
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಂಬಂಧಿತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ನೀವು ನೋಡಿರಬಹುದು. ಮೊದಲೆಲ್ಲಾ ಈ ರೋಗ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ ಹಾಗಲ್ಲ, ಸಣ್ಣ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಂಡುಬರುತ್ತಿದೆ. ಮಧುಮೇಹ ಸಾಮಾನ್ಯವಾಗಿ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಸಂಬಂಧಿಸಿದೆಯಾದರೂ ಇದರ ಪರಿಣಾಮ ಚರ್ಮ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ದೀರ್ಘಕಾಲದವರೆಗೆ ಹೆಚ್ಚಾಗಿದ್ದರೆ, ಅದು ದೇಹದಲ್ಲಿನ ರಕ್ತದ ಹರಿವು ಮತ್ತು ತೇವಾಂಶದ ಸಮತೋಲನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದು ಚರ್ಮದ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಜನ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಚರ್ಮದ ಮೇಲೆ ಗೋಚರಿಸುವ ಲಕ್ಷಣಗಳು ಮಧುಮೇಹದ ಆರಂಭಿಕ ಮುನ್ಸೂಚನೆಯಾಗಿರಬಹುದು. ಹಾಗಾಗಿ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯವಾಗುತ್ತದೆ.
ಮಧುಮೇಹದ ಸಂದರ್ಭದಲ್ಲಿ ಚರ್ಮದ ಮೇಲೆ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ. ದೇಹ ಅಗತ್ಯ ತೇವಾಂಶ ಕಾಪಾಡಿಕೊಳ್ಳಲು ಕಷ್ಟವಾದಾಗ ಚರ್ಮ ಅತಿಯಾಗಿ ಒಣಗುವುದು ಸಾಮಾನ್ಯ ಸಮಸ್ಯೆ. ಆದರೆ ಕೆಲವರಲ್ಲಿ ಆಗಾಗ ತುರಿಕೆ ಅಥವಾ ಸುಡುವ ಸಂವೇದನೆಗಳು ಕಂಡುಬರುತ್ತದೆ. ಚರ್ಮದ ಮೇಲೆ, ಅದರಲ್ಲಿಯೂ ಕುತ್ತಿಗೆ ಅಥವಾ ತೊಡೆಯ ಸುತ್ತ ಕಪ್ಪು ಕಲೆಗಳು ಕಂಡು ಬರುವುದು ಸಹ ಒಂದು ಲಕ್ಷಣವಾಗಿರಬಹುದು. ಸಣ್ಣ ಕಡಿತ ಅಥವಾ ಗಾಯಗಳು ಗುಣವಾಗುವುದಕ್ಕೆ ಸಮಯ ತೆಗೆದುಕೊಳ್ಳುವುದು ಮಧುಮೇಹಕ್ಕೆ ಸಂಬಂಧಿಸಿದ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ, ಪುನರಾವರ್ತಿತ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು, ಹುಣ್ಣುಗಳು ಅಥವಾ ಮೊಡವೆ ಕಾಣಿಸಿಕೊಳ್ಳುವುದು ಅಥವಾ ಚರ್ಮದ ಮೇಲೆ ನಿರಂತರ ಕೆಂಪು ಬಣ್ಣ ಕಂಡುಬರುವುದು. ಹೀಗೆ ಈ ಎಲ್ಲಾ ಬದಲಾವಣೆಗಳು ದೇಹದ ಸಕ್ಕರೆ ಮಟ್ಟ ಸಮತೋಲಿತವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ
ನಿಮ್ಮ ಚರ್ಮದ ಮೇಲೆ ಇಂತಹ ಬದಲಾವಣೆಗಳನ್ನು ನಿರಂತರವಾಗಿ ಗಮನಿಸಿದರೆ, ನೀವು ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಮಧುಮೇಹವನ್ನು ನಿಯಂತ್ರಣದಲ್ಲಿಡಲು, ಸಮತೋಲಿತ ಆಹಾರ ಸೇವನೆ ಮಾಡಿ, ನಿಯಮಿತವಾಗಿ ವ್ಯಾಯಾಮ ಮಾಡಿ ಅದರ ಜೊತೆಗೆ ವೈದ್ಯರು ಸೂಚಿಸಿದಂತ ಔಷಧಿಗಳನ್ನು ಸೇವನೆ ಮಾಡಿ. ಚರ್ಮವನ್ನು ಸ್ವಚ್ಛವಾಗಿ ಮತ್ತು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಿ. ಚರ್ಮ ಸ್ನೇಹಿ ಉತ್ಪನ್ನಗಳನ್ನು ಉಪಯೋಗ ಮಾಡಿ. ಯಾವುದೇ ರೀತಿಯ ಸೋಂಕು ಅಥವಾ ಗಾಯವದಲ್ಲಿ ನಿರ್ಲಕ್ಷಿಸಬೇಡಿ, ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ