ಮಕ್ಕಳಲ್ಲೂ ಹೆಚ್ಚುತ್ತಿದೆ ಫ್ಯಾಟಿ ಲಿವರ್! ಮಕ್ಕಳ ಬಗ್ಗೆ ಆತಂಕಕಾರಿ ವರದಿ ಬಹಿರಂಗ
ಮುಖ್ಯವಾಗಿ, ಫ್ಯಾಟಿ ಲಿವರ್ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಮಕ್ಕಳ ಆರೋಗ್ಯಕರ ಜೀವನಶೈಲಿಗೆ ಬಾಲ್ಯದಿಂದಲೇ ಆದ್ಯತೆ ನೀಡುವುದು ಅತ್ಯಂತ ಮುಖ್ಯ. ಮಕ್ಕಳಲ್ಲಿ ತೂಕ ಹೆಚ್ಚಳ, ಹೊಟ್ಟೆಯ ಸುತ್ತ ಕೊಬ್ಬು ಅಥವಾ ಡಯಾಬಿಟಿಸ್‌ನಂತಹ ಅಪಾಯದ ಅಂಶಗಳಿದ್ದರೆ ಮಕ್ಕಳ ವೈದ್ಯರ ಸಲಹೆ ಪಡೆಯುವುದು ಉತ್ತಮ. ಅಗತ್ಯವಿದ್ದರೆ ವೈದ್ಯರು ಸೂಕ್ತ ಪರೀಕ್ಷೆಗಳನ್ನು ಸೂಚಿಸಬಹುದು.

ಫ್ಯಾಟಿ ಲಿವರ್ ಎಂದರೆ ಕೇವಲ ದೊಡ್ಡವರ ಆರೋಗ್ಯ ಸಮಸ್ಯೆ ಎಂದುಕೊಂಡಿದ್ದರೆ ಇದು ತಪ್ಪು. ಇತ್ತೀಚಿನ ಆರೋಗ್ಯ ಸಂಶೋಧನೆಗಳು ಮಕ್ಕಳಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರುವ ಆತಂಕಕಾರಿ ಚಿತ್ರಣವನ್ನು ಮುಂದಿಟ್ಟಿವೆ. ಭಾರತದಲ್ಲಿ ಸುಮಾರು 35.4% ಮಕ್ಕಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಕಂಡುಬಂದಿದೆ ಎಂದು ಹಲವು ಅಧ್ಯಯನಗಳ ವಿಶ್ಲೇಷಣೆ ತಿಳಿಸಿದೆ. ಅದೇ ವೇಳೆ, ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳಲ್ಲಿ ಈ ಪ್ರಮಾಣ 63.4% ಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು, ದೈಹಿಕ ಚಟುವಟಿಕೆಯ ಕೊರತೆ, ಅಸಮತೋಲಿತ ಆಹಾರ, ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಟೈಪ್-2 ಡಯಾಬಿಟಿಸ್‌ನಂತಹ ಸಮಸ್ಯೆಗಳು ಫ್ಯಾಟಿ ಲಿವರ್ ಅಪಾಯವನ್ನು ಹೆಚ್ಚಿಸುತ್ತಿವೆ. ಹಾಗಾದರೆ ಮಕ್ಕಳಲ್ಲಿ ಫ್ಯಾಟಿ ಲಿವರ್ ಏಕೆ ಹೆಚ್ಚಾಗುತ್ತಿದೆ ಮತ್ತು ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಇದನ್ನು ತಡೆಯಲು ಪೋಷಕರು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಫ್ಯಾಟಿ ಲಿವರ್ ಕಾಯಿಲೆಯನ್ನು ಈಗ ಹೆಚ್ಚು ನಿಖರವಾಗಿ MASLD (Metabolic Dysfunction-Associated Steatotic Liver Disease) ಎಂದು ಕರೆಯಲಾಗುತ್ತದೆ. ಡಾ. ಪಿಯೂಷ್ ವಿಶ್ವಕರ್ಮಾ (ಕನ್ಸಲ್ಟೆಂಟ್, ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್, ಆರ್‌ಜಿ ಹಾಸ್ಪಿಟಲ್ಸ್) ಅವರ ಪ್ರಕಾರ, ಭಾರತದಲ್ಲಿ ಸುಮಾರು 16%ರಿಂದ 32% ಜನಸಂಖ್ಯೆ ಈ ಸಮಸ್ಯೆಯಿಂದ ಪ್ರಭಾವಿತರಾಗಿರಬಹುದು. 26,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 50 ಅಧ್ಯಯನಗಳ ವಿಶ್ಲೇಷಣೆಯಲ್ಲಿ, ಭಾರತದಲ್ಲಿ ವಯಸ್ಕರಲ್ಲಿ NAFLD ಪ್ರಮಾಣ ಸುಮಾರು 38.6% ಎಂದು ವರದಿಯಾಗಿದೆ. ಡಯಾಬಿಟಿಸ್ ಅಥವಾ ಬೊಜ್ಜು ಇರುವವರಲ್ಲಿ ಈ ಪ್ರಮಾಣ 52.8% ಕ್ಕೆ ಏರಿದೆ.
ಮಕ್ಕಳಲ್ಲಿ ಫ್ಯಾಟಿ ಲಿವರ್ ಏಕೆ ಹೆಚ್ಚುತ್ತಿದೆ?
ಸಾಮಾನ್ಯವಾಗಿ ಮಕ್ಕಳ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳು ಪ್ರಮುಖ ಕಾರಣಗಳಾಗಿವೆ. ಗಂಟೆಗಟ್ಟಲೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು, ಹೊರಾಂಗಣ ಆಟಗಳ ಕೊರತೆ, ಹೆಚ್ಚು ಕ್ಯಾಲೊರಿಯ ಆಹಾರ ಸೇವನೆ ಮತ್ತು ಸಕ್ಕರೆ ಹೆಚ್ಚಿರುವ ಪಾನೀಯಗಳ ಸೇವನೆ ಮಕ್ಕಳ ತೂಕ ಹೆಚ್ಚಲು ಕಾರಣವಾಗಬಹುದು. ಬೊಜ್ಜು ಹೆಚ್ಚಾದಂತೆ ಹೊಟ್ಟೆಯ ಸುತ್ತ ಕೊಬ್ಬು, ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ. ಇವುಗಳೆಲ್ಲವೂ ಫ್ಯಾಟಿ ಲಿವರ್‌ಗೆ ಸಂಬಂಧ ಹೊಂದಿವೆ.
ಬೊಜ್ಜಿನ ಮಕ್ಕಳಲ್ಲಿ ಅಪಾಯ ಹೆಚ್ಚು;
ಅಧ್ಯಯನದ ವಿಶ್ಲೇಷಣೆಯ ಪ್ರಕಾರ, ಸಾಮಾನ್ಯ ಮಕ್ಕಳಿಗಿಂತ ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳಲ್ಲಿ ಫ್ಯಾಟಿ ಲಿವರ್ ಅಪಾಯ ಹೆಚ್ಚು. ಬೊಜ್ಜು ಹೊಂದಿರುವ ಮಕ್ಕಳಲ್ಲಿ ಫ್ಯಾಟಿ ಲಿವರ್ ಪ್ರಮಾಣ 63.4ರವರೆಗೆ ಕಂಡುಬಂದಿದೆ ಎಂದು ವರದಿಯಾಗಿದೆ. ಆದ್ದರಿಂದ ಮಕ್ಕಳ ತೂಕ ಹೆಚ್ಚಾಗುತ್ತಿದ್ದರೆ ಅದನ್ನು ಕೇವಲ ಬೆಳವಣಿಗೆಯ ಭಾಗ ಎಂದು ನಿರ್ಲಕ್ಷಿಸದೆ, ಅವರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆ ಪೋಷಕರು ಗಮನ ಹರಿಸುವುದು ಅಗತ್ಯ.
ಐಟಿ ಉದ್ಯೋಗಿಗಳಲ್ಲೂ ಅಪಾಯ ಹೆಚ್ಚು
ಫ್ಯಾಟಿ ಲಿವರ್ ಮಕ್ಕಳಿಗಷ್ಟೇ ಸೀಮಿತವಲ್ಲ. ದೀರ್ಘಕಾಲ ಕುಳಿತು ಕೆಲಸ ಮಾಡುವ ವಯಸ್ಕರಲ್ಲಿಯೂ ಇದರ ಅಪಾಯ ಹೆಚ್ಚಿರಬಹುದು. ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ದೀರ್ಘ ಸಮಯ ಕುಳಿತು ಕೆಲಸ ಮಾಡುವುದು, ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಅಪಾಯವನ್ನು ಹೆಚ್ಚಿಸಬಹುದು. ಡಯಾಬಿಟಿಸ್, ಹೊಟ್ಟೆಯ ಸುತ್ತ ಹೆಚ್ಚುವರಿ ಕೊಬ್ಬು, ಇನ್ಸುಲಿನ್ ರೆಸಿಸ್ಟೆನ್ಸ್, ಬೊಜ್ಜು ಮತ್ತು ಹೈ ಬ್ಲಡ್ ಪ್ರೆಶರ್ ಪ್ರಮುಖ ಅಪಾಯದ ಅಂಶಗಳಾಗಿವೆ.
ಫ್ಯಾಟಿ ಲಿವರ್ ತಡೆಯಲು ಏನು ಮಾಡಬೇಕು?
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿ ರೂಢಿಸಬೇಕು. ಪ್ಯಾಕೆಟ್ ಸ್ನ್ಯಾಕ್ಸ್, ಜಂಕ್ ಫುಡ್, ಹೆಚ್ಚು ಸಕ್ಕರೆ ಇರುವ ಪಾನೀಯಗಳು ಮತ್ತು ಅತಿಯಾದ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಇದರ ಜೊತೆಗೆ ಪ್ರತಿದಿನ ವಯಸ್ಸಿಗೆ ಅನುಗುಣವಾಗಿ ದೈಹಿಕ ಚಟುವಟಿಕೆ, ಹೊರಾಂಗಣ ಆಟ ಮತ್ತು ವ್ಯಾಯಾಮಕ್ಕೆ ಸಮಯ ನೀಡಬೇಕು. ಹಣ್ಣು, ತರಕಾರಿ, ಬೇಳೆಕಾಳುಗಳು, ಸಂಪೂರ್ಣ ಧಾನ್ಯಗಳು ಮತ್ತು ಸೂಕ್ತ ಪ್ರಮಾಣದ ಪ್ರೋಟೀನ್ ಇರುವ ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




