ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು

ಸೋಕಿನಿಂದ ಚೇತರಿಸಿಕೊಂಡವರಲ್ಲಿ ಸ್ಟ್ರೋಕ್, ಮರೆಗುಳಿತನ ಮತ್ತು ನರರೋಗಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳು ಅಪರೂಪವಾದರೂ ತೀವ್ರ ಸ್ವರೂಪದ ಸೋಂಕಿಗೊಳಗಾಗಿ ಚೇತರಿಸಿಕೊಂಡವರಲ್ಲಿ ಅವುಗಳ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು
ಕೊವಿಡ್-19 ಸೋಂಕಿತನಿಗೆ ಚಿಕಿತ್ಸೆ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 07, 2021 | 8:50 PM

ಕೊವಿಡ್​-19 ಸೋಕಿನಿಂದ ಚೇತರಿಸಿಕೊಂಡ 6 ತಿಂಗಳೊಳಗೆ ಮೂವರಲ್ಲಿ ಒಬ್ಬರು ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವುದು ಅಮೆರಿಕದ ಸಂಶೋಧನೆಯೊಂದರ ಮೂಲಕ ಧೃಡಪಟ್ಟಿದೆ. ಸೋಂಕಿನಿಂದ ಚೇತರಿಸಿಕೊಂಡ 2,30,300 ಅಮೆರಿಕನ್ನರನ್ನು ಸಮೀಕ್ಷೆಗೊಳಪಡಿಸಿದ ನಂತರ ಈ ಅಂಶವನ್ನು ಕಂಡುಕೊಳ್ಳಲಾಗಿದ್ದು, ಈ ಮಹಾಮಾರಿಯು ಚೇತರಿಸಿಕೊಂಡ ಹಲವಾರು ಜನರಿಗೆ ಮಾನಸಿಕ ಮತ್ತು ನರರೋಗಗಳನ್ನು ತಂದೊಡ್ಡಲಿದೆಯೆಂದು ವಿಜ್ಞಾನಿಗಳು ಮಂಗಳವಾರದಂದು ಹೇಳಿದ್ದಾರೆ. ಸೋಂಕಿತರ ಮಾನಸಿಕ ಸ್ಥಿತಿಗಳಾದ ಆತಂಕ ಮತ್ತು ಖಿನ್ನತೆಯೊಂದಿಗೆ ಕೊರೊನಾ ವೈರಸ್ ಬೆಸೆದುಕೊಂಡಿರುವುದು ಈಗ ಸ್ಪಷ್ಟವಾಗಿದೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಹೇಳಿದ್ದಾರೆ.

ಸೋಕಿನಿಂದ ಚೇತರಿಸಿಕೊಂಡವರಲ್ಲಿ ಸ್ಟ್ರೋಕ್, ಮರೆಗುಳಿತನ ಮತ್ತು ನರರೋಗಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳು ಅಪರೂಪವಾದರೂ ತೀವ್ರ ಸ್ವರೂಪದ ಸೋಂಕಿಗೊಳಗಾಗಿ ಚೇತರಿಸಿಕೊಂಡವರಲ್ಲಿ ಅವುಗಳ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಚೇತರಿಸಿಕೊಂಡವರು ಎದುರಿಸಬಹುದಾದ ಮಾನಸಿಕ ಅನಾರೋಗ್ಯಗಳ ಅಪಾಯ ವ್ಯಕ್ತಿಗತವಾಗಿ ಚಿಕ್ಕದಾದರೂ ಜನಸ್ತೋಮದ ಮೇಲೆ ಆಗುವ ಪರಣಾಮವನ್ನು ಕಡೆಗಣಿಸುವಂತಿಲ್ಲ,’ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಆಕ್ಸಫರ್ಡ್ ವಿಶ್ವಿವಿದ್ಯಾಲಯದ ಮಾನಸಿಕ ವಿಭಾಗದ ಪ್ರೊಫೆಸರ್ ಪಾಲ್ ಹ್ಯಾರಿಸನ್ ಹೇಳಿದ್ದಾರೆ.

Covid-19 may cause mental illness

ಕೊವಿಡ್​ ಸೋಂಕು ಕೆಲವರಲ್ಲಿ ಮಾನಸಿಕ ಕಾಯಿಲೆಗಳನ್ನು ಉಂಟುಮಾಡಬಲ್ಲದು

ಹ್ಯಾರಿಸನ್ ಅವರೊಂದಿಗೆ ಸಂಶೋಧನೆಯಲ್ಲಿ ಭಾಗಿಯಾದವರಲ್ಲಿ ಒಬ್ಬರು ಮತ್ತು ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಮ್ಯಾಕ್ಸ್ ತಾಕೆ ಅವರು, ‘ಜೈವಿಕ ಮತ್ತು ಮಾನಸಿಕ ಆಯಾಮಗಳನ್ನು ಸಂಶೋಧನೆಯಲ್ಲಿ ಅಭ್ಯಾಸ ಮಾಡುವುದು ಸಾಧ್ಯವಾಗಿಲ್ಲ, ಆದರೆ ಜನರನ್ನು ಪೋಸ್ಟ್-ಕೊವಿಡ್ ಅನಾರೋಗ್ಯಗಳಿಂದ ರಕ್ಷಿಸಲು ಮತ್ತು ಅವರಿಗೆ ಚಿಕಿತ್ಸೆ ಒದಗಿಸಲು ಸಂಶೋಧನೆಯ ತುರ್ತು ಅಗತ್ಯವಿತ್ತು’ ಎಂದು ಹೇಳಿದರು.

ಸೋಂಕಿನಿಂದ ಚೇತರಿಸಿಕೊಂಡರಲ್ಲಿ ಮೆದುಳು ಮತ್ತು ಮಾನಸಿಕ ಆರೋಗ್ಯದ ಅಪಾಯಗಳ ಬಗ್ಗೆ ಲಭ್ಯವಾಗುತ್ತಿರುವ ಮಾಹಿತಿ ಮತ್ತು ಅದಕ್ಕೆ ಸಂಬಂಧಿಸಿದ ಪುರಾವೆ ಆರೋಗ್ಯ ಪರಿಣಿತರಲ್ಲಿ ಕಳವಳವನ್ನುಂಟು ಮಾಡುತ್ತಿದೆ. ಸಂಶೋಧಕರ ಇದೇ ತಂಡವು ಕಳೆದ ವರ್ಷ ನಡೆಸಿದ ಅಧ್ಯಯನದ ಪ್ರಕಾರ ಸೋಕಿನಿಂದ ಚೇತರಿಸಿಕೊಂಡ ಮೂರು ತಿಂಗಳೊಳಗೆ ಶೇಕಡಾ 20 ಜನರಲ್ಲಿ ಮಾನಸಿಕ ಅಸ್ವಸ್ಥತೆಗಳು ಗೋಚರಿಸಿದ್ದವು.

ಲ್ಯಾನ್ಸೆಟ್ ಮಾನಸಿಕ ಆರೋಗ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಚೇತರಿಸಿಕೊಂಡ 2.36, 379 ಜನರ (ಇವರಲ್ಲಿ ಹೆಚ್ಚಿನವರು ಅಮೇರಿಕನ್ನರು) ಆರೋಗ್ಯದ ದಾಖಲೆಗಳನ್ನು ಪರಿಶೀಲಿಸಿದಾಗ ಅವರಲ್ಲಿ ಶೇಕಡಾ 34 ಜನ ಚೇತರಿಕೆಯ 6 ತಿಂಗಳು ಅವಧಿಯೊಳಗೆ ಮಾನಸಿಕ ಮತ್ತು ನರರೋಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿರುವುದು ಕಂಡುಬಂದಿದೆ.

ಇನ್​ಪ್ಲುಯೆಂಜಾ ಅಥವಾ ಬೇರೆ ತೆರನಾದ ಕಾಯಿಲೆಗಳಿಂದ ಚೇತರಿಸಿಕೊಂಡವರಕ್ಕಿಂತ ಕೊವೊಡ್​ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗಿ ಕಂಡುಬಂದವು ಎಂದು ವಿಜ್ಞಾನಿಗಳು ಹೇಳಿರುವುದು ಕೊವಿಡ್​ ಚೇತರಿಕೆಯ ನಂತರವೂ ಜನರ ಆರೋಗ್ಯದ ಮೇಲೆ ನಿರ್ದಿಷ್ಟವಾದ ಪರಿಣಾಮ ಬೀರಬಲ್ಲದು ಎನ್ನುವುದನ್ನು ಸೂಚಿಸುತ್ತದೆ.

ಚೇತರಿಸಿಕೊಂಡವರಲ್ಲಿ ಶೇಕಡಾ 17 ಜನ ಆತಂಕ ಮತ್ತು ಖಿನ್ನತೆಯಿಂದ ಬಳಲಿದರೆ, ಶೇಕಡಾ 14 ಜನ ಮಾನಸಿಕ ಅಸಮತೋಲನದಿಂದ ತೊಂದರೆ ಅನುಭವಿಸಿದರು. ಇವರು ಸೋಂಕಿಗೊಳಗಾದಾಗ ಅದರ ತೀವ್ರತೆ ಎಷ್ಟಿತ್ತೆನ್ನುವುದು ವಿಜ್ಞಾನಿಗಳಿಗೆ ತಿಳಿಯಲು ಸಾಧ್ಯವಾಗಲಿಲ್ಲ. ಆದರೆ, ಅವರಲ್ಲಿ ಐಸಿಯುಗೆ ದಾಖಲಾಗಿದ್ದ ಶೇಕಡಾ 7ರಷ್ಟು ಜನ ಚೇತರಿಸಿಕೊಂಡ 6 ತಿಂಗಳ ಅವಧಿಯೊಳಗೆ ಸ್ಟ್ರೋಕ್​ಗೊಳಗಾದರೆ ಶೇಕಡಾ 2ರಷ್ಟು ಜನ ಮರೆಗುಳಿತನ ಅವಸ್ಥೆಗೆ ಈಡಾದರು.

ಸದರಿ ಸಂಶೋಧನೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳು ಬೇರೆ ಆರೋಗ್ಯ ಪರಿಣಿತರಲ್ಲಿ ಕಳವಳವನ್ನುಂಟು ಮಾಡಿವೆ. ‘ಈ ಸಂಶೋಧನೆಯು ಬಹಳ ಮಹತ್ವದ್ದಾಗಿದೆ. ಕೊವಿಡ್-19 ಒಬ್ಬ ಸೋಂಕಿತನ ಮೆದುಳು ಮತ್ತು ಮಾನಸಿಕ ಸ್ಥಿತಿ ಎರಡರ ಮೇಲೂ ಸಮನಾದ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ,’ ಎಂದು ಲಂಡನ್​ನ ಕಿಂಗ್ಸ್ ಕಾಲೆಜಿನ ಮಾನಸಿಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಸೈಮನ್ ವೆಸ್ಲಿ ಹೇಳಿದ್ದಾರೆ.

‘ಚೇತರಿಸಿಕೊಂಡವರ ಮಾನಸಿಕ ಆರೋಗ್ಯದ ಮೇಲೆ ಕೊವಿಡ್-19 ಭಾರಿ ಪರಿಣಾಮ ಬೀರಬಲ್ಲದು. ಮಾನಸಿಕ ಅಸ್ವಸ್ಥತೆಗಳಿಗೆ ಈಡಾಗುತ್ತಿರುವವರ ಸಂಖ್ಯೆ ಈಗಾಗಲೇ ಸಾಕಷ್ಟು ಹೆಚ್ಚಿದ್ದು ಇನ್ನು ಕೋವಿಡ್ ಸಹ ಅದಕ್ಕೆ ತನ್ನ ಕಾಣಿಕೆ ನೀಡಲಿದೆ,’ ಎಂದು ಎಮ್​ಕ್ಯೂ ಆರೋಗ್ಯ ಸಂಶೋಧನಾ ಸಂಸ್ಥೆಯ ಚೀಫ್ ಎಕ್ಸಿಕ್ಯುಟಿವ್ ಲಿಯ ಮಿಲ್ಲಿಗನ್ ಹೇಳಿದ್ದಾರೆ.

ಇದನ್ನೂ ಓದಿ: Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ