Health Care: ಮಖಾನಾವನ್ನು ಹಾಲಿನೊಂದಿಗೆ ಸೇವನೆ ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದು ಕೂಡ ಒಂದು ಸವಾಲಾಗಿ ಪರಿಣಮಿಸಿರುವುದರಿಂದ ಒಳ್ಳೆಯ ಆಹಾರಗಳ ಸೇವನೆ ಮಾಡಿ ಅನಾರೋಗ್ಯ ಬರದಂತೆ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಪೂರಕವೆಂಬಂತೆ ಮಖಾನಾ ಮತ್ತು ಹಾಲನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಶಕ್ತಿಯನ್ನು ಹೆಚ್ಚಿಸುವ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಅತ್ಯುತ್ತಮ ಆಹಾರವಾಗಿದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಮಖಾನಾ (Makhana) ಅಥವಾ ಲೋಟಸ್ ಸೀಡ್ಸ್ (Lotus Seeds) ಅಥವಾ ತಾವರೆ ಬೀಜದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ತಿಳಿದಿರುವ ವಿಚಾರ. ಆದರೆ ಆರೋಗ್ಯ (Health ) ಪ್ರಯೋಜನಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮಖಾನಾದ ಜೊತೆಗೆ ಹಾಲನ್ನು ಸೇರಿಸಿಕೊಳ್ಳುವುದರಿಂದ ಪೋಷಕಾಂಶ ದುಪ್ಪಟಾಗುತ್ತದೆ. ಇವೆರಡನ್ನೂ ಒಟ್ಟಿಗೆ ಕುದಿಸಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ಜೊತೆಗೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದು ಕೂಡ ಒಂದು ಸವಾಲಾಗಿ ಪರಿಣಮಿಸಿರುವುದರಿಂದ ಒಳ್ಳೆಯ ಆಹಾರಗಳ ಸೇವನೆ ಮಾಡಿ ಅನಾರೋಗ್ಯ ಬರದಂತೆ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಅದಕ್ಕೆ ಪೂರಕವೆಂಬಂತೆ ಈ ರೀತಿಯ ಆಹಾರಗಳು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ನಿದ್ರೆ ಸಮಸ್ಯೆಗೆ ಪರಿಹಾರ ನೀಡುತ್ತದೆ:
ಆರೋಗ್ಯ ತಜ್ಞರ ಪ್ರಕಾರ, ಮಖಾನಾಗಳು ಮೆಲಟೋನಿನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತವೆ. ಅಂದರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ಸಹಾಯ ಮಾಡುವುದಲ್ಲದೆ, ನಿದ್ರೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಅದರಲ್ಲಿಯೂ ಹಾಲು ಮತ್ತು ಮಖಾನಾಗಳನ್ನು ಒಟ್ಟಿಗೆ ಸೇವಿಸಿದಾಗ ನಿದ್ರೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಸೇವಿಸಿದರೆ ದೇಹದಲ್ಲಿ ನಿದ್ರೆಗೆ ಅಗತ್ಯವಾದ ಹಾರ್ಮೋನುಗಳು ಹೆಚ್ಚಾಗುತ್ತವೆ. ಗಾಢವಾಗಿ ನಿದ್ರೆ ಬರುವುದಕ್ಕೂ ಸಹಕಾರಿಯಾಗಿದೆ.
ತೂಕ ಹೆಚ್ಚಳವಾಗದಂತೆ ತಡೆಯುತ್ತದೆ:
ಮಖಾನಾ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಹೊಟ್ಟೆಯನ್ನು ತುಂಬಿಸುತ್ತದೆ. ಜೊತೆಗೆ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಅದರಲ್ಲಿಯೂ ಮಖಾನಾವನ್ನು ಹಾಲಿನಲ್ಲಿ ಕುದಿಸಿ ಕುಡಿದರೆ, ನಿಮಗೆ ಬಹಳ ಸಮಯದ ವರೆಗೆ ಯಾವುದೇ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ಅನಿಸುವುದಿಲ್ಲ. ಹಾಗಾಗಿ ಇದು ಅಧಿಕ ತೂಕ ಹೆಚ್ಚಳವನ್ನು ತಡೆಯಲು ಸಹಾಯ ಮಾಡುತ್ತದೆ.
ದೇಹಕ್ಕೆ ಶಕ್ತಿ ನೀಡುತ್ತದೆ:
ಮಖಾನಾದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ದಿನವಿಡೀ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ದಿನಪೂರ್ತಿ ಸಕ್ರಿಯವಾಗಿರಲು ಪ್ರೋಟೀನ್ ಅತ್ಯಗತ್ಯ. ಹಾಲು ಮತ್ತು ಮಖಾನಾ ಮಿಶ್ರಣವು ದೇಹದ ಶಕ್ತಿ ಕಾಪಾಡಿಕೊಳ್ಳಲು ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀವಕೋಶಗಳ ಹಾನಿಯನ್ನು ತಡೆಯುತ್ತದೆ:
ಹಾಲಿನೊಂದಿಗೆ ಬೆರೆಸಿದ ಮಖಾನಾದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ಫ್ರೀ ರಾಡಿಕಲ್ ಗಳ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಗಳಿಂದಾಗಿ ದೇಹದಲ್ಲಿನ ಜೀವಕೋಶಗಳಿಗೆ ಹಾನಿಯಾಗದಂತೆ ಕಾರ್ಯನಿರ್ವಹಿಸುತ್ತವೆ.
ಹೃದಯ ಸಂಬಂಧಿತ ಸಮಸ್ಯೆ ಬರದಂತೆ ತಡೆಯುತ್ತದೆ:
ಕಮಲದ ಬೀಜಗಳಲ್ಲಿ ಕಡಿಮೆ ಸೋಡಿಯಂ ಅಂಶವಿದ್ದು ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಕೂಡ ಅಧಿಕವಾಗಿದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಕಮಲದ ಬೀಜದೊಂದಿಗೆ ಹಾಲನ್ನು ಒಟ್ಟಿಗೆ ಸೇರಿಸಿ ಸೇವನೆ ಮಾಡಿದರೆ ರಕ್ತದೊತ್ತಡವನ್ನು ಸಮತೋಲನಗೊಳಿಸಲು ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದನ್ನೂ ಓದಿ: ಟಿಬಿ ಸೋಂಕಿಗೆ ಕಾರಣವೇನು? ಕ್ಷಯರೋಗದ ಬಗ್ಗೆ ಈ ಕೆಲವೊಂದು ಮಾಹಿತಿ ನಿಮಗೆ ಗೊತ್ತಿರಲಿ
ಮಧುಮೇಹಿಗಳಿಗೂ ಒಳ್ಳೆಯದು:
ಮಖಾನಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸುತ್ತದೆ. ಮಖಾನಾವನ್ನು ಹಾಲಿನೊಂದಿಗೆ ಕುದಿಸಿ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ಮಧುಮೇಹಿಗಳು ಸಹ ಮಖಾನಾವನ್ನು ಹಾಲಿನೊಂದಿಗೆ ಬೆರೆಸಿಕೊಂಡು ಸೇವನೆ ಮಾಡಬಹುದು.
ಹೇಗೆ ಸೇವನೆ ಮಾಡಬೇಕು?
ಕಡಿಮೆ ಉರಿಯಲ್ಲಿಟ್ಟುಕೊಂಡು ಒಂದು ಲೋಟ ಹಾಲನ್ನು ಬಿಸಿ ಮಾಡಿ. ಬಳಿಕ ಅದಕ್ಕೆ 8- 10 ಮಖಾನಾಗಳನ್ನು ಸೇರಿಸಿ. 5- 7 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ಆ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಒಟ್ಟಿಗೆ ಕುಡಿಯಬಹುದು. ಇದು ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ