
ಮೆಂತ್ಯೆ ಕಾಳು ಅಡುಗೆಮನೆಯಲ್ಲಿರುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದನ್ನು ಅಡುಗೆಯಲ್ಲಿ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಹಲವರು ಬಳಸುತ್ತಾರೆ. ಮೆಂತ್ಯೆ ಕಾಳಿನಲ್ಲಿರುವ ನಾರಿನಾಂಶ ಮತ್ತು ಇತರ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಸಹಾಯ ಮಾಡಬಹುದು. ಪೌಷ್ಟಿಕ ತಜ್ಞರ ಸಲಹೆಯ ಪ್ರಕಾರ, ಮೆಂತ್ಯೆ ಕಾಳನ್ನು ಕೆಲವು ನೈಸರ್ಗಿಕ ಪದಾರ್ಥಗಳೊಂದಿಗೆ ಸೇರಿಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆ, ಜೀರ್ಣಕ್ರಿಯೆ, ಹಾರ್ಮೋನ್ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ನೆರವಾಗಬಹುದು. ಅಂತಹ ನಾಲ್ಕು ಸಂಯೋಜನೆಗಳ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಮೆಂತ್ಯೆ ಕಾಳು ಮತ್ತು ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಎರಡನ್ನೂ ನೀರಿನಲ್ಲಿ ಕುದಿಸಿ ಸೇವಿಸುವ ಪದ್ಧತಿಯೂ ಇದೆ. ಮೆಂತ್ಯೆಯಲ್ಲಿರುವ ನಾರಿನಾಂಶವು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ನಿಯಂತ್ರಿಸಲು ನೆರವಾಗಬಹುದು. ಆದರೆ ಇದು ಮಧುಮೇಹದ ಔಷಧಿಗಳಿಗೆ ಪರ್ಯಾಯವಲ್ಲ.
ಹಾರ್ಮೋನ್ ಆರೋಗ್ಯ ಮತ್ತು ದೇಹದ ಚಯಾಪಚಯ ಕ್ರಿಯೆಯ ಆರೋಗ್ಯವನ್ನು ಕಾಪಾಡಲು ಮೆಂತ್ಯೆ ಕಾಳಿನ ಜೊತೆಗೆ ಅಗಸೆ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಗಸೆ ಬೀಜದಲ್ಲಿರುವ ಲಿಗ್ನಾನ್‌ಗಳು ಮತ್ತು ಇತರ ಪೋಷಕಾಂಶಗಳು ದೇಹದ ಚಯಾಪಚಯ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಈ ಎರಡನ್ನೂ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಕುದಿಸಿ ಸೇವಿಸುವ ಪದ್ಧತಿಯೂ ಇದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಪ್ರತಿದಿನ ನೆಲ್ಲಿಕಾಯಿ ಕ್ಯಾಂಡಿ ತಿಂದರೆ ಏನಾಗುತ್ತದೆ? ಆರೋಗ್ಯಕ್ಕೆ ಸಿಗುವ ಪ್ರಯೋಜನಗಳಿವು!
ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಇದ್ದರೆ ಮೆಂತ್ಯೆ ಕಾಳಿನ ಜೊತೆಗೆ ಸೋಂಪನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸೋಂಪು ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಮೆಂತ್ಯೆಯಲ್ಲಿರುವ ಕರಗುವ ನಾರಿನಾಂಶವು ಕರುಳಿನ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ನೆರವಾಗಬಹುದು.
ತೂಕ ನಿಯಂತ್ರಣ ಮತ್ತು ಚಯಾಪಚಯ ಆರೋಗ್ಯದ ದೃಷ್ಟಿಯಿಂದ ಮೆಂತ್ಯೆ ಕಾಳಿನ ಜೊತೆಗೆ ಕಪ್ಪು ಜೀರಿಗೆಯನ್ನು ಬಳಸಬಹುದು. ಇವೆರಡರಲ್ಲಿರುವ ನೈಸರ್ಗಿಕ ಸಂಯುಕ್ತಗಳು ದೇಹದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಮಿಶ್ರಣ ಸೇವನೆಯಿಂದ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ.
ಗಮನಿಸಿ: ಈ ಸಂಯೋಜನೆಗಳು ಯಾವುದೇ ಕಾಯಿಲೆಗೆ ಚಿಕಿತ್ಸೆಯಲ್ಲ. ಮಧುಮೇಹದ ಔಷಧಿಗಳನ್ನು ಸೇವಿಸುವವರು, ಗರ್ಭಿಣಿಯರು ಅಥವಾ ಇತರ ಔಷಧಿಗಳನ್ನು ತೆಗೆದುಕೊಳ್ಳುವವರು ಇವುಗಳನ್ನು ನಿಯಮಿತವಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಮೆಂತ್ಯೆ ಕಾಳು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ