
ನಮ್ಮ ಕಿಡ್ನಿ (Kidney) ಅಥವಾ ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲ ಅಗತ್ಯ ಪೋಷಕಾಂಶಗಳ ಸಮತೋಲನವನ್ನು ಸಹ ಕಾಪಾಡಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ನಮ್ಮ ದೇಹದ ಪ್ರಮುಖ ಅಂಗವಾದ ಕಿಡ್ನಿ ನಮಗೆ ತಿಳಿಯದಂತೆ ಒತ್ತಡ ಅನುಭವಿಸುತ್ತಿರಬಹುದು. ಅದರ ಹಾನಿಯ ಲಕ್ಷಣಗಳನ್ನು ನಾವು ಅರ್ಥಮಾಡಿಕೊಳ್ಳದಿರಬಹುದು. ಈ ರೀತಿಯಾಗಿ ನಾವು ಮಾಡುವ ನಿರ್ಲಕ್ಷ್ಯವು ಮುಂದಿನ ದಿನಗಳಲ್ಲಿ ನಮಗೆ ಅಪಾಯಕಾರಿಯಾಗಬಹುದು. ಹಾಗಾಗಿ ನಮ್ಮ ಮೂತ್ರಪಿಂಡದ ಆರೋಗ್ಯದ (Kidney Health) ಬಗ್ಗೆ ನಾವು ಆದಷ್ಟು ಜಾಗರೂಕರಾಗಿರುವುದು ಬಹಳ ಅವಶ್ಯ. ಹಾಗಾದರೆ ನಮ್ಮ ಕಿಡ್ನಿ ಆರೋಗ್ಯವಾಗಿಲ್ಲ ಎಂಬುದನ್ನು ನಾವು ಯಾವ ರೀತಿ ತಿಳಿದುಕೊಳ್ಳಬೇಕು? ಲಕ್ಷಣಗಳು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಅಥವಾ ಕಣ್ಣಿನ ಸುತ್ತ ಊತ ಕಂಡು ಬರುವುದು, ಅಂದರೆ ಮುಖ ಊದಿಕೊಂಡಂತಿರುವುದು. ಈ ರೀತಿಯಾದಾಗ ಮೂತ್ರಪಿಂಡ ಅಥವಾ ನಿಮ್ಮ ಕಿಡ್ನಿ ಆರೋಗ್ಯವಾಗಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಏಕೆಂದರೆ ಮೂತ್ರಪಿಂಡಗಳು ದೇಹದಲ್ಲಿನ ಸೋಡಿಯಂ ಮತ್ತು ದ್ರವದ ಸಮತೋಲನವನ್ನು ನಿಯಂತ್ರಿಸುತ್ತವೆ. ಅವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅಂಗಾಂಶಗಳಲ್ಲಿ ದ್ರವವು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದು ಊತಕ್ಕೆ ಕಾರಣವಾಗುತ್ತದೆ.
ಬೆಳಿಗ್ಗೆ ಎದ್ದ ನಂತರ ಮೂತ್ರ ಮಾಡುವಾಗ ಅದರ ಬಣ್ಣ ಬದಲಾಗಿದ್ದಾರೆ ಅಥವಾ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಮೂತ್ರಪಿಂಡದ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಮೂತ್ರಪಿಂಡಗಳು ತ್ಯಾಜ್ಯವನ್ನು ಹೊರಹಾಕುವಾಗ, ಅವು ದೇಹದಲ್ಲಿ ಅಗತ್ಯವಾದ ಪ್ರೋಟೀನ್‌ಗಳನ್ನು ಸಹ ಉಳಿಸಿಕೊಳ್ಳುತ್ತವೆ. ಆದರೆ ಅವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಪ್ರೋಟೀನ್ ಸೋರಿಕೆಯಾಗಲು ಪ್ರಾರಂಭಿಸುತ್ತದೆ. ಇದು ಈ ಸಮಸ್ಯೆಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಬೆಳಿಗ್ಗೆ ಏಳುವಾಗ ನಾವು ಫ್ರೆಶ್ ಆಗಿರಬೇಕು ಆದರೆ ಬೆಳಿಗ್ಗೆ ಏಳುತ್ತಲೇ ದಣಿವಾದಂತೆ ಆಗುವುದು ಕಿಡ್ನಿ ಆರೋಗ್ಯವಾಗಿಲ್ಲ ಎಂಬುದರ ಸೂಚನೆಯಾಗಿರಬಹುದು. ಸಾಮಾನ್ಯವಾಗಿ ನಮ್ಮ ಕಿಡ್ನಿ ಅಥವಾ ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರಹಾಕುತ್ತವೆ. ಆದರೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಈ ವಿಷ ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ಆಯಾಸಕ್ಕೆ ಕಾರಣವಾಗಬಹುದು.
ಮೂತ್ರ ಮಾಡುವಾಗ ರಕ್ತ ಕಂಡು ಬಂದರೆ ಸಾಮಾನ್ಯವಾಗಿ ಜನರು ಭಯಪಡುತ್ತಾರೆ. ಈ ರೀತಿಯ ಸಮಸ್ಯೆ ಮೂತ್ರನಾಳದ ಸೋಂಕಿನಿಂದ ಉಂಟಾಗಬಹುದು. ಆದರೆ ಮೂತ್ರ ವಿಸರ್ಜನೆ ಮಾಡುವಾಗ ನೋವು ಇಲ್ಲದೆ ರಕ್ತ ಹೋಗುತ್ತಿದ್ದರೆ ಅದು ಮೂತ್ರಪಿಂಡದ ಜೀವಕೋಶ ಕ್ಯಾನ್ಸರ್ ಅಥವಾ ಮೂತ್ರಕೋಶ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯ ಲಕ್ಷಣವೂ ಆಗಿರಬಹುದು.
ಇದನ್ನೂ ಓದಿ: ಹೃದಯಾಘಾತಕ್ಕೆ ಇದುವೇ ಪ್ರಮುಖ ಕಾರಣಗಳು, ಇಲ್ಲಿದೆ ನೋಡಿ
ಮೂತ್ರಪಿಂಡಕ್ಕೆ ಹಾನಿಯಾದಾಗ ದೇಹದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಒಣಗಬಹುದು ಅಥವಾ ತುರಿಕೆ ಕಂಡು ಬರಬಹುದು. ಅದರಲ್ಲಿಯೂ ಬೆಳಿಗ್ಗೆ ಈ ಸಮಸ್ಯೆ ಕಂಡುಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಏಕೆಂದರೆ ನಮ್ಮ ಮೂತ್ರಪಿಂಡದ ಕಾರ್ಯವು ದುರ್ಬಲಗೊಂಡಾಗ, ದೇಹದಲ್ಲಿನ ಈ ಎರಡು ಅಂಶಗಳ ಸಮತೋಲನವು ತೊಂದರೆಗೊಳಗಾಗುತ್ತದೆ ಹೀಗಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ