AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಏನಾಗುತ್ತೆ? ವಿಜ್ಞಾನ ಹೇಳುವ ಆರೋಗ್ಯ ರಹಸ್ಯಗಳು ಇಲ್ಲಿವೆ!

ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ ಇದು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದೇ? ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಮತ್ತು ಯಾರು ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಸಾಮಾನ್ಯವಾಗಿ ಈ ಒಂದು ಅಭ್ಯಾಸ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಏನಾಗುತ್ತೆ? ವಿಜ್ಞಾನ ಹೇಳುವ ಆರೋಗ್ಯ ರಹಸ್ಯಗಳು ಇಲ್ಲಿವೆ!
Hot Rice With GheeImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 26, 2026 | 6:58 PM

Share

ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ತುಪ್ಪ ಅನ್ನಕ್ಕೆ ರುಚಿ ಮತ್ತು ಪರಿಮಳ ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ತುಪ್ಪವನ್ನು ಆರೋಗ್ಯಕರ ಆಹಾರದ ಒಂದು ಭಾಗವಾಗಿ, ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ವಿಶೇಷವಾಗಿ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ತೂಕ ನಿರ್ವಹಣೆಯ ಸಮಸ್ಯೆ ಇರುವವರು ಪ್ರಮಾಣದ ಬಗ್ಗೆ ಗಮನ ಹರಿಸಬೇಕು. ಹಾಗಾದರೆ ಈ ಒಂದು ಅಭ್ಯಾಸ ಯಾವ ರೀತಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಯಾರು ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅನ್ನದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಜೀರ್ಣವಾದಾಗ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗಬಹುದು. ಅನ್ನದೊಂದಿಗೆ ಕೊಬ್ಬು, ಪ್ರೋಟೀನ್ ಮತ್ತು ನಾರಿನಂಶ ಇರುವ ಆಹಾರ ಸೇವಿಸುವುದರಿಂದ ಊಟದ ನಂತರದ ಗ್ಲೂಕೋಸ್ ಏರಿಕೆಯ ವೇಗದಲ್ಲಿ ಬದಲಾವಣೆ ಉಂಟಾಗಬಹುದು. ಆದರೆ ಅನ್ನಕ್ಕೆ ತುಪ್ಪ ಸೇರಿಸಿದರೆ ಮಧುಮೇಹ ನಿಯಂತ್ರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಧುಮೇಹ ಇರುವವರು ಒಟ್ಟು ಆಹಾರ ಪ್ರಮಾಣ ಮತ್ತು ಕಾರ್ಬೋಹೈಡ್ರೇಟ್ ಸೇವನೆಯತ್ತ ಗಮನ ನೀಡಬೇಕು.

ವಿಟಮಿನ್‌ಗಳ ಪೋಷಣೆಗೆ ಸಹಕಾರಿ

ಸಾಮಾನ್ಯವಾಗಿ ವಿಟಮಿನ್ ಎ, ಡಿ, ಇ ಮತ್ತು ಕೆ ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು. ಆಹಾರದಲ್ಲಿ ಸ್ವಲ್ಪ ಕೊಬ್ಬು ಇರುವುದರಿಂದ ಇವುಗಳ ಪೋಷಣೆಗೆ ಸಹಾಯವಾಗಬಹುದು. ತುಪ್ಪ ಇಂತಹ ಕೊಬ್ಬಿನ ಮೂಲಗಳಲ್ಲಿ ಒಂದಾಗಿದೆ. ಆದರೆ ಈ ವಿಟಮಿನ್‌ಗಳನ್ನು ಪಡೆಯಲು ತುಪ್ಪವನ್ನೇ ಅವಲಂಬಿಸಬೇಕೆಂದಿಲ್ಲ; ವಿವಿಧ ಆರೋಗ್ಯಕರ ಕೊಬ್ಬಿನ ಮೂಲಗಳನ್ನು ಆಹಾರದಲ್ಲಿ ಸೇರಿಸಬಹುದು.

ಇದನ್ನೂ ಓದಿ: ಊಟ ಅಥವಾ ತಿಂಡಿ ಮಾಡಿದ ತಕ್ಷಣ ಸ್ನಾನ ಮಾಡುವ ಅಭ್ಯಾಸವಿದ್ದವರು ಇವಿಷ್ಟು ವಿಷಯಗಳನ್ನು ತಿಳಿದಿರಬೇಕು!

ಜೀರ್ಣಕ್ರಿಯೆಗೆ ತುಪ್ಪ ಹೇಗೆ ಸಹಕಾರಿ?

ತುಪ್ಪದಲ್ಲಿ ಕೊಬ್ಬಿನಾಮ್ಲಗಳು ಸೇರಿದಂತೆ ಹಲವು ಸಂಯುಕ್ತಗಳಿವೆ. ಆಹಾರದಲ್ಲಿನ ಕೊಬ್ಬು ಜೀರ್ಣಕ್ರಿಯೆಯ ಭಾಗವಾಗಿ ಪಿತ್ತರಸ ಮತ್ತು ಜೀರ್ಣಾಂಗದ ಪ್ರಕ್ರಿಯೆಗಳಲ್ಲಿ ಪಾತ್ರವಹಿಸುತ್ತದೆ. ಕೆಲವರಿಗೆ ಅನ್ನದೊಂದಿಗೆ ಸ್ವಲ್ಪ ತುಪ್ಪ ಸೇವಿಸುವುದು ಆರಾಮದಾಯಕವಾಗಬಹುದು. ಆದರೆ ತುಪ್ಪವು ಗ್ಯಾಸ್, ಮಲಬದ್ಧತೆ ಅಥವಾ ಆಸಿಡಿಟಿಯನ್ನು ಗುಣಪಡಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಹೊಟ್ಟೆ ತುಂಬಿದ ಅನುಭವ ನೀಡುತ್ತದೆ:

ಕೊಬ್ಬು ಹೊಂದಿರುವ ಆಹಾರವು ಕೆಲವರಿಗೆ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡಬಹುದು. ಹೀಗಾಗಿ ಅನ್ನದೊಂದಿಗೆ ಅಲ್ಪ ಪ್ರಮಾಣದ ತುಪ್ಪ ಮತ್ತು ತರಕಾರಿ, ಬೇಳೆ ಅಥವಾ ಇತರ ಪ್ರೋಟೀನ್‌ಯುಕ್ತ ಆಹಾರ ಸೇರಿಸುವುದು ಹೆಚ್ಚು ಸಮತೋಲಿತ ಊಟವಾಗಬಹುದು.

ಎಷ್ಟು ತುಪ್ಪ ಸೇವಿಸಬೇಕು?

ತುಪ್ಪದಲ್ಲಿ ಕ್ಯಾಲೊರಿಗಳು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಅಧಿಕವಾಗಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಲ್ಲ. ಪ್ರತಿದಿನ 1–2 ಚಮಚ ತುಪ್ಪ ಎಲ್ಲರಿಗೂ ಅಗತ್ಯ ಎಂಬ ನಿರ್ದಿಷ್ಟ ನಿಯಮವಿಲ್ಲ. ವ್ಯಕ್ತಿಯ ಒಟ್ಟು ಆಹಾರ, ಕ್ಯಾಲೊರಿ ಅಗತ್ಯ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪ್ರಮಾಣ ಬದಲಾಗುತ್ತದೆ.

ಯಾರು ಎಚ್ಚರ ವಹಿಸಬೇಕು?

ಅಧಿಕ ಕೊಲೆಸ್ಟ್ರಾಲ್, ಹೃದಯ ಸಂಬಂಧಿತ ಸಮಸ್ಯೆಗಳು ಅಥವಾ ತೂಕ ಹೆಚ್ಚಳದ ಸಮಸ್ಯೆ ಇರುವವರು ತುಪ್ಪದ ಪ್ರಮಾಣದ ಬಗ್ಗೆ ವಿಶೇಷ ಗಮನ ನೀಡಬೇಕು. ಮಧುಮೇಹ ಇರುವವರು ಅನ್ನದ ಪ್ರಮಾಣ, ತರಕಾರಿ, ಬೇಳೆ ಮತ್ತು ಇತರ ಪೋಷಕಾಂಶಗಳ ಸಮತೋಲನದ ಜೊತೆಗೆ ತುಪ್ಪವನ್ನು ಪರಿಗಣಿಸಬೇಕು. ಹೀಗಾಗಿ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಸೇರಿಸುವುದು ಭಾರತೀಯ ಆಹಾರ ಪದ್ಧತಿಯ ಒಂದು ರುಚಿಕರ ಭಾಗವಾಗಬಹುದು. ಆದರೆ ಇದನ್ನು ಯಾವುದೇ ಕಾಯಿಲೆಗೆ ಚಿಕಿತ್ಸೆ ಅಥವಾ ಸೂಪರ್‌ಫುಡ್ ಎಂದು ಪರಿಗಣಿಸುವ ಬದಲು, ಸಮತೋಲಿತ ಆಹಾರದ ಒಂದು ಭಾಗವಾಗಿ ಮಿತವಾಗಿ ಸೇವಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More