
ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಖರೀದಿಸುವಾಗ ಅವುಗಳ ಬಣ್ಣ, ಹೊಳಪು ಮತ್ತು ತಾಜಾತನವನ್ನು ಗಮನಿಸುತ್ತೇವೆ. ಹೊರಗೆ ಯಾವುದೇ ಕಲೆ ಅಥವಾ ಹಾನಿ ಕಾಣಿಸದ ಹಣ್ಣುಗಳನ್ನು ಮನೆಗೆ ತರುತ್ತೇವೆ. ಆದರೆ ಹಣ್ಣನ್ನು ಕತ್ತರಿಸಿದಾಗ ಒಳಗೆ ಹುಳುಗಳು ಅಥವಾ ಅವುಗಳ ಲಾರ್ವಾಗಳು ಕಾಣಿಸಿಕೊಂಡರೆ ಆಶ್ಚರ್ಯವಾಗುವುದು ಸಹಜ. ಹೊರಗೆ ಯಾವುದೇ ರಂಧ್ರವಿಲ್ಲದಿದ್ದರೂ ಹಣ್ಣಿನ ಒಳಗೆ ಹುಳುಗಳು ಹೇಗೆ ಬಂದವು ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದರ ಹಿಂದಿದೆ ಅಚ್ಚರಿಯ ಕಾರಣ. ಹೌದು ಅವುಗಳ ಬಗ್ಗೆ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾಕೆಂದರೆ ನೊಣಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಜಾತಿಯ ನೊಣಗಳು ಹಣ್ಣು ಬೆಳೆಯುತ್ತಿರುವ ಹಂತದಲ್ಲಿಯೇ ಅದರ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಇವುಗಳಿಗೆ ಮೊಟ್ಟೆ ಇಡಲು ಸಹಾಯ ಮಾಡುವ ವಿಶೇಷ ಅಂಗವಿರುತ್ತದೆ. ಅದರ ಮೂಲಕ ಹಣ್ಣಿನ ಮೇಲ್ಮೈಯನ್ನು ಚುಚ್ಚಿ ಒಳಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಈ ಪ್ರಕ್ರಿಯೆಯಲ್ಲಿ ಉಂಟಾಗುವ ರಂಧ್ರಗಳು ಬಹಳ ಚಿಕ್ಕದಾಗಿರುವುದರಿಂದ ಸಾಮಾನ್ಯವಾಗಿ ಬರಿಗಣ್ಣಿಗೆ ಸುಲಭವಾಗಿ ಕಾಣಿಸುವುದಿಲ್ಲ. ಹೀಗಾಗಿ ಹಣ್ಣಿನ ಹೊರಭಾಗ ನೋಡಿದಾಗ ಯಾವುದೇ ಹಾನಿಯಾಗದಂತೆ ಕಾಣಬಹುದು.
ನೊಣಗಳು ಇಟ್ಟ ಮೊಟ್ಟೆಗಳು ಅನುಕೂಲಕರ ಪರಿಸ್ಥಿತಿಯಲ್ಲಿ ಕೆಲವು ದಿನಗಳ ನಂತರ ಮರಿಗಳಾಗಿ ಹೊರಬರುತ್ತವೆ. ಈ ಮರಿಗಳನ್ನು ಲಾರ್ವಾಗಳು ಎಂದು ಕರೆಯಲಾಗುತ್ತದೆ. ಇವು ಹಣ್ಣಿನ ಒಳಗಿನ ತಿರುಳನ್ನು ಆಹಾರವಾಗಿ ಸೇವಿಸುತ್ತಾ ಬೆಳೆಯುತ್ತವೆ. ಹಣ್ಣಿನ ಒಳಭಾಗದಲ್ಲಿ ಆಹಾರ ಮತ್ತು ತೇವಾಂಶ ದೊರೆಯುವುದರಿಂದ ಲಾರ್ವಾಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ. ಈ ಕಾರಣದಿಂದ ಹೊರಗಿನಿಂದ ಯಾವುದೇ ಕೀಟ ಕಾಣಿಸದಿದ್ದರೂ ಹಣ್ಣಿನ ಒಳಗೆ ಅವು ಬೆಳೆಯುತ್ತಿರಬಹುದು.
ಹಣ್ಣು ಬೆಳೆಯುವ ಸಮಯದಲ್ಲಿ ಕೀಟ ಮೊಟ್ಟೆ ಇಟ್ಟ ಸ್ಥಳದ ಸುತ್ತಲಿನ ಅಂಗಾಂಶಗಳು ಸಹ ಬೆಳೆಯುತ್ತವೆ. ಇದರಿಂದ ಆರಂಭದಲ್ಲಿ ಉಂಟಾದ ಸಣ್ಣ ರಂಧ್ರ ಹೊರಗಿನಿಂದ ಸ್ಪಷ್ಟವಾಗಿ ಗುರುತಿಸಲಾಗದಿರಬಹುದು. ಆದರೆ ಎಲ್ಲ ಹಣ್ಣುಗಳಲ್ಲಿಯೂ ರಂಧ್ರಗಳು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತವೆ ಎಂದೇನಿಲ್ಲ.
ಒಟ್ಟಿನಲ್ಲಿ, ಹಣ್ಣಿನ ಒಳಗೆ ಹುಳುಗಳು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಕೆಲವು ಕೀಟಗಳು ಹಣ್ಣು ಬೆಳೆಯುವ ಹಂತದಲ್ಲಿಯೇ ಮೊಟ್ಟೆ ಇಡುವುದಾಗಿದೆ. ಆದ್ದರಿಂದ ಹೊರನೋಟಕ್ಕೆ ಚೆನ್ನಾಗಿರುವ ಪ್ರತಿಯೊಂದು ಹಣ್ಣು ಸಂಪೂರ್ಣವಾಗಿ ಕೀಟಗಳಿಂದ ಮುಕ್ತವಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ