
ಇತ್ತೀಚಿನ ದಿನಗಳಲ್ಲಿ ಬೊಜ್ಜು (Obesity) ಒಂದು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಇನ್ನು, ಬೊಜ್ಜು ಕಡಿಮೆ ಮಾಡಲು ಕೆಲವರು ಸಾಮಾನ್ಯವಾಗಿ ಸೇವಿಸುವ ಕೆಲವು ಔಷಧಿಗಳು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಅದರಲ್ಲಿ GLP-1 ರಿಸೆಪ್ಟರ್ ಅಗೋನಿಸ್ಟ್‌ಗಳು ಎಂಬ ಔಷಧಿ ಕೂಡ ಒಂದು. ಈ ಔಷಧಿಯನ್ನು ಬಳಸುವವರಿಗೆ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತ ಸರ್ಕಾರವು ಇತ್ತೀಚೆಗೆ GLP-1 (Glucagon-Like Peptide-1 agonist) ಔಷಧಿಗಳ ಬಳಕೆ, ಅದರ ಅಪಾಯಗಳು ಹಾಗೂ ನಿಯಂತ್ರಣ ಕುರಿತು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಔಷಧಿಗಳು ಮುಖ್ಯವಾಗಿ ಟೈಪ್-2 ಮಧುಮೇಹ ಮತ್ತು ಅತಿದಪ್ಪತನ ಅಂದರೆ ಒಬೆಸಿಟಿ ಚಿಕಿತ್ಸೆ ನೀಡಲು ಬಳಸಲಾಗುತ್ತವೆ. ಹಾಗಾದರೆ GLP-1 ಔಷಧಿ ಎಂದರೇನು, ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.
ಸಾಮಾನ್ಯವಾಗಿ ಈ GLP-1 ಔಷಧಿಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ತೂಕ ಇಳಿಕೆಸಿಕೊಳ್ಳುವವರಿಗೂ ಸಹ ಇದು ಸಹಕಾರಿಯಾಗಿದೆ.
ಇದನ್ನೂ ಓದಿ: ಆತ್ಮಹತ್ಯೆ ಯೋಚನೆ, ಖಿನ್ನತೆ; ತೂಕ ಇಳಿಸುವ ಔಷಧಿಗಳ ಅಡ್ಡಪರಿಣಾಮದ ಬಗ್ಗೆ WHO ಎಚ್ಚರಿಕೆ
ತಜ್ಞರ ಪ್ರಕಾರ, ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿಯಾಗಿದೆ. ಇವುಗಳಿಂದ ಕೆಲವು ಗಂಭೀರ ಪಾರ್ಶ್ವ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಈ ಔಷಧಿಗಳನ್ನು ಕಡ್ಡಾಯವಾಗಿ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲೇ ತೆಗೆದುಕೊಳ್ಳಬೇಕು. ಅದರಲ್ಲಿಯೂ ಭಾರತದಲ್ಲಿ GLP-1 ಔಷಧಿಗಳನ್ನು ಯಾವುದೇ ಮೆಡಿಕಲ್ ಅಂಗಡಿಗಳಲ್ಲಿ ಸ್ವತಃ ಖರೀದಿಸಲು ಅವಕಾಶ ಇಲ್ಲ. ಇವುಗಳನ್ನು ಎಂಡೋಕ್ರಿನಾಲಜಿಸ್ಟ್‌ಗಳು, ಇಂಟರ್ನಲ್ ಮೆಡಿಸಿನ್ ತಜ್ಞರು, ಕಾರ್ಡಿಯಾಲಜಿಸ್ಟ್‌ಗಳು ಮಾತ್ರ ನೀಡಬಹುದಾಗಿದೆ. ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ಕ್ರಮವಾಗಿದ್ದು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಾಜ್ಯ ಔಷಧ ನಿಯಂತ್ರಕರ ಜೊತೆಗೂಡಿ ಈ ಔಷಧಿಗಳ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಿದೆ. ವಿವಿಧ ಸ್ಥಳಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದರೆ, ಲೈಸೆನ್ಸ್ ರದ್ದುಪಡಿಸುವುದು, ದಂಡ ವಿಧಿಸುವುದು, ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಹಾಗಾಗಿ, GLP-1 ಔಷಧಿಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ಸ್ವಯಂಪ್ರೇರಿತವಾಗಿ ಬಳಸಬಾರದು. ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಒಟ್ಟಿನಲ್ಲಿ, ಈ ಔಷಧಿಗಳ ಸರಿಯಾದ ಬಳಕೆ ಆರೋಗ್ಯಕ್ಕೆ ಸಹಾಯಕವಾಗಬಹುದು, ಆದರೆ ಗೊತ್ತಿಲ್ಲದೆಯೇ, ನೀವಾಗಿಯೇ ಬಳಸಿದರೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ