AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ತಲೆನೋವು ಮೈಗ್ರೇನ್‌ ಅಲ್ಲ, ನಿಮಗೆ ತಿಳಿದಿರಲಿ ಈ ವಿಚಾರ : ವೈದ್ಯರು ಹೇಳೋದೇನು?

ಇತ್ತೀಚೆಗಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆಯಲ್ಲಿ ಒಂದು ಮೈಗ್ರೇನ್‌. ತಲೆಯ ಒಂದೇ ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಸಹಿಸಿಕೊಳ್ಳಲಾಗದು. ಈ ವೇಳೆಯಲ್ಲಿ ಯಾಕಾದ್ರೂ ಮೈಗ್ರೇನ್ ಬರುತ್ತದೆಯೋ ಎಂದೆನಿಸದೇ ಇರದು. ಹಾಗಾದ್ರೆ ಈ ಮೈಗ್ರೇನ್ ಬರಲು ಮುಖ್ಯ ಕಾರಣಗಳೇನು? ಏನಿದರ ಲಕ್ಷಣಗಳು, ಮೈಗ್ರೇನ್‌ ನಿಯಂತ್ರಿಸುವುದು ಹೇಗೆ? ಎನ್ನುವ ಬಗ್ಗೆ ಕನ್ಸಲ್ಟೆಂಟ್‌ ನ್ಯೂರೊಲಾಜಿಸ್ಟ್‌ ಡಾ. ರೋಹಿತ್‌ ಪೈ ಹೇಳುವುದೇನು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್ಲಾ ತಲೆನೋವು ಮೈಗ್ರೇನ್‌ ಅಲ್ಲ, ನಿಮಗೆ ತಿಳಿದಿರಲಿ ಈ ವಿಚಾರ : ವೈದ್ಯರು ಹೇಳೋದೇನು?
ಮೈಗ್ರೇನ್‌Image Credit source: Getty Images
ಸಾಯಿನಂದಾ
| Edited By: |

Updated on:Jun 24, 2025 | 1:41 PM

Share

ಮೈಗ್ರೇನ್‌ (Migraine) ಇತ್ತೀಚೆಗೆ ಸಾಕಷ್ಟು ಜನರನ್ನು ಬಾಧಿಸುತ್ತಿರುವ ಸಮಸ್ಯೆ. ಯುವಕರಿಂದ ಮಧ್ಯವಯಸ್ಕರವರೆಗೆ ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೂ ಹಲವರು ಸಾಮಾನ್ಯ ತಲೆನೋವನ್ನೂ ಮೈಗ್ರೇನ್‌ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಈ ಮೈಗ್ರೇನ್‌ ಸಮಸ್ಯೆ ಹಾಗೂ ಚಿಕಿತ್ಸೆಯಲ್ಲಿ ಇರುವ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಮಂಗಳೂರಿನ ಅಂಬೇಡ್ಕರ್‍‌ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಕನ್ಸಲ್ಟೆಂಟ್‌ ನ್ಯೂರೊಲಾಜಿಸ್ಟ್‌ ಡಾ. ರೋಹಿತ್‌ ಪೈ (Dr. Rohit Pai, Consultant Neurologist, KMC Hospital) ಹೇಗೆ ಮೈಗ್ರೇನ್‌ ನರ ಸಂಬಂಧಿತ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಗ್ರೇನ್‌ ಎಂಬುದು ಪದೇ ಪದೇ ತಲೆನೋವು ನೀಡುವ ಒಂದು ನರ ಸಂಬಂಧಿತ ಸಮಸ್ಯೆಯಾಗಿದೆ. ಮೆದುಳಿನ ಒಂದು ಭಾಗವಾಗಿರುವ ಹೈಪೊಥೆಲಮಸ್‌ ಸಕ್ರಿಯಗೊಂಡು ನರಗಳಿಗೆ ಸರಬರಾಜಾಗುವ ಸಿಗ್ನಲ್‌ಗಳ ಪಥ ಬದಲಿಸುತ್ತದೆ. ಇವು ತಲೆಯಲ್ಲಿನ ರಕ್ತನಾಳಗಳು ಊದುವಂತೆ ಹಾಗೂ ನರಗಳು ಮತ್ತಷ್ಟು ಸೂಕ್ಷ್ಮವಾಗುವಂತೆ ಪ್ರಚೋದಿಸುವ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಇದರಿಂದ ನೋವಿನ ಸಿಗ್ನಲ್‌ಗಳು ಉತ್ತೇಜನಗೊಳ್ಳುತ್ತವೆ. ಮೈಗ್ರೇನ್‌ ಅಟ್ಯಾಕ್‌ ಸಾಕಷ್ಟು ನೋವಿನಿಂದ ಕೂಡಿದ್ದು ದಿನನಿತ್ಯದ ಕಾರ್ಯಕ್ಕೆ ಅಡಚಣೆ ಉಂಟುಮಾಡುತ್ತದೆ. ಸಮಸ್ಯೆ ಅತಿಯಾದರೆ ಆಸ್ಪತ್ರೆಗೆ ಸೇರುವುದು ಅನಿವಾರ್ಯವಾಗುತ್ತದೆ.

ಮೈಗ್ರೇನ್‌ ಲಕ್ಷಣಗಳೇನು?

ಇದನ್ನೂ ಓದಿ
Image
ಅಂಡರ್‌ವೇರ್‌ಗೂ ಇದ್ಯಾ ಎಕ್ಸ್‌ಪೈರಿ ಡೇಟ್?
Image
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
Image
ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು
Image
ನಕಲಿ ಪನೀರ್ ಗುರುತಿಸುವುದು ಹೇಗೆ?

ಮೈಗ್ರೇನ್‌ ತಲೆನೋವು ಪದೇ ಪದೇ ಕಾಡುವ ಸಮಸ್ಯೆ. ತಲೆಯ ಒಂದು ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ನೋವು ಒಂದು ರೀತಿಯಲ್ಲಿ ತಲೆ ಸಿಡಿಯುವ ಅನುಭವವನ್ನು ನೀಡುತ್ತದೆ. ದೇಹದ ಚಟುವಟಿಕೆಗಳು ಹೆಚ್ಚಾದಂತೆ ನೋವು ಕೂಡ ಜಾಸ್ತಿಯಾಗುತ್ತದೆ. ಮೈಗ್ರೇನ್‌ ನೋವು, ಫೋಟೊಫೋಬಿಯಾ, ಫೋನೊಫೋಬಿಯಾ , ವಾಕರಿಕೆ, ವಾಂತಿ ಲಕ್ಷಣಗಳನ್ನೂ ಹೊಂದಿರುತ್ತದೆ.

ನಿದ್ರಾಹೀನತೆ, ಕೆಟ್ಟ ಆಹಾರ ಸೇವನೆ ಅಭ್ಯಾಸ ವೇ ಮೈಗ್ರೇನ್‌ಗೆ ಪ್ರಮುಖ ಕಾರಣ. ಕೆಲ ಆಹಾರ ವಸ್ತುಗಳಾದ ಚಾಕೊಲೇಟ್, ಐಸ್‌ಕ್ರೀಮ್, ಕೆಫೇನ್‌ ಉತ್ಪನ್ನಗಳು, ಫಾಸ್ಟ್‌ ಫುಡ್‌ ಸೇವನೆ, ಹೆಚ್ಚಾಗಿ ಟಿವಿ ಹಾಗೂ ಮೊಬೈಲ್‌ ಫೋನ್‌ಗಳ ಸ್ಕ್ರೀನ್‌ ನೋಡುವುದು ಮೈಗ್ರೇನ್‌ ಆರಂಭಕ್ಕೆ ಕಾರಣವಾಗಬಲ್ಲವು. ಇದು ಸಾಮಾನ್ಯವಾಗಿ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 10-20 ವಯಸಿನಲ್ಲಿ ಆರಂಭಿಕ ಮೈಗ್ರೇನ್‌ ಸಮಸ್ಯೆಯ ಲಕ್ಷಣಗಳನ್ನು ಕಾಣಬಹುದು. ಹೆಚ್ಚು ಯುವಜನತೆಯಲ್ಲೇ ಈ ಸಮಸ್ಯೆ ಕಂಡುಬರುತ್ತಿದೆ.

ಮೈಗ್ರೇನ್‌ಗೆ ನಿಯಂತ್ರಣ ಹೇಗೆ ?

ಮೈಗ್ರೇನ್‌ ಸಮಸ್ಯೆ ಅನುಭವಿಸುತ್ತಿರುವ ಸಾಕಷ್ಟು ಜನರು ನೋವು ನಿವಾರಕ ಮಾತ್ರೆಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ಮೆಡಿಕೇಶನ್‌ ಓವರ್‍‌ಯೂಸ್‌ ಹೆಡ್‌ ಏಕ್‌ ಎಂಬ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್‌ ಸಮಸ್ಯೆ ಹೊಂದಿರುವವರಿಗೆ ಫ್ರೊಫಿಲ್ಯಾಕ್ಟಿಕ್‌ ಮೆಡಿಕೇಶನ್‌ನ್ನು ಅಗತ್ಯವಾಗಿ ಆರಂಭಿಸಬೇಕಾಗುತ್ತದೆ. ಜೊತೆಗೆ ಜೀವನ ಶೈಲಿಯಲ್ಲೂ ಕೆಲವು ಬದಲಾವಣೆಯನ್ನು ಸೂಚಿಸಲಾಗುತ್ತದೆ. ಮೈಗ್ರೇನ್‌ ಟ್ರಿಗರ್‍‌ ಮಾಡುವ ಆಹಾರ ಸೇವನೆಯನ್ನು ತಡೆದು, ಆರೋಗ್ಯಕರ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು, ಉತ್ತಮ ನಿದ್ರೆ, ಸ್ಕ್ರೀನ್‌ ಬಳಕೆ ಕಡಿಮೆ ಮಾಡುವುದು ಅಗತ್ಯ. ಸಾಂಪ್ರದಾಯಿಕ ಫ್ರೊಫಿಲ್ಯಾಕ್ಟಿಕ ಔ‍‍ಷಧಗಳು ಮೈಗ್ರೇನ್‌ ಅಟ್ಯಾಕ್‌ನ್ನು ಕಡಿಮೆ ಮಾಡುತ್ತದೆ. ಆದರೆ ಜೀವನಶೈಲಿ ಸರಿಯಿಲ್ಲದಿದ್ದಲ್ಲಿ ಮೈಗ್ರೇನ್‌ ಮತ್ತೆ ಬರುವ ಸಾಧ್ಯತೆ ಇರುತ್ತದೆ, ಹೀಗಾಗಿ ಮೈಗ್ರೇನ್‌ ಸಮಸ್ಯೆಗೆ ಮೆಡಿಸಿನ್‌ ಹಾಗೂ ಜೀವನಶೈಲಿಯಲ್ಲಿನ ಬದಲಾವಣೆ ಎರಡ ಮಿಶ್ರಣ ಅತ್ಯಗತ್ಯ. ಇನ್ನು ಯೋಗದಂತಹ ವಿಧಾನವೂ ಕೂಡ ಮೈಗ್ರೇನ್‌ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ರಿಬೋಫ್ಲಾವಿನ್ ಜೊತೆಗಿನ ವಿಟಮಿನ್ ಪೂರಕಗಳು ಮೈಗ್ರೇನ್‌ ದಾಳಿಯನ್ನು ತಡೆಗಟ್ಟುವಲ್ಲಿ ಪ್ರಯೋಜನವನ್ನು ತೋರಿಸಿವೆ ಎಂದು ಡಾ. ರೋಹಿತ್‌ ಪೈ ತಿಳಿಸಿದ್ದಾರೆ.

ಮಾನಸಿಕ ಒತ್ತಡವೂ ಮೈಗ್ರೇನ್‌ಗೆ ಕಾರಣವಾಗಬಲ್ಲದು

ಕೆಎಮ್‌ಸಿ ಆಸ್ಪತ್ರೆಯ ಮನೋಶಾಸ್ತ್ರಜ್ಞರಾದ ಡಾ. ಕೃತಿಶ್ರೀ ಹೇಗೆ ಮಾನಸಿಕ ಒತ್ತಡ ಕೂಡ ಮೈಗ್ರೇನ್‌ಗೆ ಕಾರಣವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಪಿಯಲ್ಲಿನ ಏರುಪೇರು, ಅನಾವಶ್ಯಕ ಯೋಚನೆಗಳು ತಲೆ ತುಂಬಿದಾಗ, ಡಿಪ್ರೆಶ್ಶನ್‌, ಆತಂಕ, ನಿದ್ರಾಹೀನತೆ (ಇನ್ಸೋಮೇನಿಯಾ) ಸಮಸ್ಯೆ, ಖಿನ್ನತೆ, ಕೆಲ ವ್ಯಸನಗಳು ಕೂಡ ಮೈಗ್ರೇನ್‌ಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಪದೇ ಪದೇ ಬದಲಾಗುವ ಹಾರ್ಮೋನ್‌, ಥೈರಾಯ್ಡ್‌ ಸಮಸ್ಯೆಯಿಂದ ಮಹಿಳೆಯರು ಬಲು ಬೇಗ ಮೈಗ್ರೇನ್‌ ಸಮಸ್ಯೆಗೆ ಗುರಿಯಾಗುತ್ತಾರೆ.

ಇದನ್ನೂ ಓದಿ : Patanjali Dhara: ಗ್ಯಾಸ್ಟ್ರಿಕ್, ತಲೆನೋವು, ಶೀತ, ಕೆಮ್ಮಿನ ಸಮಸ್ಯೆಯೇ? ಇಲ್ಲಿದೆ ಪರಿಣಾಮಕಾರಿ ಪತಂಜಲಿ ಔಷಧ

ಇನ್ನು ಕುಟುಂಬದ ಬೆಂಬಲ ಸಿಗದೇ ಇರುವುದು, ಒಂಟಿತನದ ಭಾವ ಹೆಚ್ಚಾದಾಗ, ಅಥವಾ ಸಂಬಂಧಗಳಲ್ಲಿ ಒಡಕು, ಸಾಮಾಜಿಕ ಒತ್ತಡಗಳು ಹೆಚ್ಚಾದಾಗ ಕೂಡ ಮೈಗ್ರೇನ್‌ ಕಾಡುವ ಸಂಭವ ಹೆಚ್ಚಾಗಿರುತ್ತದೆ. ಅದರಲ್ಲೂ ಹದಿಹರೆಯದ ಮಕ್ಕಳಲ್ಲಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆಯುವ ಒತ್ತಡ, ಜೀವನ ರೂಪಿಸಿಕೊಳ್ಳುವ ತವಕದಿಂದ ಒತ್ತಡಕ್ಕೆ ಸಿಲುಕಿ ಮೈಗ್ರೇನ್‌ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಮನಸ್ಸನ್ನು ನಿಯಂತ್ರಿಸುವುದು, ಒತ್ತಡದಿಂದ ದೂರವಿರುವುದು ಕೂಡ ಮೈಗ್ರೇನ್‌ ನಿಯಂತ್ರಣಕ್ಕೆ ಅಗತ್ಯ ಮಾರ್ಗವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Mon, 23 June 25