
ಬೀಟಾ ಕ್ಯಾರೋಟಿನ್ (Beta Carotene) ಮತ್ತು ವಿಟಮಿನ್ ಎ (Vitamin A) ಪೋಷಕಾಂಶಗಳಿಂದ (nutrient) ಸಮೃದ್ಧವಾಗಿರುವ ಕ್ಯಾರೆಟ್ (Carrot) ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ನಾವು ಸೇವಿಸುವ ಆಹಾರದಲ್ಲಿ ನಿಯಮಿತವಾಗಿ ಕ್ಯಾರೆಟ್ ಸೇರಿಸುವ ಮೂಲಕ ಆರೋಗ್ಯ ವೃದ್ಧಿಸಬಹುದು ಎಂದು ಹೇಳ್ತಾರೆ. ಹಾಗಾಗಿ ಈ ಕ್ಯಾರೆಟ್ನ ಆರೋಗ್ಯ ಪ್ರಯೋಜನದ ಬಗ್ಗೆ ಜನರಿಗೆ ಅರಿವು ಮೂಡಿಲು ಪ್ರತಿವರ್ಷ ಏಪ್ರಿಲ್ 4 ರಂದು ವಿಶ್ವ ಕ್ಯಾರೆಟ್ (International Carrot Day) ದಿನವನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಕಣ್ಣಿನ (Eye) ಆರೋಗ್ಯಕ್ಕೆ ಕ್ಯಾರೆಟ್ ತುಂಬಾನೇ ಒಳ್ಳೆಯದು, ನಿಯಮಿತವಾಗಿ ಕ್ಯಾರೆಟ್ ಹಾಗೂ ಅದರ ಜ್ಯೂಸ್ ಸೇವನೆ ಮಾಡುವುದರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುವುದರ ಜೊತೆಗೆ ಕಣ್ಣಿನ ಆರೋಗ್ಯವೂ ವೃದ್ಧಿಸುತ್ತದೆ ಎಂದು ಹೇಳುವ ಮಾತನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಈ ಕ್ಯಾರೆಟ್ ತಿನ್ನೋದ್ರಿಂದ ನಿಜಕ್ಕೂ ಕಣ್ಣಿನ ದೃಷ್ಟಿ (Eye Sight) ವೃದ್ಧಿಸುತ್ತದಯೇ? ವಿಶ್ವ ಕ್ಯಾರೆಟ್ ದಿನದಂದು ಈ ಕುರಿತ ವಾಸ್ತವ ಸಂಗತಿಯ ಬಗ್ಗೆ ತಿಳಿಯಿರಿ.
ಕ್ಯಾರೆಟ್ ಮತ್ತು ದೃಷ್ಟಿ ಸುಧಾರಣೆಯ ನಡುವೆ ಯಾವುದೇ ನಿರ್ದಿಷ್ಟ ಸಂಬಂಧವಿಲ್ಲ. ಕ್ಯಾರೆಟ್ನಲ್ಲಿ ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ನಿಜ. ಆದರೆ ಕ್ಯಾರೆಟ್ ದೃಷ್ಟಿ ಸುಧಾರಣೆಗೆ ಸಹಕಾರಿ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದು ಡಾ. ಗುಂಜನ್ ದೇಶಪಾಂಡೆ (drgunjand) ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಕ್ಯಾರೆಟ್ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಎಂಬ ಈ ತಪ್ಪು ಕಲ್ಪನೆ ಎರಡನೇ ಮಹಾಯುದ್ಧದಷ್ಟು ಹಳೆಯದು. ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟೀಷ್ ರಾಯಲ್ ಏರ್ಫೋರ್ಸ್, ತನ್ನ ಪೈಲಟ್ಗಳಿಗೆ ಕತ್ತಲಲ್ಲಿ ದೃಷ್ಟಿ ಸುಧಾರಣೆಗೆ ಕ್ಯಾರೆಟ್ ತಿನ್ನಲು ಹೇಳುತ್ತಿತ್ತು. ಆ ಸಮಯದಲ್ಲಿ ಆಹಾರದ ಕೊರತೆಯೂ ಇದ್ದ ಕಾರಣ ಹೆಚ್ಚಾಗಿ ಕ್ಯಾರೆಟ್, ಆಲುಗಡ್ಡೆಯಂತಹ ತರಕಾರಿಗಳನ್ನೇ ಸೇವಿಸಲು ಕೊಡುತ್ತಿದ್ದರು. ಹೀಗೆ ಕಾಲಾನಂತರದಲ್ಲಿ ಕ್ಯಾರೆಟ್ ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿ ಎಂಬ ಸಿದ್ಧಾಂತವು ಬೆಳೆಯುತ್ತಾ ಹೋಯಿತು. ಅಂದಿನಿಂದ ಇಂದಿಗೂ ಸಹ ಕ್ಯಾರೆಟ್ ದೃಷ್ಟಿ ಸುಧಾರಣೆಗೆ ಸಹಕಾರಿ ಎಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ.
ಕ್ಯಾರೆಟ್ ಒಂದು ಪೌಷ್ಟಿಕಾಂಶಗಳಿಂದ ಹೇರಳವಾಗಿರುವ ತರಕಾರಿಯಾಗಿದ್ದು, ಇದು ಕಣ್ಣುಗಳಿಗೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ಕಣ್ಣಿಗೆ ಸಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ದೃಷ್ಟಿ ಸುಧಾರಿಸಲು ಸಹಕಾರಿ ಎಂಬುದು ತಪ್ಪು ಕಲ್ಪನೆಯಾಗಿದೆ. ಹೌದು ಜನರು ಕ್ಯಾರೆಟ್ ಕಣ್ಣುಗಳಿಗೆ ಒಳ್ಳೆಯದು ಎಂಬ ಪರಿಕಲ್ಪನೆಯನ್ನು ʼದೃಷ್ಟಿ ಸುಧಾರಣೆಗೆ ಸಹಕಾರಿʼ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಇದನ್ನೂ ಓದಿ: 2 ವರ್ಷದ ಮಗುವಿನಲ್ಲೂ ಹೆಚ್ಚುತ್ತಿದೆ ಮಲಬದ್ಧತೆ; ಕಾರಣವೇನು? ಪರಿಹಾರವೇನು?
• ನೈಸರ್ಗಿಕ ಬೆಳಕಿಗೆ ನಿಯಮಿತವಾಗಿ ಒಡ್ಡಿಕೊಳ್ಳುವುದು, ವಿಶೇಷವಾಗಿ ಮುಂಜಾನೆಯ ಸಮಯದಲ್ಲಿ
• ಅತಿಯಾಗಿ ಮೊಬೈಲ್, ಟಿವಿ ನೋಡದೆ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು
• ಪೌಷ್ಟಿಕ ಆಹಾರ ಸೇವನೆ
• ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು
• ಕಣ್ಣಿಗೆ ಸಂಬಂಧಿಸಿ ವ್ಯಾಯಾಮಗಳನ್ನು ಮಾಡುವುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:30 am, Fri, 4 April 25