AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!

ಕಣ್ಣಿಗೆ ಕಾಣುವ ಸಕ್ಕರೆಯನ್ನು ಬಿಟ್ಟರೆ ಸಾಕೆಂದು ಭಾವಿಸುತ್ತಿದ್ದೀರಾ? ನೀವು ಪ್ರತಿದಿನ ಸೇವಿಸುವ ಪ್ಯಾಕೇಜ್ ಆಹಾರ ಮತ್ತು ಪಾನೀಯಗಳಲ್ಲಿ ಅಡಗಿರುವ ಹಿಡನ್ ಶುಗರ್ ತೂಕ ಹೆಚ್ಚಳ, ಮಧುಮೇಹ ಹಾಗೂ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ಆಹಾರದಲ್ಲಿರುವ ಹೆಚ್ಚುವರಿ ಸಕ್ಕರೆಯನ್ನು ಹೇಗೆ ಗುರುತಿಸಬೇಕು, ಯಾವ ಆಹಾರಗಳಲ್ಲಿ ಅದು ಹೆಚ್ಚಿರುತ್ತದೆ ಮತ್ತು ಅದನ್ನು ತಪ್ಪಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಡಾ. ಚಿತ್ರಾ ಎಸ್. ನೀಡಿರುವ ಮಾಹಿತಿ ಇಲ್ಲಿದೆ.

ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!
Hidden Sugar In Everyday FoodsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 22, 2026 | 8:13 PM

Share

ಮುಖ್ಯಾಂಶಗಳು

  • ಪ್ರತಿದಿನ ಸೇವಿಸುವ ಆಹಾರದಲ್ಲಿರುವ ಹಿಡನ್ ಶುಗರ್
  • ಆಹಾರ ಲೇಬಲ್ ಓದದಿದ್ದರೆ ಹೆಚ್ಚಾಗಬಹುದು ಶುಗರ್! ತಜ್ಞರು ಹೇಳಿದ ಪ್ರಮುಖ ಮಾಹಿತಿ ಇಲ್ಲಿದೆ
  • ಗೊತ್ತಿಲ್ಲದೆಯೇ ಸಕ್ಕರೆ ಸೇವನೆ ಮಾಡುವುದನ್ನು ತಡೆಯಲು ಸಲಹೆಗಳು

ಇತ್ತೀಚಿನ ದಿನಗಳಲ್ಲಿ ಜನ ಶುಗರ್ ತಿನ್ನುವ ಪ್ರಮಾಣವನ್ನು ಬಹಳ ಕಡಿಮೆ ಮಾಡುತ್ತಿದ್ದಾರೆ. ಆದರೆ ನೀವು ಕಣ್ಣಿಗೆ ಕಾಣುವ ಸಕ್ಕರೆಯಿಂದ ದೂರವಿರಬಹುದು ಆದರೆ ಕಣ್ಣಿಗೆ ಕಾಣದ ಸಕ್ಕರೆ ಹೊಟ್ಟೆ ಸೇರುವುದರ ಬಗ್ಗೆ ಯೋಚಿಸಿದ್ದೀರಾ… ಸಾಮಾನ್ಯವಾಗಿ ಸಿಹಿತಿಂಡಿ, ಕ್ಯಾಂಡಿಗಳು ಮತ್ತು ತಂಪು ಪಾನೀಯಗಳನ್ನು ಪ್ರತಿದಿನ ಗಮನಿಸದೆ ಸಾಕಷ್ಟು ಪ್ರಮಾಣದ ಸೇವನೆ ಮಾಡುತ್ತಾರೆ ಇದರಲ್ಲಿರುವ ಹಿಡನ್ ಶುಗರ್ ಅರಿವಿಲ್ಲದಂತೆ ದೇಹಕ್ಕೆ ಪ್ರವೇಶ ಮಾಡುತ್ತದೆ. ಈ ರೀತಿ ಅರಿವಿಲ್ಲದಂತೆ ದಿನನಿತ್ಯ ಸೇವಿಸುವ ಆಹಾರ ಮತ್ತು ಪಾನೀಯಗಳಲ್ಲಿರುವ ಸಕ್ಕರೆ ಪ್ರಮಾಣ ಸಮತೋಲನಯುತ ಆಹಾರ ಪದ್ಧತಿಗೆ ಬ್ರೇಕ್ ಹಾಕುತ್ತದೆ. ಇದರಿಂದ ಶಿಫಾರಸು ಮಾಡಲಾದ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಎಂಡೋಕ್ರಿನಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಸಲಹೆಗಾರ್ತಿ ಡಾ. ಚಿತ್ರಾ ಎಸ್. ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಆಹಾರದಲ್ಲಿನ ಹಿಡನ್ ಶುಗರ್ ಗುರುತಿಸುವುದನ್ನು ಮತ್ತು ಅದರಿಂದ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಹಿಡನ್ ಶುಗರ್

ಪ್ಯಾಕೇಜ್ ಮಾಡಿದ ಮತ್ತು ಸಂಸ್ಕರಿತ ಆಹಾರಗಳಲ್ಲಿ ರುಚಿ ಹೆಚ್ಚಿಸಲು, ವಿನ್ಯಾಸವನ್ನು ಸುಧಾರಿಸಲು ಅಥವಾ ಉತ್ಪನ್ನ ಶೇಖರಣೆ ಮಾಡುವ ಅವಧಿಯನ್ನು ವಿಸ್ತರಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಬ್ರೇಕ್‌ಫಾಸ್ಟ್ ಸೀರಿಯಲ್ಸ್ (ಗೋಧಿ, ಜೋಳ, ಓಟ್ಸ್ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ತಯಾರಿಸಿದ ಸಿದ್ಧ ಆಹಾರಗಳು), ಫ್ಲೇವರ್ ಯೋಗರ್ಟ್‌ಗಳು, ಗ್ರಾನೋಲಾ ಬಾರ್‌ಗಳು, ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು, ಸ್ಪೋರ್ಟ್ಸ್ ಡ್ರಿಂಕ್‌ಗಳು ಮತ್ತು ತಕ್ಷಣ ಸೇವಿಸಬಹುದಾದ ತಿಂಡಿಗಳು ಇದಕ್ಕೆ ಕೆಲವು ಸಾಮಾನ್ಯ ಉದಾಹರಣೆಗಳಾಗಿವೆ. ಬ್ರೆಡ್, ಸಲಾಡ್ ಡ್ರೆಸ್ಸಿಂಗ್‌ಗಳು, ಪಾಸ್ತಾ ಸಾಸ್‌ಗಳು, ಕೆಚಪ್ ಮತ್ತು ಸೂಪ್‌ಗಳಲ್ಲಿಯೂ ಸಹ ಹೆಚ್ಚುವರಿ ಸಕ್ಕರೆ ಇರಬಹುದು.

ಸಕ್ಕರೆಯ ಹಲವು ಹೆಸರುಗಳನ್ನು ತಿಳಿದುಕೊಳ್ಳಿ:

ಹಿಡನ್ ಶುಗರ್ ಗಮನಕ್ಕೆ ಬಾರದಿರುವ ಪ್ರಮುಖ ಕಾರಣವೆಂದರೆ ಅವು ಆಹಾರ ಪದಾರ್ಥಗಳ ಪಟ್ಟಿಯಲ್ಲಿ ವಿವಿಧ ಹೆಸರುಗಳ ಅಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಸುಕ್ರೋಸ್, ಗ್ಲೂಕೋಸ್, ಫ್ರಕ್ಟೋಸ್, ಡೆಕ್ಸ್‌ಟ್ರೋಸ್, ಮಾಲ್ಟೋಸ್, ಜೇನುತುಪ್ಪ, ಮೊಲಾಸಿಸ್ ಮತ್ತು ಕಾರ್ನ್ ಸಿರಪ್ ಇವೆಲ್ಲವೂ ಸಕ್ಕರೆಯ ವಿವಿಧ ರೂಪಗಳಾಗಿವೆ. ವಿಶೇಷವಾಗಿ ಪರಿಚಯವಿಲ್ಲದ ಹೆಸರುಗಳಾಗಿದ್ದರೆ, ಗ್ರಾಹಕರು ಈ ಅಂಶಗಳನ್ನು ಕಡೆಗಣಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನೇರಳೆ ಹಣ್ಣು ತಿಂದರೆ ನಿಜವಾಗಿಯೂ ಡಯಾಬಿಟಿಸ್ ನಿಯಂತ್ರಿಸಬಹುದೇ?

ಆರೋಗ್ಯದ ಮೇಲೆ ಬೀರುವ ಪರಿಣಾಮ:

ಅತಿಯಾದ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವುದು ತೂಕ ಹೆಚ್ಚಳ, ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಮತ್ತು ಹಲ್ಲುಗಳ ಸಮಸ್ಯೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನವಿಡೀ ಸೇವಿಸುವ ವಿವಿಧ ಆಹಾರಗಳಲ್ಲಿ ಈ ಹಿಡನ್ ಶುಗರ್ ಇರುವುದರಿಂದ, ತಿಳಿಯದೆಯೇ ಸೇವನೆ ಮಾಡುವ ಪ್ರಮಾಣ ಹೆಚ್ಚಾಗಬಹುದು.

ಗೊತ್ತಿಲ್ಲದೆಯೇ ಸಕ್ಕರೆ ಸೇವನೆ ಮಾಡುವುದನ್ನು ತಡೆಯಲು ಸಲಹೆಗಳು:

ಹಿಡನ್ ಶುಗರ್ ಸೇವನೆಯನ್ನು ಕಡಿಮೆ ಮಾಡಲು, ಖರೀದಿ ಮಾಡುವ ಲೇಬಲ್‌ಗಳು ಮತ್ತು ಪದಾರ್ಥಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಓದುವುದು ಬಹಳ ಮುಖ್ಯ. ಕಡಿಮೆ ಸಂಸ್ಕರಿತ ಆಹಾರಗಳನ್ನು ಆಯ್ಕೆ ಮಾಡುವುದು, ಸಕ್ಕರೆ ಸೇರಿಸದ ಹಾಲಿನ ಉತ್ಪನ್ನಗಳನ್ನು ಬಳಸುವುದು, ಸಕ್ಕರೆ ಹೆಚ್ಚಿರುವ ಪಾನೀಯಗಳ ಬದಲಿಗೆ ನೀರನ್ನು ಕುಡಿಯುವುದು ಮತ್ತು ಸಿಹಿ ತಿಂಡಿಗಳ ಬದಲಿಗೆ ಸಂಪೂರ್ಣ ಹಣ್ಣುಗಳನ್ನು ಸೇವಿಸುವುದು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿಡನ್ ಶುಗರ್ ಆಧುನಿಕ ಆಹಾರ ಪದ್ಧತಿಯ ಸಾಮಾನ್ಯ ಭಾಗವಾಗಿದ್ದರೂ, ವ್ಯಕ್ತಿಗಳಿಗೆ ಅವುಗಳ ಬಗ್ಗೆ ಹೆಚ್ಚಿನ ಅರಿವು ಇದ್ದಲ್ಲಿ ಉತ್ತಮ ಆಹಾರಗಳನ್ನು ಆಯ್ಕೆ ಮಾಡಲು ನೆರವಾಗುತ್ತದೆ. ಸಕ್ಕರೆ ಯಾವ ಆಹಾರಗಳಲ್ಲಿ ಇರಬಹುದು ಎಂಬುದನ್ನು ತಿಳಿದುಕೊಂಡು, ಆಹಾರ ಲೇಬಲ್‌ಗಳಿಗೆ ಹೆಚ್ಚಿನ ಗಮನ ನೀಡುವುದರಿಂದ, ಗ್ರಾಹಕರು ಸಕ್ಕರೆ ಸೇವನೆಯನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us