Anti-Cancer Fruits: ವಿಶೇಷವಾಗಿ ಮಹಿಳೆಯರು ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಈ ಕೆಲವು ಹಣ್ಣುಗಳನ್ನು ಸೇವನೆ ಮಾಡಿ

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ತುತ್ತಾಗಿ ಪ್ರತಿವರ್ಷ ಅನೇಕ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಗರ್ಭಕಂಠ ಮತ್ತು ಸ್ತನಕ್ಯಾನ್ಸರ್ ಗೆ ಹೆಚ್ಚಾಗಿ ತುತ್ತಾಗುತ್ತಾರೆ. ಈ ಕ್ಯಾನ್ಸರ್ ಬಾರದಂತೆ ತಡೆಯಲು ದಿನನಿತ್ಯ ಕೆಲವೊಂದು ಕ್ಯಾನ್ಸರ್ ವಿರೋಧಿ ಹಣ್ಣುಗಳನ್ನು ಸೇವನೆ ಮಾಡಬೇಕು. ಹಾಗಾದರೆ ಆ ಹಣ್ಣುಗಳು ಯಾವುವು ಎಂಬುದನ್ನು ನೋಡೋಣ.

Anti-Cancer Fruits: ವಿಶೇಷವಾಗಿ ಮಹಿಳೆಯರು ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಈ ಕೆಲವು ಹಣ್ಣುಗಳನ್ನು ಸೇವನೆ ಮಾಡಿ
Anti-Cancer Fruits
Image Credit source: pintrest
Edited By:

Updated on: Sep 20, 2023 | 6:53 AM

ಕ್ಯಾನ್ಸರ್ ಒಂದು ಗಂಭೀರ, ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ತುತ್ತಾಗಿ ಪ್ರತಿವರ್ಷ ಅನೇಕಾರು ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆಯನ್ನು ನೀಡಿದರೆ, ಪ್ರಾಣಾಪಾಯದಿಂದ ಪಾರಾಗಬಹುದು. ಆದರೆ ಕಾಯಿಲೆಯು ಉಲ್ಬಣಗೊಂಡರೆ, ಈ ರೋಗವು ಪ್ರಾಣಕ್ಕೆ ಕುತ್ತಾಗಿ ಪರಿಣಮಿಸುತ್ತದೆ. ದೇಹದ ಯಾವುದೇ ಭಾಗದಲ್ಲಿಯ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಗರ್ಭಕಂಠ ಮತ್ತು ಸ್ತನಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅನುವಂಶಿಕ ಕಾರಣದೊಂದಿಗೆ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ಕ್ಯಾನ್ಸರ್ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಅಪಾಯಕಾರಿ ಕಾಯಿಲೆ ಬಾರದಂತೆ ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ಪಾಲಿಸುವುದು ಮುಖ್ಯವಾಗಿದೆ. ವಿಶೇಷವಾಗಿ ದಿನನಿತ್ಯ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳನ್ನು ಸೇವನೆ ಮಾಡುವ ಮೂಲಕ ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

ಕೆಲವು ಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪಪ್ಪಾಯಿ ಹಣ್ಣಿನ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಹಣ್ಣು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ಮತ್ತು ಕೆಲವು ರೀತಿಯ ಕ್ಯಾನ್ಸರ್ ನಿಂದ ರಕ್ಷಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದ್ದಾರೆ. ಪಪ್ಪಾಯಿ ಮಾತ್ರವಲ್ಲದೆ ಇನ್ನೂ ಕೆಲವು ಹಣ್ಣುಗಳು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ.

ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟಲು ಸಹಕಾರಿ ಈ ಕೆಲವು ಹಣ್ಣುಗಳು:

ಪಪ್ಪಾಯಿಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:

ಸಂಶೋಧನೆಯ ಪ್ರಕಾರ, ಪಪ್ಪಾಯಿಯು ಲೈಕೋಪೀನ್ ಪೋಷಕಾಂಶದಲ್ಲಿ ಸಮೃದ್ಧವಾಗಿದೆ. ಇದು ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿದ್ದು, ಅದು ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್ ಅಪಾಯ ಬಾರದಂತೆ ತಡೆಯುತ್ತದೆ. ಪಪ್ಪಾಯಿಯನ್ನು ಹೊರತು ಪಡಿಸಿ, ಈ ಪೋಷಕಾಂಶವು ಕ್ಯಾರೆಟ್, ಟೊಮೆಟೊ ಮತ್ತು ಕಲ್ಲಂಗಡಿಗಳಲ್ಲಿಯೂ ಕಂಡುಬರುತ್ತದೆ. ಕ್ಯಾನ್ಸರ್ ಮಾತ್ರವಲ್ಲದೆ ಈ ಹಣ್ಣಿನ ಸೇವನೆಯು ಹೃದ್ರೋಗ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ವಿಶೇಷವಾಗಿ ಮಹಿಳೆಯರು ಪ್ರತಿನಿತ್ಯ ಪಪ್ಪಾಯಿಯನ್ನು ಸೇವನೆ ಮಾಡುವುದು ಉತ್ತಮ.

ಇದನ್ನೂ ಓದಿ: ರಾತ್ರಿಯ ಊಟದ ನಂತರ ಮಾಡುವ ಈ ಕೆಲವು ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು

ಕಿತ್ತಳೆ :

ಕಿತ್ತಳೆ ಹಾಗೂ ಇತರೆ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಹಣ್ಣು ವಿಟಮಿನ್ ಸಿ ಜೊತೆಗೆ ಥಯಾಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಇದು ಕ್ಯಾನ್ಸರ್ ನಿಂದಲೂ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ರೋಗಿಯು ವೇಗವಾಗಿ ಚೇತರಿಸಿಕೊಳ್ಳಲು ಕಿತ್ತಳೆ ಹಣ್ಣನ್ನು ಸೇವನೆ ಮಾಡಬೇಕು.

ದ್ರಾಕ್ಷಿ :

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನೀವು ದ್ರಾಕ್ಷಿ ಹಣ್ಣನ್ನು ಕೂಡಾ ಸೇವನೆ ಮಾಡಬಹುದು. ಈ ಹಣ್ಣು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ದ್ರಾಕ್ಷಿಯಲ್ಲಿರುವ ವಿಟಮಿನ್ ಸಿ, ಪೊಟ್ಯಾಸಿಯಂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೆಚ್ಚುವರಿಯಾಗಿ ಇದರಲ್ಲಿ ಲೈಕೋಪೀನ್ ಕ್ಯಾರೊಟಿನಾಯ್ಡ್ ಇದ್ದು, ಅದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಕಾರಣದಿಂದ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ದ್ರಾಕ್ಷಿಯನ್ನು ಸೇರಿಸಿಕೊಳ್ಳಬೇಕು.

ಸೇಬು:

ಸೇಬು ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಸೇಬನ್ನು ಸೇವನೆ ಮಾಡುವುದರಿಂದ ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಂ ಮುಂತಾದ ಪೋಷಕಾಂಶಗಳು ಲಭಿಸುತ್ತವೆ. ಈ ಎಲ್ಲಾ ಪೋಷಕಾಂಶಗಳು ನಮ್ಮನ್ನು ಕ್ಯಾನ್ಸರ್ ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸೇಬಿನಲ್ಲಿರುವ ನಾರಿನಂಶವು ಕರುಳಿನ ಕಾಯಿಲೆಗಳನ್ನು ದೂರವಿಡುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: