
ಹೊಸ ಜೀವಕ್ಕೆ ಜೀವವಾಗುವ ಸ್ತ್ರೀ ಮಗುವಿನ ಪಾಲನೆಯಲ್ಲಿ ತನ್ನ ಆರೋಗ್ಯವನ್ನು ಕಡೆಗಣಿಸುವುದೇ ಹೆಚ್ಚು. ಆದರೆ ಆಕೆಯ ಜತೆಗಿರುವವರು ಹೆರಿಗೆ ಬಳಿಕ ಆಕೆಯನ್ನು ಹೇಗೆ ನೋಡಿಕೊಳ್ಳಬೇಕು, ಯಾವೆಲ್ಲ ಸಮಸ್ಯೆ ಆಕೆಗೆ ಎದುರಾಗಬಹುದು. ಯಾವೆಲ್ಲ ದೈಹಿಕ ಹಾಗೂ ಮಾನಸಿಕ ಬದಲಾವಣೆಗೆ ಆಕೆ ಒಳಗಾಗುತ್ತಾಳೆ ಎಂಬ ಬಗ್ಗೆ ತಿಳಿದುಕೊಂಡು ಆರೈಕೆ ಮಾಡಬೇಕು. ಮಗುವಿನ ಪಾಲನೆ ಜತೆಗೆ ಅಮ್ಮನ ಆರೈಕೆಯೂ ಮುಖ್ಯ. ಪ್ರತಿ ಬಾರಿ ಮಗುವಿಗೆ ಜನ್ಮ ನೀಡಿದಾಗಲೂ ಆಕೆಗೆ ಅದೊಂದು ಹೊಸ ಜನ್ಮ ನೆನಪಿರಲಿ.
9 ತಿಂಗಳ ಮಗುವಿಗೆ ಪೋಷಣೆಯನ್ನು ಕೊಟ್ಟು ಹೊರಜಗತ್ತಿಗೆ ಕರೆತರುವ ತಾಯಿಯ ದೇಹ ಸಾಕಷ್ಟು ಬದಲಾವಣೆಗೆ ಒಳಗಾಗಿರುತ್ತದೆ. ಹೀಗಾಗಿ ಹೆರಿಗೆ ನಂತರದ ಮೂರು ತಿಂಗಳು ತಾಯಿ ಆರೋಗ್ಯದ ಸೂಕ್ಷ್ಮ ಸಮಯ ಎನ್ನಬಹುದು. ಮಗುವಿನ ಸಂತಸ ಒಂದೆಡೆಯಾದರೆ ಆಕೆಯ ದೇಹ ಹಾಗೂ ಮನಸ್ಸಿನ್ನಲ್ಲಾಗುವ ಸಮಸ್ಯೆಗಳನ್ನು ಆಕೆ ಎದುರಿಸಬೇಕು. ಹೀಗಾಗಿ ಜತೆಗಿರುವವರು ಆಕೆಗೆ ಮಾನಸಿಕ ಬೆಂಬಲ ನೀಡುವ ಜತೆಗೆ ಆರೋಗ್ಯ ಸಮಸ್ಯೆ ಎದುರಿಸಲು ನೆರವಾಗಬೇಕು.
ಹೆರಿಗೆ ಬಳಿಕ ಕೆಲವು ವಾರಗಳ ಕಾಲ ರಕ್ತಸ್ರಾವವಿರುತ್ತದೆ. ಇದು ಸಾಮಾನ್ಯವಾಗಿ ವಾರಕಳೆದಂತೆ ಕಡಿಮೆಯಾಗುತ್ತದೆ. ಆದರೆ ರಕ್ತಸ್ರಾವದಲ್ಲಿ ದಿಢೀರ್ ಏರಿಕೆ , ಗಾಢ ವಾಸನೆ ಅಥವಾ ಹೆಪ್ಪುಗಟ್ಟಿದಂತಹ ಸ್ರಾವ ಉಂಟಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಮಗುವಿಗೆ ಹಾಲು ಕುಡಿಸುವುದು ತಾಯಿ ಆರೋಗ್ಯಕ್ಕೂ ಉತ್ತಮ. ಆದರೆ ಮೊಲೆತೊಟ್ಟಿನಲ್ಲಿ ಊತ, ಎದೆಯಲ್ಲಿ ಹಾಲಿನ ಕೊರತೆ, ಹಾಲು ತುಂಬಿ ಮೊಲೆ ಬಿಗಿಗೊಳ್ಳುವುದು ಈ ಸಮಸ್ಯೆ ಹಾಲು ಕುಡಿಸುವ ಪ್ರಕ್ರಿಯೆಯನ್ನು ಕಷ್ಟಗೊಳಿಸುತ್ತದೆ. ಈ ಸಮಸ್ಯೆಯನ್ನು ಸರಿ ಪಡಿಸಲು ಹಾಲು ಕುಡಿಸುವಾಗ ಮಗುವಿನ ಬಾಯಿ ತಾಯಿಯ ಮೊಲೆಗೆ ಸರಿಯಾಗಿ ಸೇರುವಂತೆ ನೋಡಿಕೊಳ್ಳಿ. 2-3 ಗಂಟೆಗೊಮ್ಮೆ ಮಗುವಿಗೆ ಹಾಲುಣಿಸುವುದು ಉತ್ತಮ. ಸೂಕ್ತ ಪ್ರಮಾಣದ ನೀರು ಸೇವನೆ, ಗ್ಯಾಲೆಕ್ಟೋಗೊಗಸ್ ಅಂಶವಿರುವ ಪದಾರ್ಥಗಳಾದ ಮೆಂತ್ಯೆ ಬೀಜ, ಬೆಳ್ಳುಳ್ಳಿ, ಸೋಂಪು, ಹಸಿರು ತರಕಾರಿಗಳಾದ ಬಸಳೆ, ಮೆಂತ್ಯೆ ಸೊಪ್ಪು ಸೇವನೆಯಿಂದ ಹಾಲು ಹೆಚ್ಚಿಸಲು ಸಾಧ್ಯವಾಗುತ್ತದೆ. ಬಿಸಿ ಶಾಖವನ್ನು ಪಡೆದುಕೊಳ್ಳುವುದರಿಂದಲೂ ಮೊಲೆಯಲ್ಲಿನ ಊತ ಕಡಿಮೆಯಾಗಬಹುದು. ಒಮ್ಮೆ ಮೊಲೆಯಲ್ಲಿ ನೋವು, ಊತ , ಕೆಂಪಾಗುವಿಕೆ ಕಂಡುಬಂದಲ್ಲಿ ವೈದ್ಯರ ನೆರವು ಪಡೆಯಿರಿ.
ಸಿಸೇರಿಯನ್ ಅಲ್ಲದ ಸಹಜ ಹೆರಿಗೆ ಆದಾಗ ಪೆರಿನಿಯಲ್ ನೋವು ಉಂಟಾಗುವುದು ಸಹಜ. ಐಸ್ ಪ್ಯಾಕ್ ಬಳಕೆ, ಬೆಚ್ಚಗಿನ ನೀರಿನ ಶಾಖ, ವೈದ್ಯರಿಂದ ಸೂಚಿಸಲ್ಪಟ್ಟ ನೋವು ನಿವಾರಕ ಮಾತ್ರೆಗಳು ಈ ಪೆರಿನಿಯಲ್ ನೋವಿಂದ ಗುಣಮುಖವಾಗಲು ಸಹಾಯವಾಗುತ್ತದೆ. ಶ್ರೊಣೀಯ ವ್ಯಾಯಾಮ (ಪೆಲ್ವಿಕ್ ಫ್ಲೋರ್ ವ್ಯಾಯಾಮ) ಪೆರಿನಿಯಲ್ ಗಾಯವನ್ನು ಗುಣಪಡಿಸಲು ನೆರವಾಗುತ್ತದೆ.ಆದರೆ ಈ ನೋವು ಬಹಳ ವಾರದವರೆಗೆ ಮುಂದುವರೆದರೆ ಅಥವಾ ಮೂತ್ರವಿಸರ್ಜನೆಯಲ್ಲಿ ತೊಡಕುಂಟಾದರೆ ವೈದ್ಯರನ್ನ ಭೇಟಿ ಮಾಡಿ.
ಹೆರಿಗೆ ಬಳಿಕ ಹಾರ್ಮೋನ್ ಅಸಮತೋಲನತೆ ಹಾಗೂ ನೋವಿಗೆ ತೆಗೆದುಕೊಳ್ಳುವ ಮಾತ್ರೆಗಳಿಂದ ಸಾಕಷ್ಟು ಮಹಿಳೆಯರಲ್ಲಿ ಮಲಬದ್ದತೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಫೈಬರ್ ಅಂಶಯುಕ್ತ ಆಹಾರ ಸೇವನೆ ಬಹು ಮುಖ್ಯ. ಸಾಕಷ್ಟು ನೀರು ಹಾಗೂ ನೀರಿನಾಂಶವಿರುವ ಹಣ್ಣು, ತರಕಾರಿಗಳ ಸೇವನೆ ಇರಲಿ. ವೈದ್ಯರ ಸೂಚನೆ ಮೇರೆಗೆ ಸ್ಟೂಲ್ ಸಾಫ್ಟನರ್ ಔಷಧಗಳನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: ಶಿಶುವಿಗೆ ತಾಯಿಯ ಎದೆಹಾಲು ಸಿಗದಿದ್ದರೆ ಏನೆಲ್ಲಾ ಆಗುತ್ತಾ ಗೊತ್ತಾ?
ಸಾಕಷ್ಟು ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ. ಇದು ಬಹುತೇಕ ಪ್ರಕರಣಗಳಲ್ಲಿ ತಾತ್ಕಾಲಿಕವಾಗಿದ್ದು ಸಮತೋಲಿತ ಆಹಾರ ಸೇವನೆಯಿಂದ ಈ ಸಮಸ್ಯೆಯಿಂದ ಮುಕ್ತವಾಗಬಹುದು.
ಪಿಪಿಡಿ ( ಪ್ರಸವ ನಂತರದ ಖಿನ್ನತೆ)
ಹೆರಿಗೆ ಬಳಿಕ ದೇಹದಲ್ಲಾಗುವ ಬದಲಾವಣೆ, ಹಾರ್ಮೋನ್ ಅಸಮತೋಲನ, ಶಿಶುವಿನ ಪಾಲನೆ ಹೀಗೆ ಹಲವು ರೀತಿಯ ಒತ್ತಡದಿಂದ ಮಹಿಳೆಯರಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಕೆಲವು ದಿನಗಳ ಕಾಲ ಸುಸ್ತು, ಪದೇ ಪದೇ ಮನಸ್ಥಿತಿ ಬದಲಾವಣೆ ಸಾಮಾನ್ಯ ಆದರೆ ಈ ಸಮಸ್ಯೆ ಬಹಳ ದಿನಗಳ ಕಾಲ ಮುಂದುವರೆದರೆ ಅದು ಪಿಪಿಡಿ ಸಮಸ್ಯೆಯ ಲಕ್ಷಣ. ಈ ಸಮಯದಲ್ಲಿ ಮಾನಸಿಕ ತಜ್ಞರ ಹಾಗೂ ಕುಟುಂಬದ ನೆರವು ಬಹಳ ಮುಖ್ಯ.
ತಾಯಂದಿರು ನಿದ್ದೆ ಕೊರತೆ, ಮಗುವಿನ ಆರೈಕೆಯತ್ತ ಗಮನ , ದೇಹದಲ್ಲಿನ ನೋವಿನಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಹೆರಿಗೆ ನಂತರ ತಾಯಿಗೆ ಆರಾಮ ಅತ್ಯವಶ್ಯಕ. ಉತ್ತಮವಾದ ರಿಲ್ಯಾಕ್ಸ್ ನೀಡುವ ವಿಧಾನವನ್ನು ಅಳವಡಿಸಿಕೊಳ್ಳಿ. ಪೋಷಕರು ತಾಯಿಗೆ ಸಾಧ್ಯವಾದಷ್ಟು ವಿಶ್ರಾಂತಿ ನೀಡಬೇಕು.
ಹೆರಿಗೆಯ ಬಳಿಕ ಸಾಕಷ್ಟು ಬದಲಾವಣೆಗೆ ಒಳಗಾಗುವ ದೇಹ ಮತ್ತು ಮನಸ್ಸಿಗೆ ಮತ್ತೆ ಸಹಜ ಸ್ಥಿತಿಗೆ ಮರಳಲು ಕೆಲ ಕಾಲ ಬೇಕಾಗುತ್ತಾದೆ. ಹೀಗಾಗಿ ಈ ಸಂದರ್ಭದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಯಾವುದೇ ರೀತಿಯ ಸಮಸ್ಯೆ ಕಂಡುಬರುತ್ತಿದ್ದರೂ ವೈದ್ಯರ ಹಾಗೂ ಕುಟುಂಬಸ್ಥರ ಜತೆ ಮುಕ್ತವಾಗಿ ಮಾತನಾಡಿ. ಮಗುವಿನ ಲಾಲನೆ ಪೋಷಣೆ ಜತೆಗೆ ತಾಯಿ ಆರೋಗ್ಯದ ಕಡೆಯೂ ಗಮನ ಹರಿಸುವುದು ಬಹಳ ಮುಖ್ಯ.
ಡಾ. ಲಿನ್‌ಸೆಲ್ ಟಿ, ಒಬಿಜಿ ಕನ್ಸಲ್ಟೆಂಟ್ , ಕೆಎಂಸಿ ಆಸ್ಪತ್ರೆ ಡಾ.ಬಿ ಆರ್ ಅಂಬೇಡ್ಕರ್ ವೃತ್ತ ಮಂಗಳೂರು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ