ತಜ್ಞರೇ ಹೇಳುವಂತೆ ಆರೋಗ್ಯವಂತರಾಗಿರಲು ದಿನಕ್ಕಿಷ್ಟು ಗಂಟೆಗಳ ಕಾಲ ವಾಕಿಂಗ್ ಮಾಡಲೇಬೇಕಂತೆ !
ಇತ್ತೀಚೆಗಿನ ದಿನಗಳಲ್ಲಿ ಫಿಟ್ ಹಾಗೂ ಆರೋಗ್ಯಕರವಾಗಿರಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಸದಾ ಫಿಟ್ ಆಗಿರಲು ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಗಂಟೆಗಳ ಕಾಲ ನಡಿಗೆ ಮಾಡಬೇಕು ಎನ್ನುವ ಪ್ರಶ್ನೆಯು ಮೂಡಬಹುದು. ಆರೋಗ್ಯಕರ ಜೀವನವನ್ನು ನಡೆಸಲು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಂತಹ ಆರೋಗ್ಯ ಅಧಿಕಾರಿಗಳು ತಮ್ಮ ಮಾರ್ಗಸೂಚಿಗಳಲ್ಲಿ ಕೆಲವು ಸಲಹೆಗಳನ್ನು ತಿಳಿಸಿದ್ದಾರೆ. ಹಾಗಾದ್ರೆ ಈ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಬಹುತೇಕರು ಫಿಟ್ ಹಾಗೂ ಆರೋಗ್ಯವಾಗಿರಲು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ನಿಯಮಿತವಾದ ದೈಹಿಕ ಚಟುವಟಿಕೆ ಹಾಗೂ ಪೋಷಕಾಂಶಯುಕ್ತ ಆಹಾರ ಸೇವನೆಯತ್ತ ಗಮನ ಹರಿಸುವವರೇ ಹೆಚ್ಚು. ಆದರೆ ಒಬ್ಬ ವ್ಯಕ್ತಿಯು ಎಷ್ಟು ಗಂಟೆಗಳ ಕಾಲ ವಾಕಿಂಗ್ ಮಾಡಬೇಕೆನ್ನುವುದು ಆ ವ್ಯಕ್ತಿಯ ಆರೋಗ್ಯ, ಫಿಟ್‌ನೆಸ್ ಮಟ್ಟ ಮತ್ತು ಜೀವನಶೈಲಿಯನ್ನು ಆಧಾರಿಸಿದೆ. ಆದರೆ ವಾರದ ಹೆಚ್ಚಿನ ದಿನಗಳಲ್ಲಿ ಕನಿಷ್ಠ 30 ನಿಮಿಷಗಳ ಮಧ್ಯಮ-ತೀವ್ರತೆಯ ನಡಿಗೆಯನ್ನು ಮಾಡುವುದು ಒಳ್ಳೆಯದಂತೆ ಎನ್ನಲಾಗಿದೆ.
ದಿನಕ್ಕೆ ಎಷ್ಟು ಗಂಟೆಗಳ ವಾಕ್ ಅಗತ್ಯ
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಆರೋಗ್ಯ ಅಧಿಕಾರಿಗಳು ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ, ‘ವಾರಕ್ಕೆ ಸುಮಾರು 150 ನಿಮಿಷಗಳವರೆಗೆ ವಾಕ್ ಮಾಡಬೇಕು. ಮೊದಲಿಗೆ ವಾಕಿಂಗ್ ಆರಂಭಿಸುವಾಗ ಕಡಿಮೆ ಸ್ಟೆಪ್ಸ್‌ಗಳಿಂದ ಆರಂಭಿಸುತ್ತ, ಆ ಬಳಿಕ ಅವಧಿಯನ್ನು ಹೆಚ್ಚಿಸುತ್ತ ಹೋಗುವುದು ಒಳ್ಳೆಯದು’ ಎಂದಿದ್ದಾರೆ.
‘ಈಗಾಗಲೇ 45 ರಿಂದ 60 ನಿಮಿಷಗಳಿಗಿಂತ ಹೆಚ್ಚು ವಾಕಿಂಗ್ ಮಾಡುತ್ತಿದ್ದಂತೆ ಅಂತವರು ಆರೋಗ್ಯಕರವಾದ ಪ್ರಯೋಜನಗಳನ್ನು ಪಡೆಯಬಹುದಂತೆ. ಒಂದು ವಾರಕ್ಕೆ ಕನಿಷ್ಠ 300 ನಿಮಿಷಗಳು ಎಂದರೆ 5 ಗಂಟೆಗಳು ಸಕ್ರಿಯವಾಗಿದ್ದರೆ ಆರೋಗ್ಯ ಲಾಭಗಳು ಅಧಿಕ. ವಾಕಿಂಗ್ ನಡುವೆ ನಡಿಗೆಯ ವೇಗವನ್ನು ಹೆಚ್ಚು ಮತ್ತು ಕಡಿಮೆ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ.
ವಾಕಿಂಗ್ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು
- ಹೃದಯದ ಆರೋಗ್ಯವನ್ನು ಕಾಪಾಡುತ್ತದೆ : ದಿನಕ್ಕೆ ಇಂತಿಷ್ಟು ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಹೃದಯ ಬಡಿತವನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ರಕ್ತ ಪರಿಚಲನೆಯನ್ನು ಉತ್ತಮ ಗೊಳಿಸುವುದಲ್ಲದೆ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
- ತೂಕ ನಿರ್ವಹಣೆಗೆ ಸಹಕಾರಿ : ನಿಯಮಿತವಾದ ವಾಕಿಂಗ್ ದೇಹದಲ್ಲಿರುವ ಅತಿಯಾದ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ನಿಯಮಿತ ಆಹಾರ ಹಾಗೂ ವಾಕಿಂಗ್ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
- ಸ್ನಾಯುವಿನ ಶಕ್ತಿಯನ್ನು ಬಲಪಡಿಸಲು ಸಹಕಾರಿ : ದಿನನಿತ್ಯ ವಾಕಿಂಗ್ ಮಾಡುವ ಅಭ್ಯಾಸವು ಕಾಲುಗಳ ಸ್ನಾಯುಗಳನ್ನು ಬಲಪಡಿಸಿ, ತ್ರಾಣವನ್ನು ಸುಧಾರಿಸಲು ಸಹಾಯಕವಾಗಿದೆ.
- ಮಾನಸಿಕ ಆರೋಗ್ಯವನ್ನು ವರ್ಧಿಸುತ್ತದೆ : ವಾಕಿಂಗ್ ಮಾಡುವುದರಿಂದ ಎಂಡಾರ್ಫಿನ್‌ಗಳು ಬಿಡುಗಡೆಯಾಗುವುದರಿಂದ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ. ಸಕಾರಾತ್ಮಕ ಮನಸ್ಥಿತಿ ಹಾಗೂ ಅರಿವಿನ ಕಾರ್ಯವನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ಮಕ್ಕಳಿಗೆ ಬಿಸ್ಕೆಟ್ ನೀಡಬಹುದೇ? ಬಿಸ್ಕೆಟ್ ಸೇವನೆಯಿಂದಾಗುವ ಪರಿಣಾಮಗಳೇನು?
ಒಟ್ಟಾರೆ ಆರೋಗ್ಯಕ್ಕೆ ಬರೀ ವಾಕಿಂಗ್ ಸಾಕೇ?
ವಾಕಿಂಗ್ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ದಿನನಿತ್ಯ ವಾಕಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಹೃದಯದ ಆರೋಗ್ಯ, ಸುಧಾರಿತ ಸ್ನಾಯು ಶಕ್ತಿ ವರ್ಧನೆ, ಒತ್ತಡ ನಿವಾರಣೆ ಸೇರಿದಂತೆ ಹತ್ತಾರು ಪ್ರಯೋಜನಗಳಿವೆ. ಆದರೆ ಉತ್ತಮ ಆರೋಗ್ಯಕ್ಕೆ ಕೇವಲ ವಾಕಿಂಗ್ ಸಾಕಾಗುವುದಿಲ್ಲ, ಆರೋಗ್ಯವು ವೈಯಕ್ತಿಕ ಫಿಟ್ನೆಸ್ ಗುರಿಗಳು ಮತ್ತು ಆರೋಗ್ಯ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ತೂಕ ನಷ್ಟ ಅಥವಾ ಸ್ನಾಯುವಿನ ಬೆಳವಣಿಗೆಯನ್ನು ಗುರಿಯಾಗಿಸುವವರಿಗೆ ಸಾಕಷ್ಟು ತೀವ್ರತೆಯನ್ನು ಒದಗಿಸುವುದಿಲ್ಲ. ಹೀಗಾಗಿ ಪ್ರತಿರೋಧ ತರಬೇತಿ, ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ, ಅಥವಾ ನಮ್ಯತೆ ವ್ಯಾಯಾಮಗಳಂತಹ ಹೆಚ್ಚುವರಿ ಚಟುವಟಿಕೆಗಳನ್ನು ಮಾಡುವುದು ವಾಕಿಂಗ್ ಗೆ ಪೂರಕವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ