International Yoga day 2023: ಯೋಗಭ್ಯಾಸದ ನಂತರ ಸೇವಿಸಬೇಕಾದ ಐದು ಬಗೆಯ ಆರೋಗ್ಯಕರ ಆಹಾರಗಳು
ಯೋಗಾಭ್ಯಾಸದ ನಂತರ ನಮ್ಮ ದೇಹಕ್ಕೆ ಪೌಷ್ಟಿಕಾಂಶಯುಕ್ತ ಹಾಗೂ ಪೋಷಕಾಂಶಯುಕ್ತ ಆಹಾರದ ಅಗತ್ಯವಿರುತ್ತದೆ. ಅದು ನಮ್ಮ ದೇಹಕ್ಕೆ ಶಕ್ತಿಯನ್ನು ಹಾಗೂ ಚೈತನ್ಯವನ್ನು ನೀಡುವುದು ಮಾತ್ರವಲ್ಲದೆ ರೊಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಯೋಗಾಭ್ಯಾಸದ ನಂತರ ಸಾಕಷ್ಟು ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳಂತಹ ಪೌಷ್ಟಿದಾಯಕ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಹೆಚ್ಚಿನವರು ಯೋಗಾಭ್ಯಾಸದ ಕಡೆಗೆ ಒಲವು ತೋರುತ್ತಿದ್ದಾರೆ. ಯೋಗವು ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಇದು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಯೋಗದ ಜೊತೆಗೆ ಸಮತೋಲಿತ ಆಹಾರವು ಅತ್ಯಗತ್ಯ. ಇದು ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ ದೇಹದಲ್ಲಿ ಕಳೆದುಹೋದ ಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗಾಭ್ಯಾಸದ ಸಮಯದಲ್ಲಿ ಕಳೆದುಹೋದ ದೇಹಶಕ್ತಿಯನ್ನು ಪುನಃಸ್ಥಾಪಿಸಲು ಪೌಷ್ಟಿಕ ಮತ್ತು ಪೋಷಕಾಂಶಯುಕ್ತ ಆಹಾರವನ್ನು ತಿನ್ನುವುದು ಮುಖ್ಯವಾಗಿದೆ. ಯೋಗಾಭ್ಯಾಸವನ್ನು ಮುಗಿಸಿದ ಒಂದು ಗಂಟೆಯೊಳಗೆ ಪ್ರೋಟೀನ್, ಕಾರ್ಬೋಹೈಡ್ರೇಟ್, ಅಗತ್ಯ ಮತ್ತು ಉತ್ತಮ ಕೊಬ್ಬು ಮತ್ತು ಫೈಬರ್ ನಿಂದ ಸಮೃದ್ಧವಾದ ಆಹಾಗಳನ್ನು ಸೇವಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಈ ಅಗತ್ಯ ಪೋಷಕಾಂಶಗಳು ಸ್ನಾಯುಗಳು ಮತ್ತು ದೇಹದ ಅಂಗಳನ್ನು ಸರಿಪಡಿಸಲು ಸಹಾಯ ಮಾಡುತ್ತವೆ. ಹಾಗಾಗಿ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮಾಡಿದ ನಂತರ ಯಾವ ರೀತಿಯ ಆಹಾರ ಕ್ರಮವನ್ನು ಪಾಲಿಸಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ.
ಯೋಗಾಭ್ಯಾಸದ ನಂತರ ಸೇವಿಸಬೇಕಾದ ಆಹಾರಗಳು
ಕಾರ್ಬೋಹೈಡ್ರೇಟ್ ಆಹಾರಗಳು:
ಆರೋಗ್ಯ ತಜ್ಞರ ಪ್ರಕಾರ, ಕಾರ್ಬೋಹೈಡ್ರೇಟ್ ಗಳು ನಮ್ಮ ದೇಹಕ್ಕೆ ಬಹಳ ಮುಖ್ಯ ಏಕೆಂದರೆ ಅವು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲದೆ ಸ್ನಾಯುಗಳ ದುರಸ್ತಿಗೆ ಸಹಾಯ ಮಾಡುತ್ತದೆ. ಯೊಗಾಸನದ ಸಮಯದಲ್ಲಿ ಇಂಧನವಾಗಿ ಬಳಕೆಯಾಗುವ ನಮ್ಮ ದೇಹದ ಗ್ಲೈಕೋಜೆನ್ ಅಂಶವನ್ನು ಪುನಃ ತುಂಬಿಸಲು ಯೋಗ ನಂತರ ಸೇವನೆ ಮಾಡುವ ಕಾರ್ಬೋಹೈಡ್ರೇಟ್ ಆಹಾರಗಳು ಸಹಾಯ ಮಾಡುತ್ತವೆ. ಅಧ್ಯಯನಗಳ ಪ್ರಕಾರ ಪ್ರತಿದಿನ ದೇಹದ ತೂಕಕ್ಕೆ ಅನುಸಾರವಾಗಿ ಪ್ರತಿ ಪೌಂಡ್ ಗೆ 3.6 ರಿಂದ 5.5 ಗ್ರಾಂ ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೇವಿಸುವುದರಿಂದ ನಮ್ಮ ದೇಹದ ಗ್ಲೈಕೋಜೆನ್ ಮಟ್ಟವನ್ನು ಗರಿಷ್ಟಗೊಳಿಸಬಹುದು. ಬಾಳೆಹಣ್ಣು, ಸೇಬು, ಧಾನ್ಯಗಳು, ಓಟ್ಸ್ ಇತರ ಆಹಾರಗಳು ಕಾರ್ಬೋಹೈಡ್ರೇಟ್ ನಿಂದ ಸಮೃದ್ಧವಾಗಿದೆ.
ಮೊಟ್ಟೆಗಳು:
ಮೊಟ್ಟೆಗಳು ಪ್ರೋಟೀನ್ನ ಸಮೃದ್ಧ ಮೂಲವಾಗಿದೆ. ಅದು ಸ್ನಾಯು ಅಂಗಾಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಅಧ್ಯಯನವೊಂದರ ಪ್ರಕಾರ ವ್ಯಾಯಾಮದ ನಂತರ ನಮ್ಮ ಸ್ನಾಯುಗಳನ್ನು ಆರಾಮದಾಯಕವಾಗಿರಿಸಲು ನಮ್ಮ ದೇಹಕ್ಕೆ 10 ರಿಂದ 20 ಗ್ರಾಂ ಗಳಷ್ಟು ಪ್ರೋಟೀನ್ ನ ಅಗತ್ಯವಿದೆ. ಹಾಗಾಗಿ ಯೋಗ ಮತ್ತು ವ್ಯಾಯಾಮ ಮಾಡಿದ ಒಂದು ಗಂಟೆಯೊಳಗೆ ಬೇಯಿಸಿದ ಮೊಟ್ಟೆಯನ್ನು ಸೇವನೆ ಮಾಡಲು ಪೌಷ್ಟಿಕ ತಜ್ಞರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ:International Yoga Day 2023: ಯೋಗ ಮಾಡುತ್ತಿದ್ದ ಜನರ ನಡುವೆ ಮಕ್ಕಳ ತುಂಟಾಟ, ಮುದ್ದಾದ ವಿಡಿಯೋ ನೋಡೋಕೆ ಚೆಂದ
ಬೀಜಗಳು ಮತ್ತು ಮೊಸರು:
ಬಾದಮಿ, ಗೋಡಂಬಿ, ವಾಲ್ನಟ್ಸ್ ಇತ್ಯಾದಿ ಕೆಲವು ಪೌಷ್ಟಿದಾಯಕ ಒಣ ಬೀಜಗಳನ್ನು ಮೊಸರಿನೊಂದಿಗೆ ಸೇರಿಸಿ ತಿನ್ನಿರಿ. ಇದು ಕಳೆದುಹೋದ ಶಕ್ತಿಯನ್ನು ಪುನಃಸ್ಥಾಪಿಸಲು ಮತ್ತು ಸ್ನಾಯು ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುವ ಆರೋಗ್ಯಕರ ಕೊಬ್ಬುಗಳಾಗಿವೆ.
ಅವಲಕ್ಕಿ:
ಪೌಷ್ಟಿಕ ತಜ್ಞರ ಪ್ರಕಾರ, ಅವಲಕ್ಕಿಯು ಕಡಿಮೆ ಕ್ಯಾಲೋರಿಗಳನ್ನು ಹಾಗೂ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿವೆ. ಇದು ಯೋಗಾಭ್ಯಾಸದ ನಂತರ ಅಗತ್ಯವಾಗಿ ನಮ್ಮ ದೇಹಕ್ಕೆ ಬೇಕಾದ ಅಂಶಗಳಾಗಿವೆ. ಅಲ್ಲದೆ ಅವಲಕ್ಕಿಯಲ್ಲಿ 32 % ಕೊಬ್ಬು, 2.5 ಮಿಲಿಗ್ರಾಂ ಫೈಬರ್, 2.6 ಮಿಲಿಗ್ರಾಂ ಕಬ್ಬಿಣ ಮತ್ತು 5 ಮಿಲಿಗ್ರಾಂ ಪೊಟ್ಯಾಸಿಯಂ ಇರುತ್ತದೆ. ಆದ್ದರಿಂದ ಇದು ತೂಕ ಇಳಿಕೆಗೂ ಉತ್ತಮ ಆಹಾರವಾಗಿದೆ.
ಓಟ್ಸ್:
ಅತ್ಯುತ್ತಮ ಆರೋಗ್ಯಕರ ಆಹಾರಗಳಲ್ಲಿ ಒಂದಾದ ಓಟ್ಸ್ ಫೈಬರ್, ಮೆಗ್ನೇಸಿಯಂ, ಕಬ್ಬಿಣ, ಕ್ಯಾಲ್ಸಿಯಂ ನಿಂದ ತುಂಬಿದೆ. ಅಲ್ಲದೆ ಇದು ಸ್ನಾಯುಗಳ ಸಾಮಾರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸುಡಲು ದೇಹದ ಸಾಮಾರ್ಥ್ಯವನ್ನು ಹೆಚ್ಚಿಸಲು ಓಟ್ಸ್ ನ್ನು ಚಿಯಾ ಬೀಜಗಳು ಮತ್ತು ಕಾಲೋಚಿತ ಹಣ್ಣುಗಳೊಂದಿಗೆ ಸೇರಿಸಿ ತಿನ್ನಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: