ಧೂಮಪಾನ ಬಿಟ್ಟರೆ ಮಧುಮೇಹದ ಅಪಾಯ ಕಡಿಮೆಯಾಗುತ್ತಾ? ವೈದ್ಯರು ಬಿಚ್ಚಿಟ್ಟ ಸತ್ಯ ಇಲ್ಲಿದೆ
ಧೂಮಪಾನವನ್ನು ಬಿಡುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆಯೇ? ತಜ್ಞರು ಹೇಳುವಂತೆ ಇದು ಸ್ಥಿತಿಯನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಗಂಭೀರ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳಿಗೆ ಧೂಮಪಾನ ಬಿಡುವುದು ಏಕೆ ಬಹಳ ಮುಖ್ಯ ಎಂಬುದರ ಮಾಹಿತಿ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 18: ಮಧುಮೇಹವು (Diabetes) ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಇದು ದೇಹವು ಗ್ಲೂಕೋಸ್ ಅನ್ನು ಚಯಾಪಚಯಗೊಳಿಸುವ ಕ್ರಿಯೆಗೆ ಅಡ್ಡಿಪಡಿಸುತ್ತದೆ. ಈ ಕಾಯಿಲೆಯಲ್ಲಿ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಹಾಗೇ, ದೇಹವು ಇನ್ಸುಲಿನ್ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಕಾಲಾನಂತರ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆ ಅಂಶ ನಮ್ಮ ದೇಹದ ಅಂಗಗಳಿಗೆ ಹಾನಿ ಮಾಡುತ್ತದೆ ಮತ್ತು ಹೃದಯ ಕಾಯಿಲೆ, ಮೂತ್ರಪಿಂಡ ವೈಫಲ್ಯ ಮತ್ತು ಕುರುಡುತನದಂತಹ ಗಂಭೀರ ಅಪಾಯವನ್ನುಂಟು ಮಾಡುತ್ತದೆ.
ಟೈಪ್ 2 ಮಧುಮೇಹವು ಅತ್ಯಂತ ಪ್ರಚಲಿತ ವಿಧವಾಗಿದೆ. ಇದು ಜಾಗತಿಕವಾಗಿ ಶೇ. 95ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ. ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ, ಇದು ಅತ್ಯಂತ ಮಹತ್ವದ ಜಾಗತಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಟೈಪ್ 1 ಮಧುಮೇಹವು ಆನುವಂಶಿಕವಾಗಿದ್ದು, ಟೈಪ್ 2 ಮಧುಮೇಹವು ಜೀವನಶೈಲಿಯಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ.
ಇದನ್ನೂ ಓದಿ: ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ
ಈ ಬಗ್ಗೆ ಏಷ್ಯನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸಂದೀಪ್ ಖಾರ್ಬ್ ಮಾತನಾಡಿದ್ದು, ಧೂಮಪಾನವು ಮಧುಮೇಹದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ತಿಳಿಸುತ್ತದೆ. “ಧೂಮಪಾನ ಮಾಡದವರಿಗಿಂತ ಧೂಮಪಾನಿಗಳಲ್ಲಿ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ. 30ರಿಂದ ಶೇ. 40ರಷ್ಟು ಹೆಚ್ಚು” ಎಂದು ತಿಳಿಸಿದ್ದಾರೆ. ಸಿಗರೇಟ್ ರಾಸಾಯನಿಕಗಳು ಜೀವಕೋಶಗಳಿಗೆ ಹಾನಿ ಮಾಡುತ್ತವೆ, ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸರಿಯಾಗಿ ನಿಯಂತ್ರಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಧೂಮಪಾನವು ಮಧುಮೇಹದ ತೊಡಕುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. “ಧೂಮಪಾನ ಮಾಡುವ ಮಧುಮೇಹ ಹೊಂದಿರುವ ಜನರು ಹೃದಯ ಸಂಬಂಧಿ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಹಾನಿ, ಕುರುಡುತನ ಮತ್ತು ಅಂಗಚ್ಛೇದನಕ್ಕೆ ಕಾರಣವಾಗುವ ಕಳಪೆ ರಕ್ತಪರಿಚಲನೆಯನ್ನು ಎದುರಿಸುವ ಸಾಧ್ಯತೆಯಿದೆ” ಎಂದು ಡಾ. ಖಾರ್ಬ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮಧುಮೇಹಿಗಳು ದಾಲ್ಚಿನ್ನಿ ಸೇವಿಸುವುದು ಒಳ್ಳೆಯದೇ? ಇದರ ಆರೋಗ್ಯ ಪ್ರಯೋಜನಗಳೇನು?
ಧೂಮಪಾನ ತ್ಯಜಿಸುವುದರಿಂದಾಗುವ ಪ್ರಯೋಜನಗಳು:
- ಉತ್ತಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣ
- ಸುಧಾರಿತ ಇನ್ಸುಲಿನ್ ಸಂವೇದನೆ
- ಶಸ್ತ್ರಚಿಕಿತ್ಸೆಯಿಂದ ವೇಗವಾಗಿ ಚೇತರಿಸಿಕೊಳ್ಳುವುದು
- ಹೃದಯ ಕಾಯಿಲೆ ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯ ಕಡಿಮೆಯಾಗಲಿದೆ
ಧೂಮಪಾನ ತ್ಯಜಿಸಿದ ಕೇವಲ 8 ವಾರಗಳಲ್ಲಿ ಇನ್ಸುಲಿನ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ಧೂಮಪಾನ ತ್ಯಜಿಸುವುದರಿಂದ ಮಧುಮೇಹ ಗುಣವಾಗುವುದಿಲ್ಲವಾದರೂ, ಅದು ದೇಹವನ್ನು ಅನಾರೋಗ್ಯದಿಂದ ದೂರವಿಡಲು ಮತ್ತು ಸಂಬಂಧಿತ ಮಾರಣಾಂತಿಕ ತೊಡಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




