Shigella Infection: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಕೇರಳದಲ್ಲಿ ಶಿಗೆಲ್ಲೋಸಿಸ್ ಎಂಬ ಸೋಂಕು ಆರೋಗ್ಯ ಇಲಾಖೆ ನಿದ್ದೆಗೆಡುವಂತೆ ಮಾಡಿದೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಈ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಸೋಂಕು ಹರಡಬಹುದಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಐದು ವರ್ಷದೊಳಗಿನ ಮಕ್ಕಳಿಗೆ, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿಯೂ ಇದು ವೇಗವಾಗಿ ಹರಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

Shigella Infection: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?
Shigellosis Cases Rise In Kerala
Image Credit source: Getty images

Updated on: Jun 12, 2026 | 6:48 PM

ಕೇರಳದಲ್ಲಿ ಶಿಗೆಲ್ಲೋಸಿಸ್ (Shigellosis) ಎಂಬ ಅತಿಸಾರ ಸಂಬಂಧಿತ ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳ ಜೊತೆಗೆ ವೆಸ್ಟ್ ನೈಲ್ ಜ್ವರ ಕೂಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ. ಈ ಎರಡೂ ಕಾಯಿಲೆಗಳಿಗೆ ಪರಸ್ಪರ ಸಂಬಂಧವಿಲ್ಲವಾದರೂ ಜನರು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲಿಯೂ ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಸೋಂಕು ಹರಡಬಹುದಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ದಿ ಹಿಂದೂ ವರದಿ ಮಾಡಿರುವ ಪ್ರಕಾರ ಕೇರಳದಲ್ಲಿ ಜೂನ್ 7ರ ವರೆಗೆ 85 ಶಿಗೆಲ್ಲೋಸಿಸ್ ಪ್ರಕರಣಗಳು ದೃಢಪಟ್ಟಿದ್ದು 70ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ದಾಖಲಾಗಿವೆ. ವಯನಾಡು ಕೋಝಿಕ್ಕೋಡ್ ಅಲಪ್ಪುಝಾ, ಮಲಪ್ಪುರಂ ಜಿಲ್ಲೆಗಳಲ್ಲಿ ಸೋಂಕು ಹೆಚ್ಚು ಕಂಡುಬರುತ್ತಿದೆ. ವಯನಾಡಿನ ಮಾರ್ಬಾಸೆಲಿಯೋಸ್ ಶಾಲೆಯಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೂ ಕೆಲವರಿಗೆ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳಿಗೆ ಹೆಚ್ಚಿನ ಅಪಾಯ:

ಆರೋಗ್ಯಕರ ವಯಸ್ಕರಲ್ಲಿ ಈ ಸೋಂಕು ಸಾಮಾನ್ಯವಾಗಿ ಸ್ವಯಂ ನಿಯಂತ್ರಿತವಾಗಿದ್ದರೂ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಅಪಾಯಕಾರಿಯಾಗಬಹುದು. ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಹೆಚ್ಚಿನ ಅಪಾಯವಿದೆ. ಈ ವರ್ಷ ಈಗಾಗಲೇ ಇಬ್ಬರು ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಿಗೆಲ್ಲೋಸಿಸ್ ಲಕ್ಷಣಗಳು ಯಾವುವು?

ಸೋಂಕು ತಗುಲಿದ ಒಂದು ಅಥವಾ ಎರಡು ದಿನಗಳೊಳಗೆ ಲಕ್ಷಣಗಳು ಕಾಣಿಸಬಹುದು. ಮುಖ್ಯ ಲಕ್ಷಣಗಳು:

  • ಜ್ವರ
  • ಅತಿಸಾರ
  • ವಾಂತಿ
  • ವಾಕರಿಕೆ
  • ಮಲದಲ್ಲಿ ರಕ್ತ
  • ಹೊಟ್ಟೆನೋವು
  • ಪದೇ ಪದೇ ಶೌಚಕ್ಕೆ ಹೋಗಬೇಕು ಎನಿಸುವುದು

ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯ ಇಲಾಖೆ ಕೈಗಳನ್ನು ಸಾಬೂನಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದೆ. ವಿಶೇಷವಾಗಿ ಊಟ ಮಾಡುವ ಮೊದಲು ಹಾಗೂ ಶೌಚಾಲಯ ಬಳಕೆ ನಂತರ ಸ್ವಚ್ಛತೆ ಕಾಪಾಡಬೇಕು. ಸೋಂಕಿತ ವ್ಯಕ್ತಿಗಳ ಬಟ್ಟೆ, ಪಾತ್ರೆ ಮತ್ತು ಹಾಸಿಗೆಗಳನ್ನು ಪ್ರತ್ಯೇಕವಾಗಿ ಬಳಸಬೇಕು. ಲಕ್ಷಣಗಳು ಕಡಿಮೆಯಾದ ಬಳಿಕವೂ ಕನಿಷ್ಠ ಎರಡು ವಾರಗಳ ಕಾಲ ಸಾರ್ವಜನಿಕ ಆಹಾರ ವಿತರಣೆ ಅಥವಾ ಹೋಟೆಲ್ ಆಹಾರವನ್ನು ತಪ್ಪಿಸುವುದು ಒಳಿತು. ಕುಡಿಯುವ ನೀರನ್ನು ಕಡ್ಡಾಯವಾಗಿ ಕುದಿಸಿ ಬಳಸಬೇಕು. ಬೇಯಿಸದ ಆಹಾರ ಮತ್ತು ನಿನ್ನೆ, ಮೊನ್ನೆ ಮಾಡಿಟ್ಟ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಉತ್ತಮ. ಮಳೆಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Wed, 10 June 26

Follow Us