
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿ ಪರಿಣಮಿಸಿದ್ದು ಕೊರೊನಾದ ನಂತರ ಈಗ ಜಿಬಿಎಸ್ (GBS) ಅಥವಾ ಗುಯಿಲಿನ್ ಬಾರ್ ಸಿಂಡ್ರೋಮ್ ಎಂಬ ರೋಗ ಭಾರಿ ಸುದ್ದಿಯಲ್ಲಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಈ ಬಗ್ಗೆ ಕಳವಳ ಹೆಚ್ಚಾಗಿದ್ದು, ಸರಿಯಾದ ಮಾಹಿತಿ ಇಲ್ಲದೆಯೇ ಭಯ ಪಡುವಂತಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು, ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗುತ್ತಿದೆ. ಈ ರೋಗದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲವಾದರೂ ಕೂಡ ಸರಿಯಾಗಿ ತಿಳಿದುಕೊಂಡು ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಸಿಂಡ್ರೋಮ್ ಹೇಗೆ ಬರುತ್ತೆ, ಲಕ್ಷಣಗಳು ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಿ.
ಈ ಬಗ್ಗೆ ಕೆಎಂಸಿ ಆಸ್ಪತ್ರೆಯ ನರರೋಗ ತಜ್ಞ ಶಿವಾನಂದ ಪೈ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸಿಂಡ್ರೋಮ್ ಹೊಸದಾಗಿ ಬಂದದ್ದಲ್ಲ. ಈ ಹಿಂದೆಯೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಕಾಣಿಸಿಕೊಂಡಿದ್ದು ರೋಗಿಗಳನ್ನು ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಆದರೆ ಈ ಗುಯಿಲಿನ್ ಬಾರ್ ಸಿಂಡ್ರೋಮ್ ಅಪರೂಪವಾಗಿ ಕಂಡುಬಂದರೂ ಸಹ ಗಂಭೀರವಾದ ನರಮಂಡಲದ ಸಮಸ್ಯೆಯಾಗಿದೆ. ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆ (ರೋಗ ನಿರೋಧಕ) ನರಮಂಡಲದ ಮೇಲೆ ದಾಳಿ ಮಾಡುತ್ತವೆ ಇದರಿಂದ ಜಿಬಿಎಸ್ ಸಿಂಡ್ರೋಮ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವಾಗುವ ಕ್ಯಾಂಪೈಲೋಬ್ಯಾಕ್ಟರ್ ಜೆಜುನಿ (Campylobacter jejuni) ಸೋಂಕು, ಅಶುದ್ಧ ಆಹಾರ, ನೀರು ಸೇವನೆಯಿಂದ ದೇಹವನ್ನು ಸೇರುತ್ತವೆ. ಈ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ದೇಹದ ಪ್ರತಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ನಡೆಸುತ್ತದೆ. ಬಳಿಕ 1- 3 ವಾರದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಸ್ನಾಯು ದೌರ್ಬಲ್ಯದಿಂದ ಆರಂಭವಾಗಿ, ಕೈ ಕಾಲುಗಳಲ್ಲಿ ಜುಮ್ ಎನಿಸುವ ಅನುಭವ ಕಾಡುತ್ತದೆ. ಸಮಸ್ಯೆ ತೀವ್ರವಾದಂತೆ ಪಾರ್ಶ್ವವಾಯು, ಉಸಿರಾಟದ ಸಮಸ್ಯೆ ಕಂಡುಬರುವ ಸಾಧ್ಯತೆ ಇರುತ್ತದೆ. ಜೊತೆಗೆ ಚಿಕುನ್‌ಗುನ್ಯ, ಡೆಂಗ್ಯೂ ನಂತಹ ಸೋಂಕು ದೇಹದಲ್ಲಿದ್ದಾಗಲೂ ಕೂಡ ಈ ಗುಯಿಲಿನ್ ಸಿಂಡ್ರೋಮ್ ಉಂಟಾಗಬಹುದು. ಇದರ ಜೊತೆಗೆ ಅತಿಸಾರ, ಹೊಟ್ಟೆ ನೋವು, ಜ್ವರ, ವಾಂತಿ ಕೂಡ ರೋಗದ ಲಕ್ಷಣಗಳಾಗಿವೆ. ಜಿ ಬಿ ಸಿಂಡ್ರೋಮ್ ಪ್ರಕರಣಗಳು ಡಿಸೆಂಬರ್‌ನಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಸಮಯದಲ್ಲಿ ಹೆಚ್ಚಾಗಿ ವರದಿಯಾಗುತ್ತವೆ.
ಕಾಲುಗಳಲ್ಲಿ ಜುಮ್ ಎನಿಸುವ ಅನುಭವ, ನಿಶ್ಶಕ್ತಿ ಇವೆಲ್ಲವೂ ಇದರ ಆರಂಭಿಕ ಲಕ್ಷಣಗಳಾಗಿದ್ದು ಇದು ತೋಳುಗಲ್ಲಿ ಕಾಣಿಸಿಕೊಂಡು ದೇಹದ ವಿವಿಧ ಭಾಗಗಳಿಗೂ ಹರಡಬಹುದು. ಇದನ್ನು ಕಡೆಗಣಿಸಿದಲ್ಲಿ ರೋಗಿಯಲ್ಲಿ ಉಸಿರಾಟದ ಸಮಸ್ಯೆ ಕಂಡುಬರಬಹುದು ಹಾಗಾಗಿ ಈ ಸಮಯದಲ್ಲಿ ತುರ್ತು ವೈದ್ಯಕೀಯ ನೆರವು ಅತ್ಯಗತ್ಯವಾಗಿರುತ್ತದೆ. ಜಿಬಿ ಸಿಂಡ್ರೋಮ್‌ನ್ನು ಪತ್ತೆಹಚ್ಚಲು ರೋಗಿಯ ನರ ಮಂಡಲ ಪರೀಕ್ಷೆ, ಸೆರೆಬ್ರೋ ಸ್ಪೈನಲ್ ದ್ರವ ಪರೀಕ್ಷೆ ಸೇರಿ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಾರೆ. 99% ಪ್ರಕರಣಗಳಲ್ಲಿ ಈ ರೋಗವನ್ನು ಗುಣಪಡಿಸಬಹುದು ಆದರೆ ರೋಗಿಯು ಗುಣಮುಖವಾಗುವ ಸಮಯ ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ರೋಗ ಕಾಣಿಸಿಕೊಂಡರೂ ಚಿಕಿತ್ಸೆಗೆ ತಡಮಾಡಿದರೆ ಈ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಹಾಗಾಗಿ ರೋಗ ಲಕ್ಷಣ ಕಾಣಿಸಿಕೊಂಡ ಬಳಿಕ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ಯುವಜನರಲ್ಲಿ ಕಂಡುಬರುತ್ತಿರುವ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್’ಗೆ ಕಾರಣವೇನು? ಇಲ್ಲಿದೆ ಮನಶಾಸ್ತ್ರಜ್ಞರ ಅಭಿಪ್ರಾಯ
ನಿಖರವಾಗಿ ಯಾವ ಕಾರಣಕ್ಕೆ ಜಿಬಿ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಸಾಂಕ್ರಾಮಿಕವಲ್ಲದ ಆದರೆ ದೇಹದೊಳಗೆ ಹೊಕ್ಕಿದ ಬ್ಯಾಕ್ಟೀರಿಯಾದಿಂದಲೇ ಜಿ ಬಿ ಸಿಂಡ್ರೋಮ್ ಸಮಸ್ಯೆ ಆರಂಭವಾಗುತ್ತದೆ. ಹೀಗಾಗಿ ಆಹಾರದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಹಣ್ಣು, ತರಕಾರಿಗಳನ್ನು ಶುಚಿಗೊಳಿಸಿ ಸೇವಿಸಿ. ಮಾಂಸಾಹಾರವನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸಿ ಸೇವಿಸಿ. ಅಡಿಗೆ ತಯಾರಿಸುವ ಪ್ರದೇಶ ಶುಚಿಯಾಗಿರುವಂತೆ ನೋಡಿಕೊಳ್ಳಿ. ನೀರು ಕುದಿಸಿ ಕುಡಿಯುವ ಅಭ್ಯಾಸವಿರಲಿ.
ಗುಯಿಲಿನ್ ಬಾರ್ ಸಿಂಡ್ರೋಮ್ ಚಿಕಿತ್ಸೆ ದುಬಾರಿಯಾಗಿದ್ದು ಅದನ್ನು ತಡೆಯಲು ಸರ್ಕಾರ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆ ಹೊರಡಿಸಲಾಗಿದೆ. ರೋಗಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಈ ಚಿಕಿತ್ಸಾ ಸೌಲಭ್ಯ ನೀಡಲಾಗಿದ್ದು ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದೆ. ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡಲು ಸೂಚಿಸಲಾಗಿದ್ದು ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಔಷಧದ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ಪಟ್ಟಿಯನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚನೆ ನೀಡಲಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 am, Sat, 17 January 26