Carrot: ಬಣ್ಣ ಯಾವುದೇ ಇರಲಿ ಕ್ಯಾರಟ್ ತಿನ್ನಿ ಅಷ್ಟೆ! ಏಕೆಂದರೆ ಅದರಲ್ಲಿದೆ ಬಗೆಬಗೆಯ ಆರೋಗ್ಯ ಲಾಭಗಳು!
ಕ್ಯಾರಟ್ ಅನ್ನು ಹಬೆಯಲ್ಲಿ ಬೇಯಿಸಿ ರಸ ತೆಗೆದು, ಜೇನು ಬೆರೆಸಿ ಕುಡಿದರೆ ಹೃದಯ ರೋಗಿಗಳಿಗೆ ಉತ್ತಮ. ಮಹಿಳೆಯರ ಮಾಸಿಕ ಋತುಚಕ್ರದಲ್ಲಿ ಗಜ್ಜರಿಯ ರಸ ಸೇವನೆ ಲಾಭಕರವಾಗಿರುತ್ತದೆ.
ಗಜ್ಜರಿ (ಕ್ಯಾರಟ್) (ಡಾಕಸ್ ಕ್ಯಾರೋಟಾ ಉಪಜಾತಿ. ಸಟೈವಸ್) ಸಾಮಾನ್ಯವಾಗಿ ಕಿತ್ತಳೆ, ನೇರಳೆ, ಕೆಂಪು, ಬಿಳಿ, ಅಥವಾ ಹಳದಿ ಬಣ್ಣವುಳ್ಳ, ತಾಜಾ ಇದ್ದಾಗ ಗರಿಗರಿ ರಚನೆ ಹೊಂದಿರುವ ಒಂದು ಗಡ್ಡೆ ತರಕಾರಿ. ಗಜ್ಜರಿಯ ತಿನ್ನಲರ್ಹವಾದ ಭಾಗವು ಒಂದು ತಾಯಿಬೇರಾಗಿದೆ. ಅದು ಯುರೋಪ್ ಮತ್ತು ನೈಋತ್ಯ ಏಷ್ಯಾಕ್ಕೆ ಸ್ಥಳೀಯವಾದ ಕಾಡು ಗಜ್ಜರಿ ಡಾಕಸ್ ಕ್ಯಾರೋಟಾದ ಒಂದು ದೇಶೀಯ ಪ್ರಕಾರ. ಪರ್ಷಿಯಾದಲ್ಲಿ ಮೂಲತಃ ಇದರ ಕೃಷಿಯನ್ನು ಅದರ ಎಲೆಗಳು ಮತ್ತು ಬೀಜಗಳಿಗಾಗಿ ಮಾಡುತ್ತಿದ್ದರು. ಸಾಮಾನ್ಯವಾಗಿ ಇದರ ಗೆಡ್ಡೆಗಳು ತರಕಾರಿಯಾಗಿ ಬಳಕೆಯಾಗುತ್ತಿದ್ದರೂ ಇದರ ಹಸಿರೆಲೆಗಳನ್ನೂ ಕೆಲವೊಮ್ಮೆ ಬಳಸುತ್ತಾರೆ.
ಕ್ಯಾರಟ್ -ಗಜ್ಜರಿ (Carrot, गाजर) ಎಲ್ಲರಿಗೂ ಚಿರಪರಿಚಿತವಾದ ಹಾಗೂ ಪ್ರಿಯವಾದ ತರಕಾರಿ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಗಾಜರ್ ಎಂದೂ ಆಂಗ್ಲ ಭಾಷೆಯಲ್ಲಿ Carrot ಎಂದು ಕರೆಯುತ್ತಾರೆ. ಕ್ಯಾರಟ್ ನಿಂದ ಹಲ್ವ, ಮೋರಬ್ಬ, ಶರಬತ್ತು, ಪಲ್ಯ, ಉಪ್ಪಿನ ಕಾಯಿ ಇತ್ಯಾದಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಗಾತ್ರ ಮತ್ತು ಬಣ್ಣಗಳಲ್ಲಿ ವ್ಯತ್ಯಾಸ ಇರುವ ಗಜ್ಜರಿ ಬೆಳೆಯುತ್ತಾರೆ. ವಿಶಿಷ್ಟವಾದ ಮಧುರ ರುಚಿಯ ಈ ಕ್ಯಾರಟ್ ಬೆಳೆಯಲ್ಲಿ ಸಾಕಷ್ಟು ಎ ಜೀವಸತ್ವ ಮತ್ತು ಇತರೆ ಪೋಷಕಾಂಶಗಳು ಇರುವುದರಿಂದ ಬೆಳೆಯುವ ಮಕ್ಕಳಿಗೆ ಇದು ಉತ್ತಮ ಆಹಾರವಾಗಿದೆ. ಗಜ್ಜರಿ ಬರೀ ತರಕಾರಿಯಲ್ಲ, ಇದರಲ್ಲಿ ಅಚ್ಚರಿಯ ಔಷಧೀಯ ಗುಣಗಳೂ ಸಾಕಷ್ಟಿವೆ.
- ಗಜ್ಜರಿಯ ಔಷಧೀಯ ಗುಣಗಳು ಹೀಗಿವೆ: * ಕಣ್ಣಿನ ಕ್ಷಮತೆ ಹೆಚ್ಚಿಸಲು 200 ಗ್ರಾಂ ನಷ್ಟು ಸೋಂಪು ಕಾಳನ್ನು ಗಾಜಿನ ಭರಣೆಯಲ್ಲಿ ಹಾಕಿ, ಅದಕ್ಕೆ ಉತ್ತಮವಾದ ಗಜ್ಜರಿ ರಸವನ್ನು ಹಾಕಿ ನೆನೆಸಿ 4 ಗಂಟೆ ನಂತರ ತೆಗೆದು ನೆರಳಲ್ಲಿ ಒಣಗಿಸಬೇಕು. ಈ ರೀತಿ 3 ದಿನ ಮಾಡಬೇಕು. ಈ ರೀತಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ರಾತ್ರಿ ಮಲಗುವ ಮುನ್ನ 10 ಗ್ರಾಂ ನಷ್ಟು ಈ ಚೂರ್ಣವನ್ನು ಹಾಲಿನಲ್ಲಿ ಹಾಕಿ ಕುಡಿಯುವುದ ರಿಂದ ಕಣ್ಣಿನ ದೃಷ್ಟಿಯ ಸಾಮರ್ಥ್ಯ ಹೆಚ್ಚುತ್ತದೆ.
- * ಅರ್ಧ ತಲೆ ನೋವಿಗೆ… ಕ್ಯಾರಟ್ ಎಲೆಗೆ ತುಪ್ಪ ಸವರಿ ಬಿಸಿ ಮಾಡಿ ರಸ ತೆಗೆದು 2 – 3 ಹನಿ ಮೂಗಿನಲ್ಲಿ ಮತ್ತು ಕಿವಿಯಲ್ಲಿ ಹಾಕುವುದರಿಂದ ಗುಣವಾಗುತ್ತದೆ.
- * ಗಜ್ಜರಿಯನ್ನು ತುಂಡು ಮಾಡಿ ಹಾಲಿನಲ್ಲಿ ಬೇಯಿಸಿ ಸಕ್ಕರೆ ಯೊಂದಿಗೆ ಸೇವಿಸಿದರೆ ಹೃದಯಕ್ಕೆ ಬಲ ಬರುತ್ತದೆ.
- * ಗಜ್ಜರಿಯನ್ನು ಹಬೆಯಲ್ಲಿ ಬೇಯಿಸಿ ರಸ ತೆಗೆದು, ಜೇನು ಬೆರೆಸಿ ಕುಡಿದರೆ ಹೃದಯ ರೋಗಿಗಳಿಗೆ ಉತ್ತಮ.
- * ಮಹಿಳೆಯರ ಮಾಸಿಕ ಋತುಚಕ್ರದಲ್ಲಿ ಗಜ್ಜರಿಯ ರಸ ಸೇವನೆ ಲಾಭಕರವಾಗಿರುತ್ತದೆ.
- * ಶರೀರದ ಬಾವುಗಳಿಗೆ ಗಜ್ಜರಿಯ ಸೇವನೆ ಒಳ್ಳೆಯದು.
- * ಗಜ್ಜರಿಯ ರಸದಲ್ಲಿ ಕಾಳುಮೆಣಸಿನ ಪುಡಿ, ದಾಲ್ಚಿನ್ನಿ ಪುಡಿ, ಕಲ್ಲುಸಕ್ಕರೆ ಪುಡಿ ಬೆರೆಸಿ ನೆಕ್ಕುವುದರಿಂದ ಕೆಮ್ಮು ವಾಸಿಯಾಗುತ್ತದೆ.
- ಹೀಗೆ ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆ ಯಾಗುವ ಈ ಗಜ್ಜರಿ ಸೇವನೆಯಿಂದ ದೇಹಕ್ಕೆ ಅನೇಕ ಲಾಭಗಳಿವೆ. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಕ್ಯಾರಟ್ ಅನ್ನು ತಿನ್ನಿಸಬೇಕು. (ಮಾಹಿತಿ ಲೇಖನ: ಸಾಹೇಬ್ಲಾಲ್ ಹಸನ್ಸಾಬ್ ನದಾಫ್)