರ್ಜನೆ ಮಾಡುವುದು ತೀವ್ರ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ನಿಮ್ಮ ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ವಿಪರೀತ ಹಸಿವು:
ವಿಪರೀತ ಹಸಿವನ್ನು ಪಾಲಿಫ್ಯಾಜಿಯಾ ಎಂದೂ ಕರೆಯುತ್ತಾರೆ. ನೀವು ತೀವ್ರವಾದ ಹಸಿವನ್ನು ಅನುಭವಿಸಿದಾಗ ಇದು ಸಂಭವಿಸುತ್ತದೆ. ವೈದ್ಯರ ಪ್ರಕಾರ, ಅತಿಯಾಗಿ ತಿನ್ನುವುದರಿಂದ ಪಾಲಿಫೇಜಿಯಾ ದೂರವಾಗುವುದಿಲ್ಲ. ಇದಕ್ಕೆ ತಕ್ಷಣವೇ ಚಿಕಿತ್ಸೆ ಅಥವಾ ರೋಗನಿರ್ಣಯದ ಅಗತ್ಯವಿದೆ. ಹಸಿವಿನ ಹೆಚ್ಚಳವು ಉಪವಾಸ ಅಥವಾ ಶ್ರಮದಾಯಕ ವ್ಯಾಯಾಮದಂತಹ ಸಂದರ್ಭಗಳಿಗೆ ಸಾಮಾನ್ಯ ದೈಹಿಕ ಪ್ರತಿಕ್ರಿಯೆಯಾಗಿದೆ. ಆದರೆ ಪಾಲಿಫೇಜಿಯಾದಂತಹ ತೀವ್ರವಾದ ಹಸಿವು ಸಾಮಾನ್ಯವಾಗಿ ಟೈಪ್ 1 ಮಧುಮೇಹದ ಸಂಕೇತವಾಗಿದೆ.
ದೃಷ್ಟಿಯ ಸಾಮರ್ಥ್ಯ ಕಡಿಮೆಯಾಗುವುದು:
ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ ಎಂಬುದು ಮಧುಮೇಹಕ್ಕೆ ಸಂಬಂಧಿಸಿದ ರೆಟಿನೋಪತಿಯೊಂದಿಗೆ ಸಂಭವಿಸುವ ಊತವಾಗಿದೆ. ಅಧ್ಯಯನಗಳ ಪ್ರಕಾರ, ರೆಟಿನಾದ ಮಧ್ಯಭಾಗದಲ್ಲಿರುವ ಸಣ್ಣ ರಕ್ತನಾಳಗಳಾದ ಮ್ಯಾಕುಲಾ ಸೋರಿಕೆಯಾಗಲು ಪ್ರಾರಂಭಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ. ಇದು ರೆಟಿನಾ ಊದಿಕೊಳ್ಳಲು ಕಾರಣವಾಗುತ್ತದೆ ಮತ್ತು ದೃಷ್ಟಿಯ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗುತ್ತದೆ.
ಇದನ್ನೂ ಓದಿ: ಮಧುಮೇಹ ಬಾರದಂತೆ ತಡೆಯಲು ಈ 10 ಆಹಾರ ಸೇವಿಸಿ
ಮರುಕಳಿಸುವ ಸೋಂಕುಗಳು:
ನಿರಂತರವಾದ ಅಧಿಕ ರಕ್ತದ ಸಕ್ಕರೆ ಮಟ್ಟ ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ರೋಗಕಾರಕಗಳು ದೇಹವನ್ನು ಪ್ರವೇಶಿಸಿದಾಗ, ಅವು ಗುಣಿಸಲು ಮತ್ತು ಸೋಂಕನ್ನು ಅಭಿವೃದ್ಧಿಪಡಿಸಲು ಅನುಕೂಲಕರ ವಾತಾವರಣವನ್ನು ಪಡೆಯುತ್ತವೆ. ಮೂತ್ರಕೋಶ, ಮೂತ್ರಪಿಂಡಗಳು, ಯೋನಿ, ಒಸಡುಗಳು, ಪಾದಗಳು ಮತ್ತು ಚರ್ಮವು ಸೋಂಕಿಗೆ ಒಳಗಾಗುತ್ತದೆ.
ಮನಸ್ಥಿತಿಯ ಏರು ಪೇರು:
ನಿಮ್ಮ ಮಗುವು ಸಾಮಾನ್ಯಕ್ಕಿಂತ ಹೆಚ್ಚು ಮಾನಸಿಕವಾಗಿ ಚಂಚಲವಾಗಿದ್ದರೆ ಮತ್ತು ಈ ಕೆಲವು ಇತರ ರೋಗಲಕ್ಷಣಗಳನ್ನು ಹೊಂದಿದ್ದರೆ, ಮಧುಮೇಹ ಉಂಟಾಗಿರುವ ಸಾಧ್ಯತೆ ಇರುತ್ತದೆ. ಆಗಾಗ ಮಕ್ಕಳ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಮುಖ್ಯವಾಗಿದೆ. ಅಧಿಕ ರಕ್ತದ ಗ್ಲೂಕೋಸ್ ಮಟ್ಟ ಇರುವ ಮಕ್ಕಳು ಉದ್ವಿಗ್ನತೆ, ಕೋಪ, ದುಃಖ, ಆತಂಕ, ಆಲಸ್ಯವನ್ನು ಅನುಭವಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ