Cholesterol: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವ 5 ಆಹಾರಗಳು
ದಾಲ್ ಮತ್ತು ಬ್ರೌನ್ ರೈಸ್ ಅಥವಾ ಬಾದಾಮಿ ಮತ್ತು ಮೊಸರನ್ನು ಸಂಯೋಜಿಸುವುದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ತಡೆಯುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ .
ನಿಮಗೆ ತಿಳಿದಿರಬಹುದು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಜಾಗತಿಕವಾಗಿ ಮೂರನೇ ಒಂದು ಭಾಗದಷ್ಟು ಇಸ್ಕೀಮಿಕ್ ಹೃದ್ರೋಗವು ಹೆಚ್ಚಿನ ಕೊಲೆಸ್ಟ್ರಾಲ್ಗೆ ಕಾರಣವಾಗಿದೆ. ಎಲ್ಲಾ ಕೊಲೆಸ್ಟ್ರಾಲ್ ಕೆಟ್ಟದ್ದಲ್ಲ ಮತ್ತು ಆರೋಗ್ಯಕರ ಕೋಶಗಳನ್ನು ನಿರ್ಮಾಣ ಮಾಡಲು ನಿಮ್ಮ ದೇಹಕ್ಕೆ ಸ್ವಲ್ಪ ಅಂಶದ ಅಗತ್ಯವಿದೆ. ಆದರೆ ಹೆಚ್ಚಿನ ಮಟ್ಟದ ಎಲ್ಡಿಎಲ್ (ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್), ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸಬಹುದು, ಅಲ್ಲದೆ ಇದು ಅಪಧಮನಿಗಳಲ್ಲಿ ರಕ್ತದ ಹರಿವನ್ನು ಜಟಿಲಗೊಳಿಸುತ್ತದೆ. ಜಡ ಜೀವನಶೈಲಿ ಮತ್ತು ಆಹಾರ ಆಯ್ಕೆಯಲ್ಲಿ ತಪ್ಪು ಮಾಡುವುದು ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಕೆಲವು ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಬೇಕು.
ಜಾಗತಿಕವಾಗಿ ಕೊಲೆಸ್ಟ್ರಾಲ್ ಒಂದು ಪ್ರಮುಖ ಆರೋಗ್ಯ ಕಾಳಜಿಯಾಗಿದ್ದು, ಅಂದಾಜು 50% ವಯಸ್ಕರು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ, ಅಲ್ಲದೆ ಇದು ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಟಿವಿಗೆ ಎಂದು ಆಹಾರ ತಜ್ಞೆ ಗರಿಮಾ ಗೋಯಲ್ ಎಚ್ಟಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಮತ್ತು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಆಹಾರ ಸಂಯೋಜನೆಗಳನ್ನು ಗೋಯಲ್ ಸೂಚಿಸಿದ್ದಾರೆ. ಆ ಆಹಾರ ಸಂಯೋಜನೆಗಳಾವುದು? ಇಲ್ಲಿದೆ ಮಾಹಿತಿ.
1. ದಾಲ್ ಮತ್ತು ಬ್ರೌನ್ ರೈಸ್
ದಾಲ್ ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾದ ಆಹಾರವಾಗಿದೆ. ಅಲ್ಲದೆ ಇದು ಫೈಬರ್ನಿಂದ ತುಂಬಿದೆ. ಎಲ್ಡಿಎಲ್ ಕೊಲೆಸ್ಟ್ರಾಲ್ (ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಇದು ಕೆಟ್ಟ ಕೊಲೆಸ್ಟ್ರಾಲ್ ಆಗಿ ಪರಿಣಮಿಸುತ್ತದೆ. ಬ್ರೌನ್ ರೈಸ್ ಸಂಪೂರ್ಣ ಧಾನ್ಯಗಳ ಮೂಲವಾಗಿದ್ದು ಇದು ಹೃದ್ರೋಗದ ಅಪಾಯವನ್ನು 20% ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇವೆರಡರ ಸಂಯೋಜನೆ ದೇಹಕ್ಕೆ ತುಂಬಾ ಒಳ್ಳೆಯದಾಗಿದೆ.
2. ಅರಿಶಿನ ಮತ್ತು ಕರಿಮೆಣಸು
ಅರಿಶಿನವು ಶತಮಾನಗಳಿಂದ ಭಾರತೀಯ ಅಡುಗೆಯಲ್ಲಿ ಬಳಸಲಾಗುವ ಮಸಾಲೆ ಪದಾರ್ಥವಾಗಿದೆ. ಇದು ಉರಿಯೂತ ನಿವಾರಕ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಜರ್ನಲ್ ಆಫ್ ನ್ಯೂಟ್ರಿಷನ್ ಅಂಡ್ ಮೆಟಬಾಲಿಸಂನಲ್ಲಿ ಪ್ರಕಟವಾದ ಅಧ್ಯಯನವು ಅರಿಶಿನ ಮತ್ತು ಕರಿಮೆಣಸು ಹೊಂದಿರುವ ಪೂರಕ ಪದಾರ್ಥಗಳನ್ನು 12 ವಾರಗಳ ಕಾಲ ತೆಗೆದುಕೊಳ್ಳುವುದು, ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ಜನರಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಕರಿಮೆಣಸು ಪೈಪೆರಿನ್ ಅನ್ನು ಹೊಂದಿರುತ್ತದೆ. ಇದು ಅರಿಶಿನದಲ್ಲಿನ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಈ ಎರಡು ಮಸಾಲೆಗಳ ಸಂಯೋಜನೆಯು ರುಚಿಕರವಾದ ಮತ್ತು ಪೌಷ್ಟಿಕ ಸಂಯೋಜನೆಯನ್ನು ಮಾಡುತ್ತದೆ, ಇದನ್ನು ಪಲ್ಯಗಳು, ಸೂಪ್ಗಳು ಮತ್ತು ಗ್ರೇವಿಗಳಿಗೆ ಸೇರಿಸಬಹುದು.
3. ಬಾದಾಮಿ ಮತ್ತು ಮೊಸರು
ಬಾದಾಮಿ ಹೃದಯ-ಆರೋಗ್ಯಕರ ಮೊನೊಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಪ್ರೋಟೀನ್ನ ಉತ್ತಮ ಮೂಲವಾಗಿದೆ. ಇದು ಎಲ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನವು ಮೊಸರು ತಿನ್ನುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು 4% ವರೆಗೆ ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಮೊಸರು ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಒಟ್ಟಾಗಿ, ಈ ಎರಡು ಆಹಾರಗಳು ದಿನದ ಯಾವುದೇ ಸಮಯದಲ್ಲಿ ಆನಂದಿಸಬಹುದಾದ ತೃಪ್ತಿದಾಯಕ ಮತ್ತು ಪೌಷ್ಟಿಕ ಆಹಾರದಲ್ಲಿ ಒಂದಾಗಿದೆ.
4. ಗ್ರೀನ್ ಟೀ ಮತ್ತು ನಿಂಬೆ
ಗ್ರೀನ್ ಟೀ ಜಾಗತಿಕವಾಗಿ ಜನಪ್ರಿಯ ಪಾನೀಯವಾಗಿದೆ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ಫ್ಲೇವನಾಯ್ಡ್ಗಳಿವೆ, ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಒಟ್ಟಿಗೆ, ಈ ಎರಡು ಪದಾರ್ಥಗಳು ಉಲ್ಲಾಸದಾಯಕ ಮತ್ತು ಆರೋಗ್ಯಕರ ಪಾನೀಯವನ್ನು ತಯಾರಿಸುವಲ್ಲಿ ನಿಮಗೆ ಸಹಕಾರಿಯಾಗಿದೆ. ಅದನ್ನು ಬಿಸಿ ಅಥವಾ ತಂಪಾಗಿಯೂ ಆನಂದಿಸಬಹುದು. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನವು ನಿಂಬೆಹಣ್ಣಿನಲ್ಲಿ ಕಂಡುಬರುವ ಫ್ಲೇವನಾಯ್ಡ್ನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.
5. ಬೆಳ್ಳುಳ್ಳಿ ಮತ್ತು ಈರುಳ್ಳಿ
ಬೆಳ್ಳುಳ್ಳಿ ಮತ್ತು ಈರುಳ್ಳಿ ಅಡುಗೆಯಲ್ಲಿ ಪ್ರಧಾನವಾಗಿವೆ ಮತ್ತು ಎರಡೂ ಕೊಲೆಸ್ಟ್ರಾಲ್-ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ ಎಂದು ತೋರಿಸಲಾಗಿದೆ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಇದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ, ಆದರೆ ಈರುಳ್ಳಿ ಕ್ವೆರ್ಸೆಟಿನ್ ಅನ್ನು ಹೊಂದಿರುತ್ತದೆ, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ನ ಆಕ್ಸಿಡೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಈ ಎರಡು ಪದಾರ್ಥಗಳನ್ನು ಸಂಯೋಜಿಸಿದಾಗ, ಕೇವಲ ರುಚಿಕರವಲ್ಲದೆಯೇ, ಪಲ್ಯಗಳು, ಸೂಪ್ಗಳು ಮತ್ತು ಗ್ರೇವಿಗಳಲ್ಲಿ ಬಳಸಬಹುದಾಗಿದೆ.
ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಒಳ್ಳೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡುವುದು ಮುಖ್ಯ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:39 pm, Mon, 15 May 23