
ಬಾಯಿಯಲ್ಲಿ ಹುಣ್ಣಾದರೆ (Mouth Ulcer) ಎಷ್ಟು ಕಷ್ಟವಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಮಾತನಾಡುವುದಕ್ಕೆ, ಊಟ ಮಾಡುವುದಕ್ಕೆ, ನೀರು ಕುಡಿಯುವುದಕ್ಕೂ ಕಷ್ಟವಾಗುತ್ತದೆ. ಕೆಲವರಿಗೆ ವರ್ಷಕ್ಕೊಮ್ಮೆ ಈ ರೀತಿ ಆದರೆ ಇನ್ನು ಕೆಲವರಿಗೆ ವರ್ಷಪೂರ್ತಿ ಈ ಸಮಸ್ಯೆ ಮುಗಿಯುವುದೇ ಇಲ್ಲ ಎನಿಸುತ್ತದೆ. ಬಾಯಲ್ಲಿ ಆಗಾಗ ಈ ರೀತಿ ಹುಣ್ಣು ಕಾಣಿಸಿಕೊಳ್ಳುವುದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿರುತ್ತದೆ. ಅಂದರೆ ಜೀರ್ಣಾಂಗ ವ್ಯವಸ್ಥೆ ಯಲ್ಲಿ ಕಂಡು ಬರುವಂತಹ ಸಮಸ್ಯೆಗಳಿಂದ ಅಥವಾ ಹೆಚ್ಚಿನ ಆಮ್ಲೀಯತೆಯಿಂದಲೂ ಈ ರೀತಿ ಬಾಯಿ ಹುಣ್ಣುಗಳು ಉಂಟಾಗಬಹುದು. ಆದರೆ ಈ ರೀತಿ ಆದಾಗ ನಾವು ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಮದ್ದನ್ನು (Home Remedies) ಮಾಡುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಇವುಗಳನ್ನು ಗುಣಪಡಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕುಮಟಾ ಹಳಕಾರ ನರ್ಸಿಂಗ್ ಹೋಮ್ ನ ಡಾ। ಅಶೋಕ್ ಕೃಷ್ಣ ಭಟ್ ಅವರು ಹೇಳುವ ಪ್ರಕಾರ, “ಮೊದಲೆಲ್ಲಾ ಹೆಚ್ಚಾಗಿ ಬೇಸಿಗೆಯಲ್ಲಿ ಈ ಬಾಯಿ ಹುಣ್ಣಿನ ಸಮಸ್ಯೆ ಕಾಡುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಪದ್ದತಿಯಲ್ಲಿ ನಾವು ಮಾಡಿದ ಅಜಾಗರೂಕತೆಯಿಂದಾಗಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಹೊಟ್ಟೆಯಲ್ಲಿ ಕೆಲವು ಸಮಸ್ಯೆಗಳು ಇದ್ದಾಗ ಈ ರೀತಿ ಬಾಯಿ ಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಈ ಹುಣ್ಣುಗಳು ಕೆನ್ನೆಯ ಒಳಭಾಗ, ತುಟಿ, ನಾಲಿಗೆ ಅಥವಾ ಗಂಟಲಿನ ಒಳ ಚರ್ಮದ ಮೇಲೂ ಕೂಡ ಕಂಡುಬರಬಹುದು. ಇದು ಸಾಮಾನ್ಯವಾಗಿ ತುಂಬಾ ನೋವನ್ನು ನೀಡುವುದರಿಂದ, ಸರಿಯಾಗಿ ಆಹಾರ ಸೇವನೆ ಮಾಡಲು ಅಥವಾ ನೀರು ಕುಡಿಯುವುದು ಕೂಡ ಬಹಳ ಕಷ್ಟವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಡಾ। ಅಶೋಕ್ ಕೃಷ್ಣ ಭಟ್ ಅವರು ತಿಳಿಸಿರುವ ಮಾಹಿತಿ ಪ್ರಕಾರ, “ಹೊಟ್ಟೆಯಲ್ಲಿ ಶಾಖದ ಉತ್ಪತ್ತಿ ಹೆಚ್ಚಾದಾಗ ಬಾಯಿ ಹುಣ್ಣುಗಳು ಕಂಡು ಬರುತ್ತದೆ. ನಾಲಿಗೆಯ ಮೇಲೆ ಕಾಣಿಸಿಕೊಳ್ಳುವ ಈ ಹುಣ್ಣುಗಳು ಸಣ್ಣ ಪ್ರಮಾಣದಲ್ಲಿ ಕಂಡು ಬರಬಹುದು ಆದರೆ ಇದು ಮಾತನಾಡುವುದಕ್ಕೂ ಕೂಡ ತೊಂದರೆಯನ್ನುಟುಮಾಡುತ್ತದೆ. ಇನ್ನು ಗಂಟಲಿನಲ್ಲಿ ಕಂಡುಬರುವ ಹುಣ್ಣುಗಳು ಬಹಳ ಸಮಸ್ಯೆ ನೀಡುತ್ತದೆ. ಹಾಗಾಗಿ ಈ ರೀತಿ ಸಮಸ್ಯೆ ಕಂಡುಬರುವುದನ್ನು ನಾವು ತಪ್ಪಿಸಬೇಕಾಗುತ್ತದೆ. ಈ ಸಮಸ್ಯೆಗೆ ಹೊಟ್ಟೆಯಲ್ಲಿನ ಶಾಖದ ಜೊತೆಗೆ, ವಿಟಮಿನ್ ಕೊರತೆ, ಒತ್ತಡ, ಸೋಂಕು ಮತ್ತು ಇತರ ಆರೋಗ್ಯ ಸಮಸ್ಯೆಗಳು ಸಹ ಕಾರಣವಾಗಬಹುದು” ಎಂದಿದ್ದಾರೆ.
ಇದನ್ನೂ ಓದಿ: ಬಾಯಿಯಲ್ಲಿ ಪದೇ ಪದೇ ಗುಳ್ಳೆ ಹುಟ್ಟುವುದು ಈ ರೋಗದ ಲಕ್ಷಣಗಳಾಗಿರಬಹುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ