ಮಧುಮೇಹಕ್ಕೆ ಸಿಹಿ ಒಂದೇ ಕಾರಣವೇ? ಡಯಾಬಿಟಿಸ್‌ ಹಿಂದಿನ ಪ್ರಮುಖ ಕಾರಣಗಳಿವು

ಮಧುಮೇಹಕ್ಕೆ ಸಿಹಿ ಪದಾರ್ಥಗಳ ಸೇವನೆಯೊಂದೇ ಕಾರಣವಲ್ಲ. ಅನುವಂಶಿಕತೆ, ಬೊಜ್ಜು, ದೈಹಿಕ ಚಟುವಟಿಕೆಯ ಕೊರತೆ ಮತ್ತು ಇನ್ಸುಲಿನ್ ನಿರೋಧಕತೆಯೂ ಪ್ರಮುಖ ಪಾತ್ರ ವಹಿಸುತ್ತವೆ. ಟೈಪ್‌ 1 ಮತ್ತು ಟೈಪ್‌ 2 ಮಧುಮೇಹದ ಕಾರಣಗಳು ವಿಭಿನ್ನವಾಗಿವೆ. ಅತಿಯಾದ ಬಾಯಾರಿಕೆ, ಪದೇಪದೆ ಮೂತ್ರ ವಿಸರ್ಜನೆ, ಆಯಾಸ ಮತ್ತು ಕಾರಣವಿಲ್ಲದೆ ತೂಕ ಇಳಿಯುವುದು ಮುಂತಾದ ಲಕ್ಷಣಗಳು ಕಂಡುಬಂದರೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಮಧುಮೇಹಕ್ಕೆ ಸಿಹಿ ಒಂದೇ ಕಾರಣವೇ? ಡಯಾಬಿಟಿಸ್‌ ಹಿಂದಿನ ಪ್ರಮುಖ ಕಾರಣಗಳಿವು
Does Eating Sugar Cause Diabetes
Image Credit source: Getty Images

Updated on: Oct 13, 2026 | 6:08 PM

ಸಾಕಷ್ಟು ಜನರು ತಾವು ಸಿಹಿ ಪದಾರ್ಥವನ್ನು ಹೆಚ್ಚಾಗಿ ತಿಂದರೇ ಮಾತ್ರ ಡಯಾಬಿಟಿಸ್‌ /ಮಧುಮೇಹ ಬರುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ಡಯಾಬಿಟಿಸ್‌ ಸಮಸ್ಯೆಗೆ ಸಿಹಿ ಪದಾರ್ಥಗಳು ಮಾತ್ರ ಕಾರಣವಲ್ಲ. ಮಧುಮೇಹ ಎಂಬ ಸಮಸ್ಯೆ ಜೆನೆಟಿಕ್‌, ಜೀವನಶೈಲಿ, ಇನ್ಸುಲಿನ್‌ ರೆಸಿಸ್ಟೆನ್ಸ್‌, ಅಟೋ ಇಮ್ಯೂನ್‌ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತವೆ. ಸಿಹಿ ತಿನ್ನದೇ ಇದ್ದರೆ ಮಧುಮೇಹ ಬರುವುದಿಲ್ಲ ಎಂಬ ಕಲ್ಪನೆ ಬಿಟ್ಟು ದೇಹದ ಸಂಪೂರ್ಣ ಆರೊಗ್ಯದ ಮೇಲೆ ಗಮನ ವಹಿಸುವುದು ಮುಖ್ಯ. ಈ ಹಿಂದೆ 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ಕಾಯಿಲೆ, ಈಗ ಹದಿಹರೆಯದವರಲ್ಲಿ ಹಾಗೂ ಯುವಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಇದಕ್ಕೆ ಕಾರಣ ಮತ್ತು ಯಾವ ರೀತಿಯ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದರ ಕುರಿತು ಶೃಂಗೇರಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟೆಂಟ್‌ ಫಿಸಿಶಿಯನ್‌ ಡಾ ಪೂಜಾ ಭಟ್ ಅವರು ಮಾಹಿತಿ ನೀಡಿದ್ದಾರೆ.

ಮಧುಮೇಹಕ್ಕೆ ಪ್ರಮುಖ ಕಾರಣಗಳು

ಅತಿಯಾದ ಸಿಹಿ ಸೇವನೆ: ಸಾಮಾನ್ಯವಾಗಿ ಅತಿಯಾದ ಸಿಹಿ ಪದಾರ್ಥಗಳ ಸೇವೆಯಿಂದಲೂ ಮಧುಮೇಹ ಸಮಸ್ಯೆ ಕಂಡುಬರುವುದಾದರೂ ಪ್ರಿ ಡಯಾಬಿಟಿಕ್‌ ಅಥವಾ ದೇಹದಲ್ಲಿ ಸಕ್ಕರೆ ಮಟ್ಟ ಗಡಿಯಲ್ಲಿ ಇರುವವರಿಗೆ ಅಪಾಯ ಹೆಚ್ಚು, ಮಧುಮೇಹ ಸಮಸ್ಯೆ ಇಲ್ಲದಿರುವವರಿಗೆ ಅಪಾಯ ಕಡಿಮೆ. ಹಾಗೇ ಇದೊಂದೇ ಕಾರಣವಲ್ಲ, ಇದರ ಜೊತೆಗೆ ಅಸಮತೋಲಿತ ಜೀವನಶೈಲಿ ಕೂಡ ಮಧುಮೇಹ ಸಮಸ್ಯೆಗೆ ಪ್ರಮುಖ ಕಾರಣ.

ಅನುವಂಶಿಕತೆ: ತಂದೆ- ತಾಯಿ, ಅಜ್ಜ- ಅಜ್ಜಿ ಅಥವಾ ರಕ್ತಸಂಬಂಧಿಗಳಲ್ಲಿ ಮಧುಮೇಹ ಸಮಸ್ಯೆ ಇದ್ದರೆ, ಮುಂದಿನ ಪೀಳಿಗೆಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಸಂಧಿವಾತ ಎಂದರೇನು? ಸಾಮಾನ್ಯ ಕೀಲುನೋವು ಮತ್ತು ಆರ್ಥ್ರೈಟಿಸ್ ನಡುವಿನ ವ್ಯತ್ಯಾಸ ತಿಳಿಯಿರಿ

ಸ್ಥೂಲಕಾಯ (ದಪ್ಪಗಿರುವುದು): ದೇಹದ ತೂಕ (BMI – Body Mass Index) ಹೆಚ್ಚಿರುವುದು ಮಧುಮೇಹಕ್ಕೆ ಪ್ರಮುಖ ಕಾರಣ.

ಗರ್ಭಧಾರಣೆಯ ಮಧುಮೇಹ (Gestational Diabetes): ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮಧುಮೇಹವು ಹೆರಿಗೆಯ ನಂತರ ಕಡಿಮೆಯಾಗಬಹುದು ಅಥವಾ ಕೆಲವರಲ್ಲಿ ನಂತರದ ದಿನಗಳಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು.

ಜಡ ಜೀವನಶೈಲಿ (Sedentary Lifestyle): ದೈಹಿಕ ಶ್ರಮವಿಲ್ಲದ ಜೀವನಶೈಲಿ ಇನ್ಸುಲಿನ್ ನಿರೋಧಕತೆಗೆ ಕಾರಣವಾಗುತ್ತದೆ.

ಔಷಧಗಳು ಮತ್ತು ಇತರ ತೊಂದರೆಗಳು: ಕೆಲವು ಗಂಭೀರ ಕಾಯಿಲೆಯ ಔಷಧಗಳು, ಹಾರ್ಮೋನ್ ಅಸಮತೋಲನ, ಮೇದೋಜೀರಕ ಗ್ರಂಥಿಯ ತೊಂದರೆ (Pancreatitis) ಹಾಗೂ ಅತಿಯಾದ ಮದ್ಯಪಾನವೂ ಮಧುಮೇಹಕ್ಕೆ ಕಾರಣವಾಗಬಹುದು.

ಇನ್ನು ಟೈಪ್‌ 1 ಡಯಾಬಿಟಿಸ್‌ ಅಟೋಇಮ್ಯುನ್‌ ಸಮಸ್ಯೆಯಾಗಿರುವುದರಿಂದ ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ, ಯುವಕರಲ್ಲಿ ಕಂಡುಬರುತ್ತದೆ. ಈ ಸಮಸ್ಯೆಗೆ ಆಹಾರ ಪದ್ದತಿ, ಸಿಹಿ ಸೇವನೆ ಕಾರಣವಾಗಿರುವುದಿಲ್ಲ. ಆದರೆ ಟೈಪ್‌ 2 ಡಯಾಬಿಟಿಸ್‌ಗೆ ಸಾಮಾನ್ಯವಾಗಿ ಜೀವನಶೈಲಿ, ಬೊಜ್ಜು, ಆನುವಂಶಿಕ ಮಧುಮೇಹ ಸಮಸ್ಯೆ, ಆಹಾರ ಪದ್ದತಿಯೂ ಕಾರಣವಾಗುತ್ತದೆ. ಅತಿಯಾಗಿ ಸಂಸ್ಕರಿತ ಆಹಾರ ಸೇವನೆ, ರಿಫೈನ್ಡ್‌ ಕಾರ್ಬ್ಸ್‌ಗಳ ಬಳಕೆ, ಸಕ್ಕರೆಯುಕ್ತ ಪಾನೀಯಗಳ ಸೇವನೆ ಪ್ರಮುಖ ಕಾರಣವಾಗಿವೆ.

ಗಮನಿಸ ಬೇಕಾದ ಪ್ರಮುಖ ಲಕ್ಷಣಗಳು!

  • ಅತಿಯಾದ ಬಾಯಾರಿಕೆ ಮತ್ತು ಹಸಿವು
  • ಅತಿಯಾದ ಆಯಾಸ ಮತ್ತು ನಿರಾಸಕ್ತಿ
  • ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು
  • ದಿಢೀರನೆ ತೂಕ ಇಳಿಕೆಯಾಗುವುದು
  • ಜನನಾಂಗದಲ್ಲಿ ಸೋಂಕು (Infection) ಅಥವಾ ತುರಿಕೆ
  • ಪಾದದ ಅಡಿಭಾಗದಲ್ಲಿ ಉರಿ
  • ಗಾಯಗಳು ಬೇಗನೆ ಒಣಗದಿರುವುದು

ಈ ಲಕ್ಷಣಗಳು ಯಾವುದೇ ವಯಸ್ಸಿನಲ್ಲಿ ಕಂಡುಬಂದಲ್ಲಿ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಅಗತ್ಯ. ಮಧುಮೇಹ ನಿಯಂತ್ರಣಕ್ಕೆ ಸಮಸ್ಯೆಯ ಲಕ್ಷಣಗಳನ್ನು ಗಮನಿಸುವುದು ಹಾಗೇ ಶೀಘ್ರ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಒಳಗಾಗುವುದು ಉತ್ತಮ. ಇದರಿಂದ ಮಧುಮೇಹ ಸಮಸ್ಯೆಯಿಂದ ಉಂಟಾಗುವ ವಿವಿಧ ಆರೋಗ್ಯ ಸಮಸ್ಯೆಗಳಾದ ಹೃದಯಾಘಾತ, ಸ್ಟ್ರೋಕ್‌ ನಂತಹ ಗಂಭೀರ ಕಾಯಿಲೆಗಳು ಬರುವುದನ್ನು ತಡೆಯಬಹುದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us