Child Health: ಕೋವಿಡ್ ನಂತರ ಮಕ್ಕಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆಗಳು; ಸಮೀಕ್ಷೆ
ಕೋವಿಡ್‌ಗೂ ಮುನ್ನ ಮಕ್ಕಳಿಗೆ ವರ್ಷಕ್ಕೆ 2-3 ಬಾರಿ ಜ್ವರ , ನೆಗಡಿ ಮತ್ತು ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳುತ್ತಿತ್ತು ಆದರೆ, ಇದೀಗಾ ಅದು ನಾಲ್ಕು ಪಟ್ಟು ಹೆಚ್ಚಾಗಿದೆ. ಶಾಲೆಗೆ ಹೋಗುವ ಮಕ್ಕಳು ಮತ್ತೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಲ್ಲದೇ ಮಕ್ಕಳಿಂದ ಪೋಷಕರಿಗೂ ಹರಡುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಕೋವಿಡ್ ಸಾಂಕ್ರಾಮಿಕ ಸುಮಾರು 2 ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಬಲಿಪಡೆದಿದ್ದರೂ ಕೂಡ ಅದರ ಪ್ರಭಾವ ಇನ್ನು ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ನಡೆಸಿದ ಸಂಶೋಧನೆಯೊಂದರ ಪ್ರಕಾರ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೋವಿಡ್ ನಂತರದ ವರ್ಷಗಳಲ್ಲಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ. ಕೋವಿಡ್ ನಂತರ ಮಕ್ಕಳಲ್ಲಿ ಜ್ವರ ಮತ್ತು ಶ್ವಾಸಕೋಶದ ಸಮಸ್ಯೆ ಹೆಚ್ಚಾಗಿದೆ. ಕೋವಿಡ್‌ಗೂ ಮುನ್ನ ಮಕ್ಕಳಿಗೆ ವರ್ಷಕ್ಕೆ 2ರಿಂದ 3 ಬಾರಿ ಜ್ವರ , ನೆಗಡಿ ಮತ್ತು ಕೆಮ್ಮು ಲಕ್ಷಣಗಳು ಕಾಣಿಸಿಕೊಳ್ಳುತ್ತಿತ್ತು ಆದರೆ, ಇದೀಗಾ ಅದು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸಮೀಕ್ಷೆ ಸಂಸ್ಥೆಯಾದ ಲೋಕಲ್ ಸರ್ಕಲ್ ದೇಶಾದ್ಯಂತ 317 ಜಿಲ್ಲೆಗಳ 31,000 ಪೋಷಕರಿಂದ ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳ ಆರೋಗ್ಯದ ಕುರಿತು ಡೇಟಾವನ್ನು ಸಂಗ್ರಹಿಸಲಾಗಿದ್ದು, ಸಂಗ್ರಹಿಸಿದ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ದೇಶದಲ್ಲಿ ವಿವಿಧ ರೀತಿಯ ಇನ್ಫ್ಲುಯೆನ್ಸ ವೈರಸ್ಗಳು ಹರಡುತ್ತಿವೆ. ಶಾಲೆಗೆ ಹೋಗುವ ಮಕ್ಕಳು ಮತ್ತೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದು ಕೋವಿಡ್‌ನಿಂದಾಗಿರಬಹುದು. ಮಕ್ಕಳಿಂದ ಪೋಷಕರಿಗೂ ಹರಡುತ್ತಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಮಕ್ಕಳಿಗೆ ಜ್ವರ, ನೆಗಡಿ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬಂದರೆ ಅವು ಕಡಿಮೆಯಾಗಲು ಬಹಳ ಸಮಯ ಹಿಡಿಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಇದನ್ನೂ ಓದಿ: ಗಂಟಲು ಕೆರೆತ, ಗಂಟಲು ಕಿರಿಕಿರಿ, ಗಂಟಲು ನೋವು ಕಡಿಮೆ ಮಾಡಲು ಈ ಮನೆಮದ್ದು ಟ್ರೈ ಮಾಡಿ
ಸಮೀಕ್ಷೆಯ ಪ್ರಕಾರ ಶೇಕಡಾ 30ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಕಳೆದ 12 ತಿಂಗಳುಗಳಲ್ಲಿ 4 ರಿಂದ 6 ಬಾರಿ ಜ್ವರ, ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಇದನ್ನು ವೈದ್ಯರು ಕೂಡ ಒಪ್ಪಿಕೊಂಡಿದ್ದು, ಕೋವಿಡ್ ನಂತರ ಮಕ್ಕಳಲ್ಲಿ ಜ್ವರ, ನೆಗಡಿ ಮತ್ತು ಕೆಮ್ಮಿನ ಪ್ರಮಾಣವು ಖಂಡಿತವಾಗಿಯೂ ಹೆಚ್ಚಾಗಿದೆ. ಜೊತೆಗೆ, ಈಗ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಕೋವಿಡ್ ಅವಧಿಯಲ್ಲಿ ಸುಮಾರು 2 ವರ್ಷಗಳ ಕಾಲ ಮನೆಯಲ್ಲಿಯೇ ಇದ್ದ ಮಕ್ಕಳು ಈಗ ಶಾಲೆಗೆ ಹೋಗುತ್ತಿದ್ದಾರೆ ಮತ್ತು ಅವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಲು ಇದೇ ಕಾರಣವಾಗಿರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: