
ತಾಯಿಯಾಗಬೇಕು ಎಂಬುದು ಅನೇಕ ಮಹಿಳೆಯರ ಜೀವನದ ಮಹತ್ವದ ಕನಸು. ಆದರೆ ಮದುವೆಯಾಗಿ ಹಲವು ವರ್ಷಗಳಾದರೂ ಗರ್ಭಧಾರಣೆಯಾಗದಿರುವುದು ಅಥವಾ ಗರ್ಭಧರಿಸಿದ ಬಳಿಕ ಪದೇಪದೇ ಗರ್ಭಪಾತವಾಗುವುದು ದೈಹಿಕ ಹಾಗೂ ಮಾನಸಿಕವಾಗಿ ನೋವುಂಟುಮಾಡಬಹುದು. ಇಂತಹ ಸಂದರ್ಭದಲ್ಲಿ ಸರಿಯಾದ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಸಂತಾನೋತ್ಪತ್ತಿ ಆರೋಗ್ಯದ ವಿಚಾರದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಮಾನಸಿಕ ಬೆಂಬಲ ಮತ್ತು ವೈಜ್ಞಾನಿಕ ಮಾರ್ಗದರ್ಶನ ಅತ್ಯಗತ್ಯವಾಗಿರುತ್ತದೆ. ಈ ಬಗ್ಗೆ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪವಿತ್ರಾ ಪೈ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಅನಿಯಮಿತ ಆಹಾರ ಪದ್ಧತಿ, ನಿದ್ರೆಯ ಕೊರತೆ, ದೈಹಿಕ ಚಟುವಟಿಕೆಯ ಅಭಾವ, ಧೂಮಪಾನ, ಮದ್ಯಪಾನ ಹಾಗೂ ಅತಿಯಾದ ಕೆಫೀನ್ ಸೇವನೆ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಅಥವಾ ಕಡಿಮೆ ದೇಹತೂಕವೂ ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ಆದರೆ ಗರ್ಭಪಾತಕ್ಕೆ ಪ್ರಮುಖ ಕಾರಣಗಳಲ್ಲಿ ಭ್ರೂಣದ ವರ್ಣತಂತುಗಳ ಅಸಹಜತೆಗಳು, ಹೆಚ್ಚುತ್ತಿರುವ ತಾಯಿಯ ವಯಸ್ಸು, ನಿಯಂತ್ರಣದಲ್ಲಿರದ ಮಧುಮೇಹ, ಥೈರಾಯ್ಡ್ ಸಮಸ್ಯೆಗಳು, ಗರ್ಭಾಶಯದ ದೋಷಗಳು ಮತ್ತು ಕೆಲವು ರೋಗನಿರೋಧಕ ಸಮಸ್ಯೆಗಳು ಸೇರಿವೆ.
“ಯಥಾ ಬ್ರಹ್ಮಾಂಡೇ ತಥಾ ಪಿಂಡಾಂಡೇ” ಪ್ರಕೃತಿಯ ಸೃಷ್ಟಿಯಲ್ಲಿರುವ ತತ್ತ್ವಗಳ ಪ್ರತಿಬಿಂಬವೇ ಮಾನವ ದೇಹ. ಪ್ರಕೃತಿಯಲ್ಲಿ ಸೂಕ್ತ ಕಾಲ, ಫಲವತ್ತಾದ ನೆಲ, ಪೋಷಕಾಂಶಗಳು ಮತ್ತು ಬೀಜಗಳು ಒಂದಾಗಿ ಹೊಸ ಜೀವದ ಸೃಷ್ಟಿಗೆ ಕಾರಣವಾಗುವಂತೆ, ಆಯುರ್ವೇದವು ಗರ್ಭಧಾರಣೆಗೆ ಋತು, ಕ್ಷೇತ್ರ, ಅಂಬು ಮತ್ತು ಬೀಜಗಳ ಸಮರ್ಪಕತೆಯನ್ನು ಮಹತ್ವದ ಅಂಶಗಳೆಂದು ವಿವರಿಸುತ್ತದೆ. ಈ ನಾಲ್ಕು ಅಂಶಗಳ ಪರಿಕಲ್ಪನೆಯು ಗರ್ಭಧಾರಣೆಗೆ ಪೂರ್ವಸಿದ್ಧತೆ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಆರೋಗ್ಯಕರ ಮಾತೃತ್ವದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಗರ್ಭಾಧಾನ ಸಂಸ್ಕಾರವು ಸಂತಾನೋತ್ಪತ್ತಿಗೆ ಮುನ್ನ ದೈಹಿಕ ಆರೋಗ್ಯ, ಮಾನಸಿಕ ಸಿದ್ಧತೆ, ಆಹಾರ, ವಿಹಾರಕ್ಕೆ ಆದ್ಯತೆ ನೀಡುವ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ವಮನ, ವಿರೇಚನ, ಬಸ್ತಿ, ಉತ್ತರಬಸ್ತಿ ಮತ್ತು ನಸ್ಯದಂತಹ ಪಂಚಕರ್ಮ ಆಯುರ್ವೇದ ಚಿಕಿತ್ಸಾ ಪರಂಪರೆಯಲ್ಲಿ ಸ್ಥಾನವಿದೆ.
ವಮನ ಕರ್ಮ: PCOS, ಆರ್ತವಕ್ಷಯ (ಋತುಸ್ರಾವದ ಅಲ್ಪತೆ) ಮತ್ತು ಕಡಿಮೆ AMH ಮಟ್ಟದಂತಹ ಸಂತಾನೋತ್ಪತ್ತಿ ಸಮಸ್ಯೆಗಳಲ್ಲಿ, ರೋಗಿಯ ದೋಷಸ್ಥಿತಿ ಮತ್ತು ಆರೋಗ್ಯವನ್ನು ಆಧರಿಸಿ ವಮನ ಕರ್ಮವನ್ನು ಚಿಕಿತ್ಸಾ ಯೋಜನೆಯಲ್ಲಿ ಪರಿಗಣಿಸಲಾಗುತ್ತದೆ.
ವಿರೇಚನ ಕರ್ಮ: ಸಂತಾನೋತ್ಪತ್ತಿಗೆ ಪೂರ್ವಸಿದ್ಧತೆಯ ಸಂದರ್ಭದಲ್ಲಿ ದೋಷಶಮನ ಮತ್ತು ಗರ್ಭಾಶಯದ ಆರೋಗ್ಯಕ್ಕಾಗಿ ವಿರೇಚನವನ್ನು ಪರಿಗಣಿಸಲಾಗುತ್ತದೆ. ಆಯುರ್ವೇದದ ಬೀಜಶುದ್ಧಿ ಪರಿಕಲ್ಪನೆಯು ಅಂಡಾಣು ಮತ್ತು ವೀರ್ಯಾಣುಗಳ ಗುಣಮಟ್ಟಕ್ಕೆ ಸಂಬಂಧಿಸಿದೆ. ಮರುಕಳಿಸುವ ಗರ್ಭಪಾತದಲ್ಲಿ ಮೂಲ ಕಾರಣ ಪತ್ತೆಹಚ್ಚುವುದು ಅತ್ಯಗತ್ಯ.
ಬಸ್ತಿ ಕರ್ಮ: ವಾತದೋಷ ಶಮನಕ್ಕೆ ಪ್ರಮುಖವಾದ ಬಸ್ತಿ ಕರ್ಮವನ್ನು, ರೋಗಿಯ ಸ್ಥಿತಿಗೆ ಅನುಗುಣವಾಗಿ ಕೆಲವು ಬಂಜೆತನದ ಪ್ರಕರಣಗಳಲ್ಲಿ ಆಯ್ಕೆ ಮಾಡಲಾಗುತ್ತದೆ.
ಉತ್ತರಬಸ್ತಿ: ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಆಯುರ್ವೇದೀಯ ಚಿಕಿತ್ಸಾ ವಿಧಾನವಾಗಿದೆ. ಇದರ ಬಳಕೆಯನ್ನು ತಜ್ಞರು ನಿರ್ಧರಿಸಬೇಕು; ಫ್ಯಾಲೋಪಿಯನ್ ನಾಳಗಳ ಅಡಚಣೆ ನಿವಾರಣೆ ಅಥವಾ ಅಂಡಾಣುವಿನ ಗುಣಮಟ್ಟ ಸುಧಾರಣೆಗೆ ಇದು ಸಹಕಾರಿಯಾಗಿದೆ.
ನಸ್ಯ ಕರ್ಮ: ಔಷಧೀಯ ತೈಲ ಅಥವಾ ಘೃತವನ್ನು ಮೂಗಿನ ಮೂಲಕ ನೀಡುವ ಚಿಕಿತ್ಸೆಯಾದ ನಸ್ಯವನ್ನು ಕೆಲವು ಸಂತಾನೋತ್ಪತ್ತಿ ಸಮಸ್ಯೆ, ಹಾರ್ಮೋನ್ ಅಸಮತೋಲನವನ್ನೂ ಸರಿಪಡಿಸಬಹುದು
ಶತಾವರಿ, ಅಲೋವೆರಾ, ಶತಪುಷ್ಪ, ಫಲಘೃತ ಮತ್ತು ಅಶೋಕದಂತಹ ಔಷಧಗಳನ್ನು ಆಯುರ್ವೇದದಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಗರ್ಭಾಶಯದ ಆರೋಗ್ಯ ಮತ್ತು ಆರ್ತವಚಕ್ರದ ನಿರ್ವಹಣೆಯ ಉದ್ದೇಶದಿಂದ ರೋಗಿಯ ಸ್ಥಿತಿಗನುಗುಣವಾಗಿ ವೈದ್ಯರು ಇವುಗಳನ್ನು ಆಯ್ಕೆ ಮಾಡಬಹುದು.
ಸೂಚನೆ: ಮೇಲಿನ ಚಿಕಿತ್ಸೆಗಳು ಮತ್ತು ಔಷಧಗಳನ್ನು ಸ್ವಯಂ ಬಳಸಬಾರದು. ವಿಶೇಷವಾಗಿ ಗರ್ಭಧಾರಣೆಯ ಸಾಧ್ಯತೆ ಅಥವಾ ದೃಢಪಟ್ಟ ಗರ್ಭಾವಸ್ಥೆಯಲ್ಲಿ, ಯಾವುದೇ ಪಂಚಕರ್ಮ ಅಥವಾ ಗಿಡಮೂಲಿಕೆ ಔಷಧವನ್ನು ಆರಂಭಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ