ಮಧುಮೇಹದಿಂದ ಬಳಲ್ತಿದ್ದೀರಾ?-ನಿಮ್ಮ ನಿತ್ಯದ ಡಯಟ್ನಲ್ಲಿ ಈ ಐದು ಆಹಾರಗಳನ್ನು ಅಳವಡಿಸಿಕೊಳ್ಳಿ
ಸಾಮಾನ್ಯವಾಗಿ ನಿತ್ಯ ಬಳಸುವ ಮೊಸರಿನಲ್ಲಿ ಸಕ್ಕರೆ ಅಂಶವೂ ಜಾಸ್ತಿ, ಕೊಬ್ಬಿನ ಅಂಶವೂ ಹೆಚ್ಚು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಬಳಸಲು ಸಾಧ್ಯವಿಲ್ಲ.
ಮಧುಮೇಹ (Diabetes)ಎಂಬುದು ಇತ್ತೀಚೆಗೆ ಸರ್ವೇಸಾಮಾನ್ಯವಾದ ಕಾಯಿಲೆ. ಚಿಕ್ಕವರಿಂದ ಹಿಡಿದು, ಹಿರಿಯರವರೆಗೆ ಯಾರಿಗೆ ಬೇಕಾದರೂ ಬರುತ್ತದೆ. ಹೀಗೆ ಒಮ್ಮೆ ಡಯಾಬಿಟಿಸ್ಗೆ ಒಳಗಾದರೆ, ಮತ್ತೆ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ನಿತ್ಯ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಅದರೊಂದಿಗೆ ಆಹಾರ ಕ್ರಮದಲ್ಲಿ ಬದಲಾವಣೆ ಅನಿವಾರ್ಯ. ಕೆಲವು ಡಯಟ್ಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ವ್ಯಾಯಾಮ, ವಾಕಿಂಗ್ಗಳೂ ಬದುಕಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತವೆ.
ಮಧುಮೇಹಿಗಳು ಮದ್ಯಸೇವನೆ ಕಡಿಮೆ ಮಾಡಬೇಕು. ಕೊಬ್ಬಿನ ಅಂಶ ಕಡಿಮೆ ಇರುವ ನೇರ ಮಾಂಸ ಸೇವನೆ ಮಾಡಿದರೆ ಒಳಿತು. ಸೀಫುಡ್ಗಳು, ನಾರಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಸಕ್ಕರೆ ಅಂಶ ಇರುವ ಯಾವುದೇ ಆಹಾರಗಳಿಂದ ದೂರವೇ ಇರಬೇಕು. ಇಷ್ಟೆಲ್ಲ ಆದರೂ ಸಕ್ಕರೆ ಕಾಯಿಲೆ ಇರುವವರು ಯಾವುದನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಡಯಟ್ ಹೇಗಿರಬೇಕು ಎಂಬಿತ್ಯಾದಿ ಪ್ರಶ್ನೆಗಳು ಸದಾ ಏಳುತ್ತಲೇ ಇರುತ್ತವೆ. ನಾವಿಲ್ಲಿ ಮಧುಮೇಹಿಗಳಿಗೆ ಅನುಕೂಲವಾಗುವ ಐದು ಆಹಾರದ ಬಗ್ಗೆ ತಿಳಿಸಿದ್ದೇವೆ ನೋಡಿ..ಇವು ಶರೀರದಲ್ಲಿ ಸಕ್ಕರೆ ಅಂಶ ನಿಯಂತ್ರಿಸುವ ಜತೆ, ತೂಕವನ್ನೂ ಕಡಿಮೆ ಮಾಡುತ್ತವೆ.
1.ಕ್ಯಾರೆಟ್: ಕ್ಯಾರೆಟ್ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ತರಕಾರಿ. ನಿಮ್ಮ ಡಯಟ್ನಲ್ಲಿ ನೀವಿದನ್ನು ಅಳವಡಿಸಿಕೊಳ್ಳಬಹುದು. ಯುಎಸ್ ಕೃಷಿ ಡಿಪಾರ್ಟ್ಮೆಂಟ್ ಪ್ರಕಾರ, 100 ಗ್ರಾಂ ಕ್ಯಾರೆಟ್ ಸುಮಾರು 4.7 ಗ್ರಾಂಗಳಷ್ಟು ಸಕ್ಕರೆ ಅಂಶ ಹೊಂದಿರುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಭಯವಿಲ್ಲದೆ ಕ್ಯಾರೆಟ್ನ್ನು ಡಯಟ್ನಲ್ಲಿ ಅಳವಡಿಸಿಕೊಳ್ಳಬಹುದು. ಕ್ಯಾರೆಟ್ನ್ನು ಕತ್ತರಿಸಿ ಹಾಗೇ ತಿನ್ನಬಹುದು. ಇದನ್ನು ಜ್ಯೂಸ್ ಮಾಡಿಕೊಂಡು, ಸಕ್ಕರೆ ಹಾಕದೆ ಸೇವಿಸಬಹುದು.
2. ಸೌತೆಕಾಯಿ: ಸೌತೆಕಾಯಿ ದೇಹಕ್ಕೆ ತಾಜಾತನ ನೀಡುವ ತರಕಾರಿ. ಇದು ಆರೋಗ್ಯಕರವೂ ಹೌದು, ರುಚಿಕರವೂ ಹೌದು. ಸೌತೆಕಾಯಿಯಲ್ಲಿ ತುಂಬ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಇರುತ್ತದೆ. ಅಷ್ಟೇ ಅಲ್ಲ, ಕಾರ್ಬೋಹೈಡ್ರೇಟ್, ಗ್ಲಿಸೆಮಿಕ್ ಇಂಡೆಕ್ಸ್ಗಳೂ ಕಡಿಮೆಯಿದ್ದು, ನಾರು ಮತ್ತು ನೀರಿನ ಅಂಶ ತುಂಬ ಜಾಸ್ತಿ ಇರುತ್ತದೆ. ಹೀಗಾಗಿ ಮಧುಮೇಹ ಇರುವವರು ತಮ್ಮ ನಿತ್ಯದ ಆಹಾರದಲ್ಲಿ ಇದನ್ನು ಬಳಸಬಹುದು. ಸೌತೆಕಾಯಿಯಲ್ಲಿಕಡಿಮೆ ಕೊಬ್ಬಿನ ಅಂಶ ಮತ್ತು ಕ್ಯಾಲೋರಿ ಇರುವುದರಿಂದ ತೂಕ ಇಳಿಕೆಯಲ್ಲೂ ಸಹಕಾರಿ.
3. ಬ್ರೌನ್ ರೈಸ್ (ಕಂದು ಅನ್ನ) ಶುಗರ್ ಬಂದ ತಕ್ಷಣ ನೀವು ನಿತ್ಯ ಊಟ ಮಾಡುವ ಬಿಳಿ ಅನ್ನವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅದರ ಬದಲಿಗೆ ಬ್ರೌನ್ ರೈಸ್ ತಿನ್ನಬಹುದು ಎಂದೂ ಹೇಳುತ್ತಾರೆ. ಈ ಬ್ರೌನ್ ರೈಸ್ನಲ್ಲಿ ಅಂದಾಜು 0.9ರಷ್ಟು ಸಕ್ಕರೆ ಅಂಶ ಇರುತ್ತದೆ ಎಂದು ಯುಎಸ್ ಕೃಷಿ ಡಿಪಾರ್ಟ್ಮೆಂಟ್ (USDA)ಹೇಳಿದೆ. ವೈಟ್ ರೈಸ್ಗೆ ಹೋಲಿಸಿದರೆ ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೆ ತುಂಬ ಅನುಕೂಲಕರ ಆಹಾರ.
4. ಗ್ರೀಕ್ ಯೋಗರ್ಟ್ (ಗ್ರೀಕ್ ಮೊಸರು): ಸಾಮಾನ್ಯವಾಗಿ ನಿತ್ಯ ಬಳಸುವ ಮೊಸರಿನಲ್ಲಿ ಸಕ್ಕರೆ ಅಂಶವೂ ಜಾಸ್ತಿ, ಕೊಬ್ಬಿನ ಅಂಶವೂ ಹೆಚ್ಚು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಬಳಸಲು ಸಾಧ್ಯವಿಲ್ಲ. ಆದರೆ ಕೊಬ್ಬಿನ ಅಂಶವನ್ನು ತೆಗೆಯಲಾದ ಗ್ರೀಕ್ ಯೋಗರ್ಟ್ ತಿನ್ನಲು ರುಚಿಯಾಗಿರುತ್ತದೆ. ಹಾಗೇ, ಮಧುಮೇಹಿಗಳಿಗೆ ಅನುಕೂಲ. ಸುಮಾರು 100 ಗ್ರಾಂ ಗ್ರೀಕ್ ಯೋಗರ್ಟ್ನಲ್ಲಿ ಕೇವಲ 3.2 ಗ್ರಾಂಗಳಷ್ಟು ಸಕ್ಕರೆ ಅಂಶ ಇರುತ್ತದೆ. ಇದನ್ನು ಡಯಾಬಿಟಿಸ್ ಇರುವವರು ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದವರು ಡಯಟ್ನಲ್ಲಿ ಬಳಸಬಹುದು.
5. ಅಣಬೆಗಳು: ಮಶ್ರೂಮ್ಗಳು ಅಥವಾ ಅಣಬೆಗಳಿಗೆ ಅಪಾರ ರುಚಿಯಿದೆ. ಹಾಗೇ ಅತ್ಯಂತ ಆರೋಗ್ಯಕರ ಆಹಾರ. ಅತ್ಯಂತ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಜತೆಗೆ, ಅಧಿಕ ನಾರಿನ ಅಂಶ ಹೊಂದಿರುತ್ತವೆ. 100 ಗ್ರಾಂಗಳಷ್ಟು ಬಿಳಿ ಅಣಬೆಯಲ್ಲಿ 2 ಗ್ರಾಂಗಳಷ್ಟು ಸಕ್ಕರೆ ಅಂಶವಿರುತ್ತದೆ ಎಂದು ಯುಎಸ್ಡಿಎ ತಿಳಿಸಿದೆ. ತಿನ್ನಬಹುದಾದ ಯಾವುದೇ ಅಣಬೆಯನ್ನೂ ಕೂಡ ಮಧುಮೇಹಿಗಳು ತಮ್ಮ ಡಯಟ್ನಲ್ಲಿ ಬಳಕೆ ಮಾಡಿಕೊಳ್ಳಬಹುದು.
(ಮಧುಮೇಹ ಎಂಬುದು ನೋಡಲು ಸಾಮಾನ್ಯ ಕಾಯಿಲೆ ಅನ್ನಿಸಿದರೂ, ಅದು ಜೀವಕ್ಕೇ ಅಪಾಯ ತರಬಲ್ಲದು. ಹೀಗಾಗಿ ಪ್ರತಿಯೊಬ್ಬ ಡಯಾಬಿಟಿಕ್ ರೋಗಿಯೂ ವೈದ್ಯರನ್ನು ಕಂಡು, ಸೂಕ್ತ ಔಷಧ ಪಡೆಯಬೇಕು. ಅದರ ಹೊರತಾಗಿ ಡಯಟ್ ಮಾಡಬೇಕು)
ಇದನ್ನೂ ಓದಿ: ‘ಗೆಹರಾಯಿಯಾ’ ನೋಡಿ ದೀಪಿಕಾ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ನಟ; ಅಭಿಮಾನಿಗಳಿಂದ ತರಾಟೆ
Published On - 7:50 am, Sun, 13 February 22