
ಊಟ ಮಾಡಿದ ತಕ್ಷಣ ಶೌಚಾಲಯಕ್ಕೆ ಹೋಗಬೇಕು ಅಂತ ಅನಿಸುತ್ತಾ? ಹೊಟ್ಟೆ ತುಂಬಾ ತಿಂದಾಗ ಒಂದು ಸಲ ಟಾಯ್ಲೆಟ್ ಗೆ ಹೋಗಿ ಬರೋಣ ಅನ್ನಿಸುತ್ತಾ? ಈ ರೀತಿ ಪದೇ ಪದೇ ಮಲವಿಸರ್ಜನೆ ಮಾಡಬೇಕು ಅಂತಾ ಯಾಕೆ ಅನಿಸುತ್ತೆ? ಎಂದಾದರೂ ಯೋಚಿಸಿದ್ದೀರಾ? ಚಿಂತಿಸಬೇಡಿ.. ಈ ರೀತಿ ಸಮಸ್ಯೆ ನಿಮಗೆ ಮಾತ್ರವಲ್ಲ ನಮ್ಮ ಮಧ್ಯೆ ಇರುವ ಅನೇಕರದ್ದು ಇದೆ ಸಮಸ್ಯೆ. ಕೆಲವರು ಇದನ್ನು ಹಗುರವಾಗಿ ತೆಗದುಕೊಳ್ಳುತ್ತಾರೆ. ಊಟ ಮಾಡಿದ ತಕ್ಷಣ ಮಲವಿಸರ್ಜನೆ (Poop) ಮಾಡುವ ಹಂಬಲ ಇರುವುದನ್ನು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ (Gastrocolic reflex) ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದ ನೈಸರ್ಗಿಕ ಜೀರ್ಣಕ್ರಿಯೆಯ (Digestion) ಪ್ರಕ್ರಿಯೆಯ ಭಾಗವಾಗಿದೆ. ಹಾರ್ವರ್ಡ್ ವೈದ್ಯ ಸೌರಭ್ ಸೇಥಿ ಪ್ರಕಾರ, ಈ ರೀತಿ ಆಗುವುದಕ್ಕೆ ಹಲವು ರೀತಿಯ ಕಾರಣಗಳಿದ್ದು ಇವುಗಳನ್ನು ತಡೆಯುವುದಕ್ಕೂ ಅವರು ಸಲಹೆಗಳನ್ನು ನೀಡಿದ್ದಾರೆ. ಇದರ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ, ನಾವು ಯಾವುದೇ ರೀತಿಯ ಆಹಾರ ಸೇವನೆ ಮಾಡಿದಾಗ, ಹೊಟ್ಟೆಯನ್ನು ತಲುಪುವ ಆಹಾರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಹೊಟ್ಟೆ ತುಂಬಿದಾಗ, ದೇಹವು ದೊಡ್ಡ ಕರುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಈ ಸಂಕೇತಗಳು ದೊಡ್ಡ ಕರುಳನ್ನು ಸಂಕುಚಿತಗೊಳಿಸುತ್ತವೆ. ಈ ಸಂಕೋಚನಗಳ ಪರಿಣಾಮವಾಗಿ, ಹಿಂದಿನಿಂದ ಜೀರ್ಣವಾಗದ ತ್ಯಾಜ್ಯವು ಮುಂದಕ್ಕೆ ಚಲಿಸುತ್ತದೆ. ಒಂದು ರೀತಿಯಲ್ಲಿ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಖಾಲಿ ಮಾಡಲು ಪ್ರೇರೇಪಿಸುತ್ತದೆ. ಇದು ಒಂದು ಕಾರಣವಾದರೆ ಇದರ ಹೊರತಾಗಿ ಇನ್ನೂ ಹಲವು ಕಾರಣಗಳಿವೆ.
ಊಟ ಮಾಡಿದ ತಕ್ಷಣ ಮಲ ವಿಸರ್ಜನೆಯಾಗುವುದು ಸಾಮಾನ್ಯ, ಆದರೆ ಇದರ ಹೊರತಾಗಿ ಕಂಡು ಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅಂದರೆ ಮಲವನ್ನು ಹೊರಹಾಕುವಾಗ ತೀವ್ರ ಹೊಟ್ಟೆ ನೋವು ಕಂಡು ಬಂದರೆ, ಆಗಾಗ ಅತಿಸಾರ ಅಥವಾ ಮಲಬದ್ಧತೆಯ ಸಮಸ್ಯೆ ಕಂಡು ಬರುತ್ತಿದ್ದರೆ, ಮಲದಲ್ಲಿ ರಕ್ತ ಬರುತ್ತಿದ್ದರೆ ಅಥವಾ ಮಲ ಕಪ್ಪಾಗಿ ಹೋಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?
ಒಮ್ಮೆಗೇ ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ. ಈ ರೀತಿ ಮಾಡುವುದರಿಂದ ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ. ಹಾಗಾಗಿ ದಿನನಿತ್ಯ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಅನೇಕ ಬಾರಿ ಸೇವನೆ ಮಾಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ನಿಮಗೆ ಗ್ಯಾಸ್ ಅಥವಾ ಆಮ್ಲೀಯತೆಯ ಸಮಸ್ಯೆಗಳು ಇರುವುದಿಲ್ಲ. ಇದರ ಜೊತೆಗೆ, ನಿಮ್ಮ ಆಹಾರದಲ್ಲಿ ಕರಗುವ ಫೈಬರ್ ಹೊಂದಿರುವ ಆಹಾರಗಳನ್ನು ಸೇರಿಸಿ. ಇದು ನೀರನ್ನು ಹೀರಿಕೊಂಡು ಜೆಲ್ ತರಹದ ವಸ್ತುವನ್ನು ರೂಪಿಸುತ್ತದೆ. ಇದು ಮಲವನ್ನು ಮೃದುಗೊಳಿಸುತ್ತದೆ ಮತ್ತು ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಓಟ್ಸ್, ಸೇಬು, ಕ್ಯಾರೆಟ್ ಮತ್ತು ದ್ವಿದಳ ಧಾನ್ಯಗಳು ಕರಗುವ ಫೈಬರ್‌ನ ಉತ್ತಮ ಮೂಲಗಳಾಗಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಹೆಚ್ಚಿಸಬಹುದಾದ ಆಹಾರಗಳ ಸೇವನೆಯನ್ನು ತಪ್ಪಿಸಿ. ಅಂದರೆ ಮಸಾಲೆಯುಕ್ತ ಆಹಾರಗಳು, ಡೈರಿ ಉತ್ಪನ್ನಗಳು, ಕೆಫೀನ್ ಮತ್ತು ಕೃತಕ ಸಕ್ಕರೆಗಳಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 pm, Thu, 26 June 25