ಮಧುಮೇಹ, ಕ್ಯಾನ್ಸರ್ ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಬ್ಲ್ಯಾಕ್ ಫಂಗಸ್ ಸೋಂಕಿನ ಕುರಿತು ಎಚ್ಚರಿಕೆಯಿಂದಿರಿ
ಕೊವಿಡ್-19 ಸಾಂಕ್ರಾಮಿಕ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಬ್ಲ್ಯಾಕ್ ಫಂಗಸ್ ಸೋಂಕು ಕೂಡಾ ಜನರ ಕುತೂಹಲ ಕೆರಳಿಸಿದೆ. ಮಧುಮೇಹ ಅಥವಾ ತೀವ್ರವಾಗಿ ರೋಗನಿರೋಧಕ ಶಕ್ತಿ ಕೊರತೆ ಹೊಂದಿರುವವರಿಗೆ ಮಾರಣಾಂತಿಕವಾಗಬಹುದು.
ಕೊವಿಡ್-19 ಸಾಂಕ್ರಾಮಿಕ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಬ್ಲ್ಯಾಕ್ ಫಂಗಸ್ ಸೋಂಕು ಕೂಡಾ ಜನರ ಕುತೂಹಲ ಕೆರಳಿಸಿದೆ. ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಎಂದೂ ಕರೆಯಲ್ಪಡುವ ಇದು ಅಪರೂಪದ ಶಿಲೀಂಧ್ರ ಸೋಂಕಾಗಿದೆ. ಮಧುಮೇಹ ಅಥವಾ ತೀವ್ರವಾಗಿ ರೋಗನಿರೋಧಕ ಶಕ್ತಿ ಕೊರತೆ ಹೊಂದಿರುವವರಿಗೆ ಮಾರಣಾಂತಿಕವಾಗಬಹುದು.
ಮ್ಯೂಕೋರ್ಮೈಕೋಸಿಸ್ ಸೋಂಕು ಸೈನಸ್, ಮೆದುಳು ಅಥವಾ ಶ್ವಾಸಕೋಶಗಳಿಗೆ ಅಂಟಿಕೊಳ್ಳುತ್ತವೆ. ಈ ಕುರಿಂತೆ ಅಂತಃಸ್ರಾವಶಾಸ್ತ್ರಜ್ಞ ಡಾ.ಶ್ವೇತಾ ಬುಡ್ಯಾಲ್ ವಿವರಿಸುತ್ತಾರೆ. ‘ಬಾಯಿಯ ಕುಹರ ಅಥವಾ ಮೆದುಳಿನಲ್ಲಿ ಸಾಮಾನ್ಯವಾಗಿ ಮ್ಯೂಕೋರ್ಮೈಕೋಸಿಸ್ ಅಂಟಿಕೊಳ್ಳುತ್ತದೆ. ಜತೆಗೆ ಜಠರ, ಕರುಳು, ಚರ್ಮ ಹಾಗೂ ಇತರ ಅಂಗಗಳಿಗೂ ಸೋಂಕು ತಗುಲುವಂತೆ ಮಾಡುತ್ತದೆ’ ಎಂದು ಮಾಹಿತಿ ತಿಳಿಸಿದ್ದಾರೆ.
* ಸೈನುಟಿಸ್- ಮೂಗಿನಲ್ಲಿ ಕಸಿವಿಸಿ, ಶೀತ * ಕನ್ನೆಯ ಭಾಗದಲ್ಲಿ ನೋವು ಉಂಟಾಗುವುದು. ಮುಖದ ಒಂದು ಭಾಗದಲ್ಲಿ (ಅರ್ಧ ಭಾಗ) ಮಾತ್ರ ನೋವು ಕಾಣಿಸಿಕೊಳ್ಳುವುದು * ಹಲ್ಲುಗಳು ಸಡಿಗೊಳ್ಳುವುದು * ಕಣ್ಣಿನ ದೃಷ್ಟಿ ಮುಸುಕಾಗುವುದು * ಎದೆ ನೋವು, ಉಸಿರಾಟದ ತೊಂದರೆ
ತೀವ್ರವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದ ಜನರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ದೇಶಾದ್ಯಂತ ಹರಡಿರುವ ಕೊವಿಡ್ 19 ಸಮಯದಲ್ಲಿ ಹೆಚ್ಚುತ್ತಿರುವ ಮ್ಯೂಕೋರ್ಮೈಕೋಸಿಸ್ ವಿರುದ್ಧ ದೇಶಾದ್ಯಂತ ಮಧುಮೇಹ ತಜ್ಞರು ಎಚ್ಚರವಹಿಸುತ್ತಿದ್ದಾರೆ. ಅಪಾಯವನ್ನು ಕಡಿಮೆ ಮಾಡಲು, ಜನರು ಶುಗರ್ ಟೆಸ್ಟ್ ಮಾಡಿಸಿಕೊಳ್ಳುವಂತೆ ವೈದ್ಯರು ಒತ್ತಾಯಿಸುತ್ತಿದ್ದಾರೆ.
ಕೊವಿಡ್ -19 ಕೆಲ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್ ಬಳಕೆ ಮಾಡುತ್ತಿದ್ದು ಇದು ದೇಹದಲ್ಲಿನ ಶುಗರ್ ಅಂಶವನ್ನು ಹೆಚ್ಚಿಸುತ್ತದೆ ಎಂಬುದು ಆತಂಕಕಾರಿ ಸಂಗತಿ. ಹಾಗಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಅವರ ಪ್ರಕಾರ, ಸ್ಟೀರಾಯ್ಡ್ಗಳ ಬಳಕೆಯಿಂದ ಶ್ವಾಸಕೋಶದಲ್ಲಿ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ವೈರಸ್ ವಿರುದ್ಧ ಹೋರಾಡಲು, ಹಾನಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ, ಇದು ರಕ್ತದಲ್ಲಿನ ಶುಗರ್ ಅಂಶವನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ಹೊಂದಿರುವ ರೋಗಿಗಳಿಗೆ ಅಪಾಯ ತಂದೊಡ್ಡಬಹುದು.
‘ಮಧುಮೇಹ ರೋಗಿಗಳಿಗೆ ಇದು ಮಾರಣಾಂತಿಕವಾಗಬಹುದು. ಮ್ಯೂಕೋರ್ಮೈಕೋಸಿಸ್ ಸೋಂಕು ತಗುಲಿರುವ ವ್ಯಕ್ತಿಗೆ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚು ಬೇಕು. ಇದು ಮೂತ್ರಪಿಂಡದಂತಹ ಸೂಕ್ಷ್ಮ ಅಂಗಗಳ ಮೇಲೂ ಪರಿಣಾಮ ಬೀರಬಹುದು. ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾಯಿಲೆ ಹೊಂದಿರುವವರು ಗ್ಲುಕೋಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಡಾ. ಶ್ವೇತ ಬುಡ್ಯಾಲ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ; ರಾಜ್ಯದ ಈ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ