Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ

Acidity Home Remedies: 'ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ' ಎಂಬ ಗಾದೆಯಂತೆ ನಾವು ನಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು

Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 27, 2022 | 2:34 PM

ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ನಮ್ಮ ಆರೋಗ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗೇ, ಆಮ್ಲೀಯತೆ (Acidity) ಮತ್ತು ಅಜೀರ್ಣದಂತಹ (Digestion Problem)ನಂತಹ ಸಮಸ್ಯೆಗಳನ್ನು ದೂರವಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಸರಿಯಾದ ನಿದ್ರೆ ಮತ್ತು ಒತ್ತಡದ ಸಮಸ್ಯೆಯಿಂದ ಈ ಸಮಸ್ಯೆಗಳು ನಮಗೆ ಗೊತ್ತಾಗುವ ಮೊದಲೇ ಉಲ್ಬಣಗೊಳ್ಳುತ್ತವೆ. ಈ ಸಮಸ್ಯೆಗಳಿಂದ ದೂರವಾಗಲು ನಾವು ಮಾತ್ರೆ, ಔಷಧಿಯ ಮೊರೆ ಹೋಗುತ್ತೇವೆ. ಹೀಗೆ ನಿರಂತರವಾಗಿ ಆ್ಯಂಟಾಸಿಡ್​ಗಳನ್ನು ಸೇವಿಸುವುದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಆಯುರ್ವೇದ ತಜ್ಞ ಡಾ. ಡಿಕ್ಸಾ ಭಾವಸರ್ ಹೇಳಿದ್ದಾರೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಮ್ಲೀಯತೆ ಮತ್ತು ಅಜೀರ್ಣವನ್ನು ತಡೆಯಲು ಸಹಾಯಕವಾದ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.

“ರೋಗಕ್ಕೆ ಚಿಕಿತ್ಸೆ ನೀಡುವ ಮೊದಲ ಹೆಜ್ಜೆಯೆಂದರೆ ಆ ರೋಗ ಬಾರದಂತೆ ತಡೆಗಟ್ಟುವುದು. ‘ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ’ ಎಂಬ ಗಾದೆಯಂತೆ ನಾವು ನಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎಂದು ಅವರು ಹೇಳಿದ್ದಾರೆ.

ಡಾ. ಭಾವಸರ್ ಶಿಫಾರಸು ಮಾಡಿದ ಆಯುರ್ವೇದ ಪರಿಹಾರಗಳು ಇಲ್ಲಿವೆ. – ನಿಮ್ಮ ಊಟದಲ್ಲಿ ಅತಿಯಾದ ಮಸಾಲೆ, ಹುಳಿ, ಉಪ್ಪು, ಫ್ರಿಜ್​ನಲ್ಲಿ ಬಹುಕಾಲ ಇಟ್ಟ, ಕರಿದ ಆಹಾರ ಮತ್ತು ಫಾಸ್ಟ್​ ಫುಡ್​ ಅನ್ನು ಸೇವಿಸುವುದನ್ನು ಕಡಿಮೆ ಮಾಡಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚು ಸೇವಿಸಿ.

– ಊಟದ ಸಮಯದಲ್ಲಿ ಅತಿಯಾಗಿ ತಿನ್ನಬೇಡಿ. ನೀವೇ ಸಣ್ಣ ಭಾಗಗಳನ್ನಾಗಿ ಮಾಡಿಕೊಂಡು ಆಗಾಗ ಆಹಾರ ಸೇವಿಸಿ. ಹುಳಿ ಹಣ್ಣುಗಳಿಂದ ದೂರವಿರಲು ಪ್ರಯತ್ನಿಸಿ.

– ಹೆಚ್ಚು ಗಂಟೆಗಳ ಕಾಲ ಹಸಿವಿನಿಂದ ಇದ್ದರೆ ಆ್ಯಸಿಡಿಟಿ ಉಂಟಾಗುತ್ತದೆ. ಡಯಟ್ ಹೆಸರಿನಲ್ಲಿ ಊಟವನ್ನು ಬಿಟ್ಟುಬಿಡಬೇಡಿ. ಅನಿಯಮಿತ ಆಹಾರ ಸೇವನೆಯನ್ನು ತಪ್ಪಿಸಿ ಮತ್ತು ಬೇಗನೆ ಊಟ ಮಾಡಲು ಪ್ರಯತ್ನಿಸಿ.

– ಹೆಚ್ಚು ಪ್ರಮಾಣದ ಬೆಳ್ಳುಳ್ಳಿ, ಉಪ್ಪು, ಎಣ್ಣೆ, ಮೆಣಸಿನಕಾಯಿ ಇತ್ಯಾದಿಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ಮಾಂಸಾಹಾರವನ್ನೂ ತ್ಯಜಿಸುವುದು ಉತ್ತಮ.

– ಆಹಾರ ಸೇವಿಸಿದ ತಕ್ಷಣ ಮಲಗುವುದನ್ನು ತಪ್ಪಿಸಿ. ತಿಂದ ಆಹಾರ ಸ್ವಲ್ಪ ಜೀರ್ಣವಾಗಲು ಅವಕಾಶ ನೀಡಿ.

– ಧೂಮಪಾನ, ಮದ್ಯಪಾನ, ಚಹಾ, ಕಾಫಿ ಮತ್ತು ಆಸ್ಪಿರಿನ್ ಮಾದರಿಯ ಔಷಧಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ.

– ಒತ್ತಡದಿಂದ ಸದಾ ದೂರವಿರಿ.

ಇದರ ಜೊತೆಗೆ ಅಜೀರ್ಣ ಮತ್ತು ಆಮ್ಲೀಯತೆಯನ್ನು ತಡೆಗಟ್ಟಲು ಕೆಲವು ಆಯುರ್ವೇದ ಆಹಾರ ಪದ್ಧತಿಗಳನ್ನು ಸಹ ಡಾ. ಭಾವ್‌ಸರ್ ಸೂಚಿಸಿದ್ದಾರೆ. ಅವುಗಳೆಂದರೆ…

– ದಿನವೂ ಕೊತ್ತಂಬರಿ ನೀರು (ಕಷಾಯ) ಸೇವಿಸಿ. – ಊಟದ ನಂತರ ಅರ್ಧ ಚಮಚದಷ್ಟು ಸೋಂಪಿನ ಕಾಳುಗಳನ್ನು ಅಗಿಯಿರಿ. – ಬೆಳಿಗ್ಗೆ ಮೊದಲು ತೆಂಗಿನ ನೀರು (ಎಳನೀರು) ಕುಡಿಯಿರಿ. – ಮಧ್ಯಾಹ್ನ ಸಬ್ಬಸಿಗೆ ಸೊಪ್ಪಿನ ಜ್ಯೂಸ್ ಕುಡಿಯಿರಿ. ಇದಕ್ಕೆ ಸಿಹಿಗಾಗಿ ನೀವು ಕಲ್ಲು ಸಕ್ಕರೆಯನ್ನು ಸೇರಿಸಬಹುದು. – ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. – ಮಲಗುವ ವೇಳೆಗೆ 1 ಚಮಚ ಹಸುವಿನ ತುಪ್ಪದೊಂದಿಗೆ ಉಗುರುಬೆಚ್ಚಗಿನ ಹಾಲನ್ನು ಸೇವಿಸಿ.

(ಸೂಚನೆ: ಈ ಸಲಹೆಗಳು ಡಾ. ಡಾ. ಡಿಕ್ಸಾ ಭಾವಸರ್ ಅವರ ಶಿಫಾರಸಾಗಿದ್ದು, ನಿಮ್ಮ ವೈದ್ಯರ ಬಳಿ ಸಲಹೆ ಪಡೆದು ಇವನ್ನು ಅನುಸರಿಸಿ)

ಇದನ್ನೂ ಓದಿ: Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!

Health Tips: ನೀವು ಕಾಫಿ, ಜ್ಯೂಸ್​ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!